13/08/2026

Law Guide Kannada

Online Guide

ಭೂಸ್ವಾಧೀನ: ಪರ್ಯಾಯ ನಿವೇಶನಕ್ಕೆ ಮುದ್ರಾಂಕ, ನೋಂದಣಿ ಶುಲ್ಕ ವಿಧಿಸುವಂತಿಲ್ಲ- ಹೈಕೋರ್ಟ್

ಬೆಂಗಳೂರು: ಸರ್ಕಾರ ಅಥವಾ ಮಹಾನಗರ ಪಾಲಿಕೆಗಳು ಸಾರ್ವಜನಿಕ ಉದ್ದೇಶಕ್ಕೆಂದು ಭೂಸ್ವಾಧೀನ ಮಾಡಿಕೊಂಡ ವೇಳೆ ಭೂಮಿ ಕಳೆದುಕೊಂಡ ಭೂ ಮಾಲೀಕರಿಗೆ ಪರಿಹಾರದ ರೂಪದಲ್ಲಿ ನೀಡುವ ಪರ್ಯಾಯ ನಿವೇಶನದ ಕ್ರಯಪತ್ರಕ್ಕೆ ಯಾವುದೇ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಡೆಯಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಮುದ್ರಾಂಕ, ನೋಂದಣಿ ಶುಲ್ಕ ವಸೂಲಿ ಮಾಡಿದ್ದ ಪಾಲಿಕೆಯ ನಿರ್ಧಾರ ಪ್ರಶ್ನಿಸಿ ಬೆಳಗಾವಿಯ ತಿಲಕವಾಡಿಯ ನಿವಾಸಿ ನಾರಾಯಣ್ ಹರಿಶ್ಚಂದ್ರ ಪೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಕಾನೂನುಬಾಹಿರವಾಗಿ ಭೂಮಿ ಪಡೆದು, 30 ವರ್ಷಗಳ ಕಾಲ ಸಂತ್ರಸ್ತರು ನ್ಯಾಯಾಂಗ ಹೋರಾಟ ಮಾಡಿದಂತಾಗಿದೆ. ಪಾಲಿಕೆ ಮಾಡಿದ ತಪ್ಪಿಗಾಗಿ ಭೂಮಿ ಕಳೆದುಕೊಂಡವರಿಂದ ತೆರಿಗೆ ವಸೂಲಿ ಮಾಡುವುದು ಸಂವಿಧಾನದ ಪರಿಚ್ಚೇದ 300ಎ (ಆಸ್ತಿಯ ಹಕ್ಕು) ಉಲ್ಲಂಘನೆ. ಒಂದು ವೇಳೆ ಶುಲ್ಕ ಕಟ್ಟಲೇಬೇಕಾಗಿದ್ದರೂ ಅದನ್ನು ಪಾಲಿಕೆಯೇ ಭರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.

ಭೂಸ್ವಾಧೀನ ಕಾಯ್ದೆ 1894ರ ಸೆಕ್ಷನ್ 51ರ ಪ್ರಕಾರ, ಭೂಸ್ವಾಧೀನ ಪ್ರಕ್ರಿಯೆಯಡಿ ನಡೆಯುವ ಯಾವುದೇ ಒಪ್ಪಂದ ಅಥವಾ ಆದೇಶಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದಿಂದ ವಿನಾಯಿತಿ ಇದೆ. ಪಾಲಿಕೆ ಇದನ್ನು ಸಾಮಾನ್ಯ ಹಕ್ಕು ವರ್ಗಾವಣೆ ಪತ್ರ ಎಂದು ಕರೆದ ತಕ್ಷಣ ವಿನಾಯಿತಿ ಇಲ್ಲದಾಗುವುದಿಲ್ಲ. ಇದು ವ್ಯಾಪಾರಕ್ಕಾಗಿ ನಡೆದ ಮಾರಾಟವಲ್ಲ, ಭೂಮಿ ಕಳೆದುಕೊಂಡವರಿಗೆ ನೀಡಿದ ಪರಿಹಾರ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು ಹಾಗೆಯೇ ಸಂತ್ರಸ್ತರಿಂದ ಕಾನೂನುಬಾಹಿರವಾಗಿ ಪಡೆದಿದ್ದ 5,04,784 ರೂ. ಮುದ್ರಾಂಕ ಶುಲ್ಕ ಮತ್ತು 90,140 ರೂ. ನೋಂದಣಿ ಶುಲ್ಕ ಸೇರಿ ಒಟ್ಟು 5.94 ಲಕ್ಷ ರೂ.ಗಳನ್ನು ಆದೇಶ ತಲುಪಿದ 8 ವಾರಗಳ ಒಳಗಾಗಿ ಅರ್ಜಿದಾರರಿಗೆ ಹಿಂದಿರುಗಿಸಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಮರುಪಾವತಿಸದಿದ್ದರೆ ಶೇ.6ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಹಣ ನೀಡಬೇಕಾಗುತ್ತದೆ ಎಂದು ನ್ಯಾಯಪೀಠವು ಸರ್ಕಾರಕ್ಕೆ ಗಡುವು ವಿಧಿಸಿತು.

ಪ್ರಕರಣದ ವಿವರ
ರಸ್ತೆ ಅಗಲೀಕರಣಕ್ಕಾಗಿ ಬೆಳಗಾವಿ ಮಹಾನಗರ ಪಾಲಿಕೆಯು 1994ರಲ್ಲಿ ಬೆಳಗಾವಿಯ ತಿಲಕವಾಡಿಯ ನಿವಾಸಿ ನಾರಾಯಣ್ ಹರಿಶ್ಚಂದ್ರ ಪೈ ಎಂಬವರ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಪಾಲಿಕೆಯು ಅವರಿಗೆ ಪರ್ಯಾಯ ನಿವೇಶನ ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಪಾಲಿಕೆಯು ನಿವೇಶನದ ಸಂಪೂರ್ಣ ಹಕ್ಕು ಹಸ್ತಾಂತರ ಮಾಡದಿದ್ದಾಗ ಸಂತ್ರಸ್ತರು ಸುದೀರ್ಘ ಕಾನೂನು ಹೋರಾಟ ನಡೆಸಿ, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಇವರ ಪರವಾಗಿ ತೀರ್ಪು ನೀಡಿತ್ತು. ಅಂತಿಮವಾಗಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಪಾಲಿಕೆಯ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು.

ವಿಚಾರಣೆ ನಡೆಯುತ್ತಿರುವ ವೇಳೆ ಪಾಲಿಕೆ 2025ರ ಮೇ 8ರಂದು ಬದಲಿ ನಿವೇಶನಕ್ಕಾಗಿ ಕ್ರಯಪತ್ರ ಮಾಡಿಕೊಟ್ಟಿತ್ತು. ಈ ವೇಳೆ ಅಧಿಕಾರಿಗಳು ಮುದ್ರಾಂಕ ಶುಲ್ಕವಾಗಿ 5,04,784 ರೂ. ಮತ್ತು ನೋಂದಣಿ ಶುಲ್ಕವಾಗಿ 90,140 ರೂ. ಹಣ ಬಲವಂತವಾಗಿ ವಸೂಲಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.