ಮಾಜಿ ನ್ಯಾ. ಯಶವಂತ್ ವರ್ಮಾ ನಿವಾಸದಲ್ಲಿ ನಗದು ಪತ್ತೆ ಕೇಸ್: FIR, ತನಿಖೆ ಕೋರಿದ್ದ ಅರ್ಜಿ ವಜಾ
ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ ಮಾಜಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡದ ವೇಳೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಹಾಗೂ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ಕೋರಿ ವಕೀಲ ಘನಶ್ಯಾಮ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ನಿರಾಕರಿಸಿದೆ.
“ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಲೆಕ್ಕಕ್ಕೆ ಸಿಗದ ಹಣಕ್ಕೆ ಸಂಬಂಧಿಸಿದ ಅಪರಾಧ ಹೊಣೆಗಾರಿಕೆ ಕೊನೆಗೊಳ್ಳುವುದಿಲ್ಲ” ಎಂದು ಅರ್ಜಿದಾರರು ವಾದಿಸಿದರು. ಇದಕ್ಕೂ ಮೊದಲು ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು ಎಂದು ಪೀಠ ಗಮನಿಸಿತು.
ಅದಕ್ಕೆ ಉಪಾಧ್ಯಾಯ ಅವರು, ಹಿಂದಿನ ಅರ್ಜಿಯನ್ನು ದೂರು ಸಲ್ಲಿಸಿರಲಿಲ್ಲ ಎಂಬ ತಾಂತ್ರಿಕ ಕಾರಣಕ್ಕಾಗಿ ವಜಾಗೊಳಿಸಲಾಗಿತ್ತು. ಆದರೆ ಈ ಬಾರಿ ತಾವು ದೂರು ಸಲ್ಲಿಸಿರುವುದಾಗಿ ತಿಳಿಸಿದರು. ಆಗ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಅರ್ಜಿದಾರರನ್ನು ಉದ್ದೇಶಿಸಿ, “ನೀವು ವಕೀಲರು. ಇದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಷ್ಟೇ. ಅಗ್ಗದ ಪ್ರಚಾರಕ್ಕಾಗಿ ಮಾಡುತ್ತಿರುವ ಪ್ರಯತ್ನ. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಮಗೆ ಯಾವುದೇ ಆಸಕ್ತಿ ಇಲ್ಲ. ಅರ್ಜಿ ವಜಾ.”ಎಂದು ಹೇಳಿದರು.
ಈ ವೇಳೆ ಅರ್ಜಿದಾರರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಸಾರ್ವಜನಿಕ ಸೇವಕ (Public Servant) ಎಂದು ಪರಿಗಣಿಸಲಾಗಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳದಿರಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದರು. ಆದಾಗ್ಯೂ, ಸುಪ್ರೀಂ ಕೋರ್ಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿ ವಜಾಗೊಳಿಸಿತು.
ಏನಿದು ಪ್ರಕರಣ
2025ರ ಮಾರ್ಚ್ 14ರಂದು ಹೋಳಿ ಹಬ್ಬದ ರಾತ್ರಿ ಸುಮಾರು 11:35ಕ್ಕೆ, ಆಗ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ್ ವರ್ಮಾ ಅವರ ಲ್ಯೂಟಿಯನ್ಸ್ ದೆಹಲಿಯ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಬೆಂಕಿ ಅವಘಡದ ನಂತರ ಅವರ ನಿವಾಸದಲ್ಲಿ ಸುಟ್ಟುಹೋದ ನೋಟುಗಳ ಕಟ್ಟುಗಳು ಸೇರಿದಂತೆ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ ಎನ್ನಲಾದ ಘಟನೆ ಭಾರಿ ವಿವಾದಕ್ಕೆ ಕಾರಣವಾಯಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
