ಭೂಸ್ವಾಧೀನಕ್ಕೆ ಸಮಾನ ಪರಿಹಾರ: ಸುಪ್ರೀಂ ಮಹತ್ವದ ತೀರ್ಪು
ನವದೆಹಲಿ: ಭೂಸ್ವಾಧೀನದ ವೇಳೆ ನೀಡುವ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರ ನಡುವೆ ಆಗುವ ತಾರತಮ್ಯ ತಪ್ಪಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ.
ಸಮಾನ ಸಾರ್ವಜನಿಕ ಉದ್ದೇಶಕ್ಕಾಗಿ ಒಂದೇ ಅಧಿಸೂಚನೆ ಅಡಿ ವಶಪಡಿಸಿಕೊಂಡ ಎಲ್ಲ ಭೂಮಿಗೂ ಸಮಾನ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಎಸ್.ವಿ.ಎನ್. ಭಟ್ಟಿ ಮತ್ತು ಎನ್.ವಿ. ಅಂಜಾರಿಯ ಅವರ ಪೀಠವು ತನ್ನ ವಿಶೇಷಾಧಿಕಾರವನ್ನು ಬಳಸಿ , ‘ಒಂದೇ ರೀತಿಯ ಭೂ ಮಾಲೀಕರ ನಡುವೆ ತಾರತಮ್ಯ ಎಸಗುವುದನ್ನು ತಪ್ಪಿಸಲು, ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ತೀರ್ಪಿಗೆ ಅನುಗುಣವಾಗಿ ಸಮಾನ ಪರಿಹಾರ ದರವನ್ನೇ ನಿಗದಿಪಡಿಸಬೇಕು’ ಎಂದು ಹೇಳಿದೆ.
ಪ್ರಕರಣದ ವಿವರ
1999ರಲ್ಲಿ ಯೋಜನೆಯೊಂದರ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಗ್ರಾಮದಲ್ಲಿ ಲಚ್ಚಪ್ಪ ಮತ್ತು ಇತರರ 7 ಎಕರೆ 12 ಗುಂಟೆ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿತ್ತು. ನಂತರ 2000ನೇ ಇಸವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯು ಭೂಮಿಗೆ ಪರಿಹಾರ ನಿಗದಿಮಾಡಿ ಪರಿಹಾರವನ್ನು ಮಂಜೂರು ಮಾಡಿದ್ದರು. ಬಳಿಕ, ಪ್ರತಿ ಎಕರೆಯ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗೆ ಹೆಚ್ಚಿಸಿ ಜಮಖಂಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು 2001ರಲ್ಲಿ ಆದೇಶಿಸಿದ್ದರು. 2011ರಲ್ಲಿ ಈ ಮೊತ್ತವನ್ನು ₹5 ಲಕ್ಷಕ್ಕೆ ಹೆಚ್ಚಿಸಿ ಹೈಕೋರ್ಟ್ ಆದೇಶಿಸಿತು. ಆದರೆ, ಇದೇ ಅಧಿಸೂಚನೆ ಅಡಿ ವಶಪಡಿಸಿಕೊಂಡಿದ್ದ ಬೇರೆ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಪ್ರತಿ ಎಕರೆಗೆ 6.5 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ಕೂಡ ಇದನ್ನು ಅನುಮೋದಿಸಿತ್ತು.
ಈ ತೀರ್ಪನ್ನು ಉಲ್ಲೇಖಿಸಿ, ಲಚ್ಚಪ್ಪ ಮತ್ತು ಇತರರು ತಮಗೂ ನ್ಯಾಯ ಒದಗಿಸಬೇಕು ಹಾಗೂ ವಿಳಂಬದ ಅವಧಿಗೆ ಬಡ್ಡಿ ಒದಗಿಸಬೇಕು ಎಂದು ಕೋರಿ 2015ರಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದರು. ಆದರೆ, ‘ಭೂ ಮಾಲೀಕರು ಜಾಗರೂಕರಾಗಿರಲಿಲ್ಲ. ಹೀಗಾಗಿ ಅವರು ವಿಳಂಬದ ಅವಧಿಗೆ ಬಡ್ಡಿ ಪಡೆಯಲು ಅರ್ಹರಲ್ಲ’ ಎಂಬ ಪ್ರತಿವಾದವನ್ನು ಒಪ್ಪಿದ ಹೈಕೋರ್ಟ್, ಅರ್ಜಿಯನ್ನು ವಜಾ ಗೊಳಿಸಿತ್ತು.
ಬಡ್ಡಿ ನಿರಾಕರಿಸಲು ಹೈಕೋರ್ಟ್ ಪರಿಗಣಿಸಿದ ಕಾರಣಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದರೂ, ‘ಒಂದೇ ಅಧಿಸೂಚನೆಯಡಿ ವಶಪಡಿಸಿಕೊಂಡ ಭೂಮಿಗೆ, ಕಾನೂನಿನ ಅಡಿ ಅನ್ವಯವಾಗುವ ಎಲ್ಲ ಸೌಲಭ್ಯಗಳೊಂದಿಗೆ 6.5 ಲಕ್ಷ ರೂ. ಪರಿಹಾರ ನೀಡಬೇಕು’ ಎಂದು ಆದೇಶಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
