ವಿಚಾರಣೆಗೆ ಮುನ್ನವೇ ‘ಜಡ್ಜ್ ಮೆಂಟ್’ ಸಿದ್ಧ: ಆರೋಪಿ ನ್ಯಾಯಾಧೀಶರ ವಿರುದ್ಧದ ಶಿಸ್ತು ಕ್ರಮ ರದ್ದಿಗೆ ಕೋರ್ಟ್ ನಕಾರ
ಭೋಪಾಲ್: ವಿಚಾರಣೆ ಇನ್ನೂ ಬಾಕಿಯಿದ್ದಾಗಲೇ ಆರೋಪಿಯನ್ನು ಖುಲಾಸೆಗೊಳಿಸುವ ತೀರ್ಪನ್ನು ಮುನ್ನವೇ ಸಿದ್ಧಪಡಿಸಿದ್ದರು ಎಂಬ ಗಂಭೀರ ಆರೋಪ ಹೊತ್ತಿರುವ ಸಿವಿಲ್ ನ್ಯಾಯಾಧೀಶರ ವಿರುದ್ಧ ಆರಂಭಿಸಲಾದ ಇಲಾಖಾ ಶಿಸ್ತು ಕ್ರಮವನ್ನು ರದ್ದುಪಡಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರಾಕರಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ಪಾಠಕ್ ಹಾಗೂ ನ್ಯಾಯಮೂರ್ತಿ ಬಿ.ಪಿ. ಶರ್ಮಾ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು,ವಿಚಾರಣೆ ಇನ್ನೂ ಬಾಕಿಯಿದ್ದಾಗಲೇ ಆರೋಪಿಯನ್ನು ಖುಲಾಸೆಗೊಳಿಸುವ ತೀರ್ಪನ್ನು 2020ರ ಅಕ್ಟೋಬರ್ ನಲ್ಲೇ ಸಿದ್ಧಪಡಿಸಿದ್ದರು ಎಂಬ ಗಂಭೀರ ಆರೋಪ ಸಿವಿಲ್ ನ್ಯಾಯಾಧೀಶರು ಎದುರಿಸುತ್ತಿದ್ದು ಇವರ ವಿರುದ್ಧ ಆರಂಭಿಸಲಾದ ಇಲಾಖಾ ಶಿಸ್ತು ಕ್ರಮವನ್ನು ನ್ಯಾಯಪೀಠ ನಿರಾಕರಿಸಿದೆ.
ಅಪರಾಧ ಪ್ರಕರಣ ಬಾಕಿಯಿದ್ದ ಕಾರಣ ಐಎಎಸ್ (IAS) ಹುದ್ದೆಗೆ ಅವರ ನೇಮಕಾತಿ ತಡೆಹಿಡಿಯಲ್ಪಟ್ಟಿದ್ದ ಸಂತೋಷ್ ವರ್ಮಾ ಅವರಿಗೆ ಅಕ್ರಮ ಲಾಭ ಕಲ್ಪಿಸುವ ಉದ್ದೇಶದಿಂದ ನಡೆದ ಸಂಚಿನ ಭಾಗವಾಗಿ ನ್ಯಾಯಾಧೀಶರು ಮುಂಚಿತವಾಗಿಯೇ ಖುಲಾಸೆ ತೀರ್ಪನ್ನು ಸಿದ್ಧಪಡಿಸಿದ್ದರು ಎನ್ನಲಾಗಿದೆ.
ಅರ್ಜಿದಾರರಾದ ನ್ಯಾಯಾಧೀಶರು, ತಮ್ಮ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಲಾಖಾ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಕ್ರಿಮಿನಲ್ ಟ್ರಯಲ್ ನಂ.1621/2019ರಲ್ಲಿ ವಿಚಾರಣೆ ಬಾಕಿಯಿದ್ದರೂ ಆರೋಪಿಯನ್ನು ಖುಲಾಸೆಗೊಳಿಸುವ ತೀರ್ಪನ್ನು ಮುಂಚಿತವಾಗಿ ಸಿದ್ಧಪಡಿಸಿ ಅಸ್ತಿತ್ವಕ್ಕೆ ತರಲಾಗಿದೆ ಎಂಬ ಆರೋಪಗಳು ಬೆಳಕಿಗೆ ಬಂದಿದ್ದವು. ಇದನ್ನು ಆಧರಿಸಿ ಶಿಸ್ತು, ಪ್ರಾಧಿಕಾರವು ದಾಖಲೆಗಳನ್ನು ಪರಿಶೀಲಿಸಿ ಇಲಾಖೆ ಕ್ರಮ ಆರಂಭಿಸಿತು.
ಅರ್ಜಿದಾರರನ್ನು ಅಮಾನತುಗೊಳಿಸಲಾಗಿದ್ದು, ಮಧ್ಯಪ್ರದೇಶ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1966ರ ನಿಯಮ 14ರ ಅಡಿಯಲ್ಲಿ ಆರೋಪಪಟ್ಟಿ (Charge Sheet) ಸಲ್ಲಿಸಲಾಗಿತ್ತು. ಅರ್ಜಿದಾರರ ಪರ ವಕೀಲರು, 2020ರಲ್ಲಿ ನಡೆದಿತ್ತೆನ್ನಲಾದ ಘಟನೆಯ ಕುರಿತು 2025ರಲ್ಲಿ ಆರೋಪಪಟ್ಟಿ ಸಲ್ಲಿಸಿರುವುದು ಅಸಮಂಜಸವಾದ ಮತ್ತು ವಿವರಣೆಯಿಲ್ಲದ ವಿಳಂಬವಾಗಿದ್ದು, ಅದರಿಂದ ಆರೋಪಪಟ್ಟಿಯನ್ನೇ ರದ್ದು ಪಡಿಸಬೇಕು ಎಂದು ವಾದಿಸಿದರು. ಅಲ್ಲದೆ, ಕ್ರಿಮಿನಲ್ ಪ್ರಕರಣ ಮತ್ತು ಇಲಾಖಾ ವಿಚಾರಣೆ ಎರಡೂ ಒಂದೇ ಘಟನೆಗಳ ಆಧಾರಿತವಾಗಿರುವುದರಿಂದ ಇಲಾಖಾ ವಿಚಾರಣೆ ಮುಂದುವರಿದರೆ ಕ್ರಿಮಿನಲ್ ವಿಚಾರಣೆಯಲ್ಲಿ ಅರ್ಜಿದಾರರಿಗೆ ಹಾನಿಯಾಗುತ್ತದೆ ಎಂದು ವಾದಿಸಿದರು.
ಕ್ರಿಮಿನಲ್ ಪ್ರಕರಣ ಬಾಕಿಯಿರುವಾಗ ಇಲಾಖಾ ವಿಚಾರಣೆ ನಡೆಸಬಾರದು ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು.
“ಈ ಪ್ರಕರಣವು ನ್ಯಾಯಾಂಗ ಸೇವೆಯ ಸದಸ್ಯರ ಕುರಿತಾಗಿದೆ. ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸವು ಸಂವಿಧಾನಾತ್ಮಕ ವ್ಯವಸ್ಥೆಯ ಮೂಲ ಸ್ತಂಭಗಳಲ್ಲಿ ಒಂದಾಗಿದೆ. ನ್ಯಾಯಾಂಗ ಅಧಿಕಾರಿಯ ನಡೆ-ನುಡಿಗಳು ಅವರ ಹುದ್ದೆಗೆ ನಿರೀಕ್ಷಿಸಲಾದ ಪ್ರಾಮಾಣಿಕತೆ ಮತ್ತು ಯೋಗ್ಯತೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಶಿಸ್ತು ಪ್ರಾಧಿಕಾರದ ಕರ್ತವ್ಯವಾಗಿದೆ. ಕ್ರಿಮಿನಲ್ ಪ್ರಕರಣ ಯಾವಾಗ ಮುಕ್ತಾಯವಾಗುತ್ತದೆ ಎಂಬುದು ಅನಿಶ್ಚಿತವಾಗಿರುವುದರಿಂದ ಅದರ ಅಂತ್ಯಕ್ಕಾಗಿ ಇಲಾಖಾ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದಿಲ್ಲ.” ಎಂದು ಪೀಠವು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ರಿಟ್ ಅರ್ಜಿಯನ್ನು ವಜಾಗೊಳಿಸಿ, ಕಾನೂನಿನ ಪ್ರಕಾರ ಇಲಾಖಾ ವಿಚಾರಣೆಯನ್ನು ಮುಂದುವರಿಸಲು ಶಿಸ್ತು, ಪ್ರಾಧಿಕಾರಕ್ಕೆ, ಸ್ವಾತಂತ್ರ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
