ಲಂಚ ಸ್ವೀಕರಿಸಿದ ಅಧಿಕಾರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್: ಎಲ್ಲಿ ಗೊತ್ತೆ..?
ಬೀಜಿಂಗ್: ಭಾರತದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ, ಲಂಚ ಸ್ವೀಕರಿಸುವ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಲಂಚಕ್ಕೆ ಕೈವೊಡ್ಡುವ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಭಾರತದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯ (Prevention of Corruption Act) ಅಡಿಯಲ್ಲಿ ಶಿಕ್ಷೆಯ ಪ್ರಮಾಣವು ಕನಿಷ್ಠ 3 ವರ್ಷಗಳಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಆದರೆ ಚೀನಾ ದೇಶದಲ್ಲಿ ಲಂಚ ಸ್ವೀಕರಿಸಿದ ಮಾಜಿ ಅಧಿಕಾರಿಯೊಬ್ಬರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದ ಘಟನೆ ವರದಿಯಾಗಿದೆ.
ಹೌದು, ಚೀನಾದಲ್ಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಜಾರಿಗೆ ತಂದಿರುವ ಕಠಿಣ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ದ ಭಾಗವಾಗಿ, ಬೃಹತ್ ಪ್ರಮಾಣದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಾಜಿ ಅಧಿಕಾರಿಯೊಬ್ಬರಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಯಾಂಗ್ ಯೂಲಿನ್ , ಮಾಜಿ ಉನ್ನತ ಅಧಿಕಾರಿ ಅವರೇ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಸುಮಾರು 2.21 ಬಿಲಿಯನ್ ಯುವಾನ್ (ಅಂದಾಜು 325 ಮಿಲಿಯನ್ ಅಮೆರಿಕನ್ ಡಾಲರ್). ನಷ್ಟು ಅಪಾರ ಪ್ರಮಾಣದ ಹಣವನ್ನು ಲಂಚವಾಗಿ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾಂಗ್ ಯೂಲಿನ್ ಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಮಾಜಿ ಅಧಿಕಾರಿ ಯಾಂಗ್ ಯೂಲಿನ್ ಅವರ ವಿರುದ್ದ ಒಂದು ದಶಕದಲ್ಲಿ 2.21 ಬಿಲಿಯನ್ ಯುವಾನ್ ಅಥವಾ ಸುಮಾರು $325 ಮಿಲಿಯನ್ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚೀನಾದ ನ್ಯಾಯಾಲಯವು ಭ್ರಷ್ಟಾಚಾರದ ಆರೋಪದ ಮೇಲೆ ಮರಣದಂಡನೆ ವಿಧಿಸಿದೆ ಎಂದು ವರದಿಗಳು ತಿಳಿಸಿವೆ. ರಾಜ್ಯ ಪ್ರಸಾರಕ ಚೀನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ಪ್ರಕಾರ, ಪೂರ್ವ ನಗರವಾದ ನಾನ್ಜಿಂಗ್ನಲ್ಲಿರುವ ಆರ್ಥಿಕ ವಲಯದ ಮಾಜಿ ಉಪ ನಿರ್ದೇಶಕರಾಗಿ ಯಾಂಗ್ ಯೂಲಿನ್ ಕಾರ್ಯ ನಿರ್ವಹಿಸಿದ್ದು, 2013 ಮತ್ತು 2023 ರ ನಡುವೆ ಲಂಚವನ್ನು ಸ್ವೀಕರಿಸಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಚೀನಾದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಸಮರದಲ್ಲಿ ಇದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳಲು ಮತ್ತು ಅಧಿಕಾರಶಾಹಿಯಲ್ಲಿನ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯಲು ಚೀನಾ ಸರ್ಕಾರವು ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಲಂಚದ ಜೊತೆಗೆ, ಯಾಂಗ್ ಅಧಿಕಾರ ದುರುಪಯೋಗ ಮತ್ತು ಹಣ ವರ್ಗಾವಣೆಯಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ ಎಂದು ಜಿಯಾಂಗ್ಸು ಪ್ರಾಂತ್ಯದ ಚಾಂಗ್ಝೌ ಇಂಟರ್ಮೀಡಿಯೇಟ್ ಪೀಪಲ್ಸ್ ಕೋರ್ಟ್ ಅನ್ನು ಉಲ್ಲೇಖಿಸಿ ಸಿಸಿಟಿವಿ ವರದಿ ಮಾಡಿದೆ. ಯಾಂಗ್ನ ಅಪರಾಧಗಳು “ಅಸಾಧಾರಣವಾಗಿ ಗಂಭೀರ” ಮತ್ತು ಭಾರಿ ನಷ್ಟವನ್ನುಂಟುಮಾಡಿದವು ಎಂದು ಕೋರ್ಟ್ ಹೇಳಿದೆ.
ಆರ್ಥಿಕ ಅಪರಾಧಗಳಿಗೆ ಚೀನಾದಲ್ಲಿ ಮರಣದಂಡನೆ ವಿಧಿಸುವುದು ಸಾಮಾನ್ಯವಲ್ಲ. ಆದಾಗ್ಯೂ, ಆರ್ಥಿಕ ಅಪರಾಧಗಳ ವಿರುದ್ಧ ಅಧ್ಯಕ್ಷ ಕ್ಸಿ ಅವರ ದೀರ್ಘಕಾಲದ ಅಭಿಯಾನದ ಭಾಗವಾಗಿ, 2021 ರಿಂದ ದೇಶದ ಅತಿದೊಡ್ಡ ಕೆಟ್ಟ ಸಾಲ ವ್ಯವಸ್ಥಾಪಕರಲ್ಲಿ ಒಂದಾದ ಚೀನಾ ಹುವಾರೊಂಗ್ ಇಂಟರ್ ನ್ಯಾಷನಲ್ ಹೋಲ್ಡಿಂಗ್ಸ್ ಲಿಮಿಟೆಡ್ನ ಇಬ್ಬರು ಮಾಜಿ ಅಧಿಕಾರಿಗಳನ್ನು ದೇಶವು ಗಲ್ಲಿಗೇರಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
