13/08/2026

Law Guide Kannada

Online Guide

ನಾಪತ್ತೆ ಪ್ರಕರಣಗಳಲ್ಲಿ ತಕ್ಷಣವೇ FIR ದಾಖಲಿಸಿ – ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ನಾಪತ್ತೆ ಪ್ರಕರಣಗಳಲ್ಲಿ ತಕ್ಷಣವೇ ಎಫ್ ಐಆರ್ ದಾಖಲಿಸಬೇಕು ಎಂದು ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಅಹಸ್ನಾದುದ್ದೀನ್ ಅಮ್ಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು ಈ ಸೂಚನೆ ನೀಡಿದೆ. ಮೇ 22ರಂದು ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಭಾರತದಲ್ಲಿ 47 ಸಾವಿರ ಮಕ್ಕಳು ನಾಪತ್ತೆಯಾಗಿರುವುದನ್ನು ಗಮನಿಸಿತ್ತು. ತನ್ನ ಮೇ 22ರ ಆದೇಶದ ಬಗ್ಗೆ ಇಂದು ಸ್ಪಷ್ಟಿಕರಣ ನೀಡಿರುವ ಸುಪ್ರೀಂಕೋರ್ಟ್ ವ್ಯಕ್ತಿಯ ಲಿಂಗ ಅಥವಾ ವಯಸ್ಸನ್ನು ಆಧರಿಸಿ ಯಾವುದೇ ನಿರ್ಬಂಧವನ್ನು ವಿಧಿಸುವಂತಿಲ್ಲವೆಂದು ಹೇಳಿದೆ ವ್ಯಕ್ತಿ ನಾಪತ್ತೆಯಾದಲ್ಲಿ ತಕ್ಷಣವೇ ಎಫ್ಐಆರ್ ದಾಖಲಿಸಬೇಕೆಂದು ತಾನು ಪೊಲೀಸರಿಗೆ ನೀಡಿದ್ದ ನಿರ್ದೇಶನವು, ವಯಸ್ಸು ಅಥವಾ ಲಿಂಗಭೇದವಿಲ್ಲದೆ ಎಲ್ಲಾ ಪ್ರಕರಣಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಿದೆ.

ದೇಶಾದ್ಯಂತ ಯಾವುದೇ ವ್ಯಕ್ತಿ ನಾಪತ್ತೆಯಾಗಿರುವುದು ವರದಿಯಾದಲ್ಲಿ ಕೂಡಲೇ ಪೊಲೀಸರು ಎಫ್ ಐಆರ್ ದಾಖಲಿಸಬೇಕು ಹಾಗೂ ಕೇವಲ ನಾಲ್ಕು ವಾರಗಳೊಳಗೆ ಮಾನವಕಳ್ಳಸಾಗಣೆ ವಿರೋಧಿ ಘಟಕಗಳು ಕಾರ್ಯಾರಂಭಿಸುವಂತೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಿದೆ.

ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ ಬಳಸಲಾದ ‘ವ್ಯಕ್ತಿ’ ಎಂಬ ಪದವು ಕೇವಲ ಮಕ್ಕಳನ್ನು ಮಾತ್ರವೇ ಉದ್ದೇಶಿಸಿದ್ದಾಗಿದೆ ಎಂದು ಕೆಲವು ರಾಜ್ಯಗಳು ಭಾವಿಸಿವೆ. ಆದರೆ, ಅದು ತಪ್ಪು ತಿಳುವಳಿಕೆಯಾಗಿದೆ ಹಾಗೂ ತನ್ನ ಈ ನಿರ್ದೇಶನಗಳನ್ನು ಈಡೇರಿಸುವಲ್ಲಿ ವಿಫಲರಾದ ಅಧಿಕಾರಿಗಳು ನ್ಯಾಯಾಂಗ ನಿಂದನೆಯ ಕ್ರಮವನ್ನು ಎದುರಿಸಬೇಕಾಗುತ್ತದೆಯೆಂದು ನ್ಯಾಯಪೀಠ ತಿಳಿಸಿದೆ.

ಒಂದು ವೇಳೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ತನ್ನ ಆದೇಶವನ್ನು ಅದರ ನಿಜಾರ್ಥದಲ್ಲಿ ಅನುಸರಿಸದೇ ಹೋದಲ್ಲಿ, ತಾನು ಸಂಬಂಧಪಟ್ಟ ಸರಕಾರದ ಮುಖ್ಯ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸುವುದಾಗಿ ಹಾಗೂ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಅಥವಾ ಅನುಸರಿಸದ ಆರೋಪದಲ್ಲಿ ಶಿಕ್ಷಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.