ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವ ಅಧಿಕಾರ SC-ST ಆಯೋಗಕ್ಕೆ ಇಲ್ಲ – ಹೈಕೋರ್ಟ್
ಬೆಂಗಳೂರು: ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಪ್ರಕರಣ ನಿರ್ಧರಿಸುವ, ವಿವಾದಗಳನ್ನು ಬಗೆಹರಿಸುವ ಅಧಿಕಾರ ಅಧಿಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ರಾಜ್ಯ ಸರ್ಕಾರ (ಅರಣ್ಯ ಇಲಾಖೆ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು, ಕಂದಾಯ ದಾಖಲೆಗಳನ್ನು ಬದಲಾಯಿಸುವುದು ಮತ್ತು ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿ ಎಂದು ಘೋಷಿಸಲು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧಿಕಾರವಿಲ್ಲ. ಅಲ್ಲದೆ, 2002ರ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯ ಅನ್ವಯ, ಆಯೋಗವು ಕೇವಲ ತನಿಖೆ ನಡೆಸುವ, ಸಲಹೆ ನೀಡುವ, ಮೇಲ್ವಿಚಾರಣೆ ಮಾಡುವ ಮತ್ತು ಶಿಫಾರಸು ಮಾಡುವ ಅಧಿಕಾರವನ್ನು ಮಾತ್ರ ಹೊಂದಿದೆಯೇ ವಿನಃ ಸಿವಿಲ್ ನ್ಯಾಯಾಲಯದಂತೆ ಆಸ್ತಿ ಹಕ್ಕುಗಳ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ತುಮಕೂರು ಜಿಲ್ಲೆಯ ಸಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿಯ ಶೀಬಿ ಗ್ರಾಮದ ವಿವಿಧ ಸರ್ವೆ ನಂಬರ್ಗಳಿಗೆ ಸಂಬಂಧಿಸಿದ ಜಮೀನುಗಳ ಖಾತೆ ಹಾಗೂ ಸ್ವಾಧೀನದ ಕುರಿತು ದೂರು ದಾಖಲಾಗಿತ್ತು. ಈ ಜಮೀನುಗಳು ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಅವುಗಳನ್ನು ಅರಣ್ಯ ಇಲಾಖೆಯ ದಾಖಲೆಗಳಿಂದ ಕೈಬಿಟ್ಟು, ಅರ್ಜಿದಾರರ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜ್ಯ ಎಸ್ಸಿ/ಎಸ್ಟಿ ಆಯೋಗವು 2023ರ ಮೇ 18ರಂದು ಆದೇಶಿಸಿತ್ತು.
ಈ ಮಧ್ಯೆ ಎಸ್ ಸಿ-ಎಸ್ ಟಿ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹೈಕೋರ್ಟ್ ಗೆ ಅರ್ಜಿ ದಾಖಲಿಸಿದ್ದರು.
ಇದರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಜಮೀನು ಅರಣ್ಯ ಭೂಮಿಯೇ ಅಥವಾ ಅಲ್ಲವೇ ಎಂಬ ಗಂಭೀರ ಪ್ರಶ್ನೆಗಳು ಮತ್ತು ದಾಖಲೆಗಳ ವಿವಾದವಿರುವಾಗ, ಆ ಕುರಿತು ನಿರ್ಣಯಿಸುವ ಅಧಿಕಾರ ಎಸ್ ಸಿ-ಎಸ್ ಟಿ ಆಯೋಗಕ್ಕಿಲ್ಲ. ಅಂತಹ ವಿಷಯಗಳನ್ನು ಸಮರ್ಥ ಪ್ರಾಧಿಕಾರಗಳು ಅಥವಾ ನ್ಯಾಯಾಲಯಗಳೇ ತೀರ್ಮಾನಿಸಬೇಕು. ಆಯೋಗದಲ್ಲಿ ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಮಾತ್ರಕ್ಕೆ, ಸಾಮಾನ್ಯ ಆಸ್ತಿ ಮತ್ತು ಕಂದಾಯ ವಿವಾದಗಳನ್ನು ಬಗೆಹರಿಸುವ ಅಧಿಕಾರವನ್ನು ಆಯೋಗ ಚಲಾಯಿಸಲು ಬರುವುದಿಲ್ಲ ಎಂದು ತಿಳಿಸಿ ಆಯೋಗದ ಆದೇಶವನ್ನು ರದ್ದುಪಡಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
