ಜಿಲ್ಲಾ ನ್ಯಾಯಾಧೀಶರಿಗೆ ಬಲಪಂಥೀಯರ ಬೆದರಿಕೆ: ಸೂಕ್ತ ರಕ್ಷಣೆ, ಕ್ರಮಗಳ ಬಗ್ಗೆ ವಿವರಣೆ ನೀಡಲು ಹೈಕೋರ್ಟ್ ನಿರ್ದೇಶನ
ಭೂಪಾಲ್: ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರಿಗೆ ಬಲಪಂಥೀಯರಿಂದ ಬೆದರಿಕೆ ಬಂದಿದ್ದು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ಒದಗಿಸಲು ಸೂಚನೆ ನೀಡಿದ್ದಲ್ಲದೆ ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಸಿಂಗ್ ಅವರ ಪೀಠವು, ನ್ಯಾಯಾಲಯದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದೇ ಹೊರತು, ನ್ಯಾಯಾಧೀಶರು ನೀಡಿದ ನಿರ್ದಿಷ್ಟ ಆದೇಶ ಸಮಾಜದ ಒಂದು ವರ್ಗಕ್ಕೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಾಗೆಯೇ ನ್ಯಾಯಾಧೀಶೆ ಖಾನ್ ಅವರಿಗೆ ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮೂರು ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ನ್ಯಾಯಾಧೀಶರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಜೊತೆಗೆ ನ್ಯಾಯಾಧೀಶೆ ಖಾನ್ ಅವರಿಗೆ ನರ್ಮದಾಪುರಂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಕ್ಷಣೆ ನೀಡುವಂತೆ ನ್ಯಾಯಪೀಠ ಸೂಚಿಸಿದ್ದು. ಇದಕ್ಕೆ ಉತ್ತರಿಸಿರುವ ಸರ್ಕಾರವು, ಜಿಲ್ಲಾ ನ್ಯಾಯಾಧೀಶರಿಗೆ ಈಗಾಗಲೇ ರಕ್ಷಣೆ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್) ದಾಖಲಿಸಲಾಗಿದೆ ಎಂದು ಉಪ ಅಡ್ವೊಕೇಟ್ ಜನರಲ್ ಅಭಿಜೀತ್ ಅವಸ್ತಿ ಅವರು ಮಾಹಿತಿ ನೀಡಿದ್ದಾರೆ.
ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರನ್ನು ಗುರಿಯಾಗಿಸಿರುವ ಇಂತಹ ಪ್ರಕರಣಗಳು “ನಮ್ಮ ನ್ಯಾಯಾಂಗ ಅಧಿಕಾರಿಗಳ ನಿರ್ಭೀತ ಕಾರ್ಯವೈಖರಿ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ನೇರವಾಗಿ ಅಡ್ಡಿಪಡಿಸುತ್ತವೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ
2022ರಲ್ಲಿ ನರ್ಮದಾಪುರಂನಲ್ಲಿ ನಡೆದ ಜಾನುವಾರು ಸಾಗಣೆದಾರರೊಬ್ಬರ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಧೀಶೆ ತಬಸುಮ್ ಖಾನ್ ಅವರು ಜೂನ್ 12ರಂದು ಏಳು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದರು. ಈ ತೀರ್ಪಿನ ಪ್ರಕಟದ ನಂತರ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಅಪರಾಧಿಗಳನ್ನು ಬಿಡುಗಡೆ ಮಾಡದಿದ್ದರೆ ‘ಮಾರಣಹೋಮ’ ನಡೆಸುವುದಾಗಿ ಒಬ್ಬ ವ್ಯಕ್ತಿ ವಿಡಿಯೋ ಪೋಸ್ಟ್ ಮಾಡಿದ್ದರೆ, ಮತ್ತೊಂದು ಖಾತೆಯು ನ್ಯಾಯಾಧೀಶೆಯನ್ನು ದೇಶದಿಂದ ಹೊರಹಾಕುವಂತೆ ಹಿಂದೂಗಳಿಗೆ ಕರೆ ನೀಡಿದೆ. ಇನ್ನು ಕೆಲವರು ಆಕೆಯ ಧರ್ಮದ ಕಾರಣಕ್ಕಾಗಿಯೇ ಈ ತೀರ್ಪು ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್, “ಕಾನೂನಿನ ಚೌಕಟ್ಟಿನಲ್ಲಿ ನೀಡಲಾದ ತೀರ್ಪಿಗೆ ನ್ಯಾಯಾಧೀಶರು ವೈಯಕ್ತಿಕ ಪರಿಣಾಮಗಳನ್ನು ಎದುರಿಸುವುದಾದರೆ, ಅದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ‘ಬೆನ್ನೆಲುಬು’ ಆಗಿರುವ ಜಿಲ್ಲಾ ನ್ಯಾಯಾಲಯಗಳ ಸ್ವಾತಂತ್ರ್ಯ ಮತ್ತು ಕಾರ್ಯವೈಖರಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು” ಎಂದು ಹೇಳಿದೆ.
ಈ ಕುರಿತು ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ಕೂಡ ನ್ಯಾಯಾಧೀಶರಾದ ಖಾನ್ ಅವರೊಂದಿಗೆ ತನ್ನ ಒಗ್ಗಟ್ಟನ್ನು ವ್ಯಕ್ತಪಡಿಸಿದೆ ಮತ್ತು ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಅಭಿಯಾನವನ್ನು ಬಲವಾಗಿ ಖಂಡಿಸಿದ್ದು, “ಈ ಉದ್ದೇಶಪೂರ್ವಕ ಹಗೆತನದ ವಿರುದ್ಧ ಯುಸಿಎಫ್ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದಿದೆ.
ದೇಶದ ಸ್ವತಂತ್ರ ನ್ಯಾಯಾಂಗದ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ ಮತ್ತು ರಾಜ್ಯ ಸರ್ಕಾರವು ಅವರಿಗೆ ಶೀಘ್ರದಲ್ಲೇ ತಕ್ಷಣದ ಮತ್ತು ಸಮಗ್ರ ಭದ್ರತೆಯನ್ನು ಒದಗಿಸುವುದರ ಜೊತೆಗೆ, ಅವರ ವಿರುದ್ಧ ದ್ವೇಷದ ಅಭಿಯಾನವನ್ನು ಪ್ರಚೋದಿಸುತ್ತಿರುವ ವ್ಯಕ್ತಿಗಳನ್ನು ಕಾನೂನಿನ ಅಡಿಯಲ್ಲಿ ತ್ವರಿತವಾಗಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಆಶಿಸುತ್ತದೆ” ಎಂದು ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
