06/07/2026

Law Guide Kannada

Online Guide

ಖಾಸಗಿ ದೂರು ಪ್ರಕರಣಗಳಲ್ಲಿ ಆರೋಪಿಯ ಬಂಧನ ವಿಚಾರ: ಪೊಲೀಸರ ಅಧಿಕಾರದ ಬಗ್ಗೆ ಸುಪ್ರೀಂ ಕೊಟ್ಟ ಸ್ಪಷ್ಟನೆಯಿದು

ನವದೆಹಲಿ: ನ್ಯಾಯಿಕ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾದ ಖಾಸಗಿ ದೂರು ಪ್ರಕರಣದಲ್ಲಿ, ಮ್ಯಾಜಿಸ್ಟ್ರೇಟ್ ದೂರು ಕುರಿತು ಸಂಜ್ಞೆ ಸ್ವೀಕರಿಸಿ ಸಮನ್ಸ್ ಜಾರಿಗೊಳಿಸಿದ ಬಳಿಕ, ಆರೋಪಿಯು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಬಿಹಾರದ ಮಧುಬನಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಇದ್ದ ಖಾಸಗಿ ದೂರಿನ ಸಂಬಂಧ ಪಾಟ್ನಾ ಹೈಕೋರ್ಟ್ ಮೇ 5, 2026ರಂದು ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದ್ದ ತೀರ್ಪನ್ನು ಪ್ರಶ್ನಿಸಿ ರಾಮ್ ಪುಕಾರ್ ಯಾದವ್ ಮತ್ತು ಮತ್ತೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಅರುಣ್ ಪಲ್ಲಿ ಅವರಿದ್ದ ಪೀಠವು, ಖಾಸಗಿ ದೂರು ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಸಂಜ್ಞೆ (Cognizance) ಸ್ವೀಕರಿಸಿ ಸಮನ್ಸ್ ಜಾರಿಗೊಳಿಸಿದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಲು ಸಾಧ್ಯವಿಲ್ಲ: ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದಲ್ಲಿ ಮಾತ್ರ ಬಂಧನ ಸಾಧ್ಯ ಎಂದು ಸ್ಪಷ್ಟಪಡಿಸಿದೆ.

ಖಾಸಗಿ ದೂರು ಪ್ರಕರಣದಲ್ಲಿ ಸಮನ್ಸ್ ಜಾರಿಯಾದ ನಂತರ ನಿರೀಕ್ಷಣಾ ಜಾಮೀನು ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ನ್ಯಾಯಿಕ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಾದ ಖಾಸಗಿ ದೂರು ಪ್ರಕರಣದಲ್ಲಿ, ಮ್ಯಾಜಿಸ್ಟ್ರೇಟ್ ದೂರು ಕುರಿತು ಸಂಜ್ಞೆ ಸ್ವೀಕರಿಸಿ ಸಮನ್ಸ್ ಜಾರಿಗೊಳಿಸಿದ ಬಳಿಕ, ಆರೋಪಿಯು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅನುಸರಿಸಲಾಗುತ್ತಿದ್ದ ಪದ್ಧತಿ ಕುರಿತು ನ್ಯಾಯಾಲಯವು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದುದನ್ನು ಸ್ಮರಿಸಿತು. ಖಾಸಗಿ ದೂರು ಪ್ರಕರಣದಲ್ಲಿ ಆರೋಪಿಯು ಪೊಲೀಸರಿಂದ ಬಂಧನದ ಭಯವನ್ನು ಹೇಗೆ ವ್ಯಕ್ತಪಡಿಸಬಹುದು ಎಂಬುದನ್ನು ನ್ಯಾಯಾಲಯಕ್ಕೆ ಅರ್ಥವಾಗಿಲ್ಲ ಎಂದು ಹೇಳಿತ್ತು.

“ಖಾಸಗಿ ದೂರಿನಲ್ಲಿ ಪೊಲೀಸರು ಹೇಗೆ ತೊಡಗಿಸಿಕೊಳ್ಳುತ್ತಾರೆ ಅಥವಾ ಅವರಿಗೆ ಹೇಗೆ ಸಂಬಂಧ ಇರುತ್ತದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆರೋಪಿಗಳು ಪೊಲೀಸರು ಅವರನ್ನು ಬಂಧಿಸುವರೆಂಬ ಆತಂಕವನ್ನು ವ್ಯಕ್ತಪಡಿಸಲು ಆಧಾರವೇನು?” ಎಂದು ಹಿಂದಿನ ತೀರ್ಪಿನಲ್ಲಿ ಹೇಳಲಾಗಿತ್ತು.

ಮ್ಯಾಜಿಸ್ಟ್ರೇಟ್ ಖಾಸಗಿ ದೂರಿನ ಕುರಿತು ಸಂಜ್ಞೆ ಸ್ವೀಕರಿಸಿ ಸಮನ್ಸ್ ಜಾರಿಗೊಳಿಸಿದ ನಂತರ ಆರೋಪಿಯು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುವುದು ಮಾತ್ರ ಅವನ ಕರ್ತವ್ಯ. ಕೇವಲ ಸಮನ್ಸ್ ಜಾರಿಯಾಗಿದೆ ಎಂಬ ಕಾರಣಕ್ಕೆ ಪೊಲೀಸರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರವಿಲ್ಲ. ಜಾಮೀನುಗೆ ಒಳಪಡುವುದಿಲ್ಲದ ವಾರಂಟ್ ಹೊರಡಿಸಿದಲ್ಲಿ ಮಾತ್ರ ಬಂಧನ ಸಾಧ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

“ಆರೋಪಿಯು ಏಕೆ ಸೆಷನ್ಸ್ ನ್ಯಾಯಾಲಯ ಅಥವಾ ಹೈಕೋರ್ಟ್ ತೆರಳಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬೇಕು? ಖಾಸಗಿ ದೂರು ಪ್ರಕರಣದಲ್ಲಿ, ಆ ನ್ಯಾಯಾಲಯವು ಸಮನ್ಸ್ ಜೊತೆಗೆ ಜಾಮೀನು ರಹಿತ ವಾರಂಟ್ ಹೊರಡಿಸದ ಹೊರತು, ಪೊಲೀಸರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರವಿಲ್ಲ.” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು ಉದಾಹರಣೆಯ ಮೂಲಕ ಈ ಕಾನೂನು ಸ್ಥಿತಿಯನ್ನು ವಿವರಿಸಿದ ನ್ಯಾಯಪೀಠವು, ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 200ರ ಅಡಿಯಲ್ಲಿ (ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – BNSS ಯ ಸೆಕ್ಷನ್ 223ಕ್ಕೆ ಸಮಾನವಾದ ವಿಧಿ) ಸಂಜ್ಞೆ ಸ್ವೀಕರಿಸಿದ ಬಳಿಕ, ಮ್ಯಾಜಿಸ್ಟ್ರೇಟ್ ಸಮನ್ಸ್ ಜಾರಿಯನ್ನು ಮುಂದೂಡಿ, ಸೆಕ್ಷನ್ 202ರ ಅಡಿಯಲ್ಲಿ ಪೊಲೀಸ್ ತನಿಖೆ ಅಥವಾ ವರದಿ ಕೋರಿದ ಪರಿಸ್ಥಿತಿಯನ್ನು ಉಲ್ಲೇಖಿಸಿತು. ಸೆಕ್ಷನ್ 202ರ ಅಡಿಯಲ್ಲಿ ಪೊಲೀಸರು ವರದಿ ಸಲ್ಲಿಸಲು ಸೂಚನೆ ನೀಡಿದರೂ, ಆ ತನಿಖೆಯ ಅವಧಿಯಲ್ಲಿ ಆರೋಪಿಯನ್ನು ಬಂಧಿಸುವ ಅಧಿಕಾರ ಅವರಿಗೆ ದೊರೆಯುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು. ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಅಂಗೀಕರಿಸಿ, ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದ ಪಾಟ್ನಾ ಹೈಕೋರ್ಟ್ ಆದೇಶ ರದ್ದುಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.