06/07/2026

Law Guide Kannada

Online Guide

ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂದೆಗೆ ಮಗನ ಭೇಟಿಯ ಹಕ್ಕಿಲ್ಲ- ಹೈಕೋರ್ಟ್

ಬೆಂಗಳೂರು: ಮಗುವಿನ ಆರ್ಥಿಕ ಮತ್ತು ಭಾವನಾತ್ಮಕ ಜವಾಬ್ದಾರಿಯನ್ನು ನಿಭಾಯಿಸುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂದೆಗೆ ಮಗುವಿನ ಭೇಟಿ ಮಾಡುವ ಹಕ್ಕು ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪಿ. ಸುಧಾ ಅವರಿದ್ದ ಏಕಸದಸ್ಯ ಪೀಠವು, ಮಗುವಿನ ಆರ್ಥಿಕ ಮತ್ತು ಭಾವನಾತ್ಮಕ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿಲ್ಲದ ತಂದೆ, ನಂತರದ ದಿನಗಳಲ್ಲಿ ಮಗುವನ್ನು ಭೇಟಿ ಮಾಡುವ ಹಕ್ಕನ್ನು ಕೋರಲು ಸಾಧ್ಯವಿಲ್ಲ. ಪೋಷಕರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಒಂದಕ್ಕೊಂದು ಬೇರ್ಪಡಿಸಲು ಸಾಧ್ಯವಿಲ್ಲ ಅಭಿಪ್ರಾಯಪಟ್ಟಿದೆ.

“ಯಾವಾಗ ಒಬ್ಬ ತಂದೆ ಮಗುವಿನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೋ, ಅಂತಹವರಿಗೆ ಕಾನೂನುಬದ್ಧ ಹಕ್ಕುಗಳು ಸಿಗುವುದಿಲ್ಲ” ಎಂದು ನ್ಯಾಯಾಧೀಶರು ಕಟುನುಡಿಗಳನ್ನಾಡಿದ್ದಾರೆ.

ಪ್ರಕರಣದ ವಿವರ
ತಮ್ಮ ಐದು ವರ್ಷದ ಮಗನ ಭೇಟಿಗೆ ಮಾಜಿ ಪತಿಗೆ ಅವಕಾಶ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. 2026ರ ಜನವರಿ 30ರಂದು ಕೆಳಹಂತದ ನ್ಯಾಯಾಲಯವು ತಂದೆಗೆ ಮಗುವನ್ನು ಭೇಟಿ ಮಾಡಲು ಅನುಮತಿ ನೀಡಿತ್ತು.

2024ರ ಸೆಪ್ಟೆಂಬರ್ 24ರಂದು ಬೆಂಗಳೂರು ಸಂಧಾನ ಕೇಂದ್ರದಲ್ಲಿ ನಡೆದ ಒಪ್ಪಂದದಂತೆ ದಂಪತಿಗಳು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಆ ಸಮಯದಲ್ಲಿ, ಮಗುವಿನ ಸಂಪೂರ್ಣ ಪಾಲನೆ ಮತ್ತು ಕಾನೂನುಬದ್ಧ ಪೋಷಕತ್ವವನ್ನು ತಾಯಿಗೆ ನೀಡಲಾಗಿತ್ತು. ಜೊತೆಗೆ ತಂದೆಯು ತಾನು ಮಗುವನ್ನು ಭೇಟಿ ಮಾಡುವ ಹಕ್ಕನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವುದಾಗಿ ಲಿಖಿತವಾಗಿ ಒಪ್ಪಿಕೊಂಡಿದ್ದರು.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು.  ಮಗು ಜನಿಸಿದಾಗಿನಿಂದಲೂ ತಂದೆಯು ಮಗುವನ್ನು ನೋಡಲು ಬಂದಿಲ್ಲ, ಮಗುವಿನ ಪಾಲನೆಗೆ ಯಾವುದೇ ಆರ್ಥಿಕ ಅಥವಾ ಭಾವನಾತ್ಮಕ ಬೆಂಬಲ ನೀಡಿಲ್ಲ ಎಂದು ತಾಯಿ ನ್ಯಾಯಾಲಯಕ್ಕೆ ವಿವರಿಸಿದ್ದರು. ಅಲ್ಲದೆ, ಪತಿ ಈಗಾಗಲೇ ಮರುಮದುವೆಯಾಗಿದ್ದಾರೆ ಎಂಬ ವಿಷಯವನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದರು. ಹೈಕೋರ್ಟ್ ನೋಟಿಸ್ ನೀಡಿದ್ದರೂ ತಂದೆಯು ವಿಚಾರಣೆಗೆ ಹಾಜರಾಗಿರಲಿಲ್ಲ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠವು, “ತಂದೆಯು ಒಪ್ಪಂದದ ಮೂಲಕ ಮಗುವಿನ ಮೇಲಿನ ಹಕ್ಕನ್ನು ಅರಿವಿನಿಂದಲೇ ಬಿಟ್ಟುಕೊಟ್ಟಿದ್ದಾರೆ. ಕೇವಲ ಒಂದು ವರ್ಷದ ನಂತರ ಮತ್ತೆ ನ್ಯಾಯಾಲಯದ ಮೊರೆ ಹೋಗಿ ಭೇಟಿ ಮಾಡುವ ಹಕ್ಕು ಕೇಳುವುದು ಸರಿಯಲ್ಲ ಎಂದು ತಿಳಿಸಿದರು.

ಕೌಟುಂಬಿಕ ನ್ಯಾಯಾಲಯವು ಈ ವಾಸ್ತವಾಂಶಗಳನ್ನು ಗಮನಿಸದೆ ತಂದೆಗೆ ಮಗುವಿನ ಶೈಕ್ಷಣಿಕ ವೆಚ್ಚದ ಶೇ. 50 ರಷ್ಟು ಭರಿಸುವಂತೆ ಸೂಚಿಸಿ, ಭೇಟಿಗೆ ಅವಕಾಶ ನೀಡಿತ್ತು. ಆದರೆ ಹೈಕೋರ್ಟ್, ತಾಯಿ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಕೇವಲ ಪೋಷಕತ್ವವನ್ನು ಮಾತ್ರ ಕೇಳಿದ್ದಾರೆ ಮತ್ತು ಯಾವುದೇ ಜೀವನಾಂಶವನ್ನು ಅಪೇಕ್ಷಿಸಿಲ್ಲ ಎಂಬುದನ್ನು ಗಮನಿಸಿತು. ಕೆಳಹಂತದ ನ್ಯಾಯಾಲಯದ ನೀಡಿದ ಆದೇಶವನ್ನು ನ್ಯಾಯಪೀಠವು ರದ್ದುಗೊಳಿಸಿದ್ದು ಇದರಿಂದ ಮಗುವಿನ ಸಂಪೂರ್ಣ ಜವಾಬ್ದಾರಿ ತಾಯಿಯ ಪಾಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.