ಕೋರ್ಟ್ ಆವರಣದಲ್ಲಿನ ನಡವಳಿಕೆಯೂ ವೃತ್ತಿಪರ ನೈತಿಕತೆಯ ಭಾಗ- ವಕೀಲರಿಗೆ ಸುಪ್ರೀಂ ಸ್ಪಷ್ಟ ಸಂದೇಶ
ನವದೆಹಲಿ: ವಕೀಲರ ವೃತ್ತಿಪರತೆ ಕೇವಲ ಕೋರ್ಟ್ ರೂಮ್ ನಲ್ಲಿ ಮಾತ್ರ ಪರೀಕ್ಷಿಸಲ್ಪಡುವುದಿಲ್ಲ. ನ್ಯಾಯಾಲಯದ ಆವರಣದಲ್ಲಿನ ಅವರ ನಡವಳಿಕೆಯೂ ಅವರ ವೃತ್ತಿಪರ ನೈತಿಕತೆಯ ಭಾಗವೇ ಆಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ವಕೀಲರಿಗೆ ಸ್ಪಷ್ಟ ಸಂದೇಶ ಸಾರಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ವಕೀಲರು ತಮ್ಮ ಕಕ್ಷಿದಾರರೊಂದಿಗೆ ಮಾತ್ರವಲ್ಲದೆ, ಎದುರು ಪಕ್ಷದ ವಕೀಲರು ಮತ್ತು ಅವರ ಕಕ್ಷಿದಾರರೊಂದಿಗೂ ಗೌರವಯುತವಾಗಿ ನಡೆದುಕೊಳ್ಳಬೇಕು. ಒಬ್ಬ ವಕೀಲರು ತಮ್ಮ ಕಕ್ಷಿದಾರರ ಪರವಾಗಿ ದೃಢವಾಗಿ ವಾದಿಸಬಹುದು; ಆದರೆ ಅದೇ ಸಮಯದಲ್ಲಿ ಎದುರು ಪಕ್ಷದ ವಕೀಲರು ಮತ್ತು ಕಕ್ಷಿದಾರರೊಂದಿಗೆ ಗೌರವ ಮತ್ತು ಶಿಷ್ಟಾಚಾರ ಕಾಪಾಡಬೇಕು ಎಂದು ತಿಳಿಸಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರ ನಡವಳಿಕೆಯು ವಕೀಲರ ಕಾಯ್ದೆ (Advocates Act) 1961 ಅಡಿಯಲ್ಲಿ ವೃತ್ತಿಪರ ದುರ್ನಡತೆ (professional misconduct) ಎಂದು ಪರಿಗಣಿಸುವ ಸಂದರ್ಭದಲ್ಲಿ ಪ್ರಮುಖ ಅಂಶವಾಗಬಹುದು. ವಕೀಲರ ಕರ್ತವ್ಯವು ಕೇವಲ ತಮ್ಮ ಕಕ್ಷಿದಾರರ ಹಿತಾಸಕ್ತಿಗೆ ಸೀಮಿತವಾಗಿರುವುದಿಲ್ಲ. ಜೊತೆಗೆ ನ್ಯಾಯಾಲಯದ ಆವರಣದಲ್ಲಿ ಅವರು ತಮ್ಮ ಕಕ್ಷಿದಾರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು; ಹಾಗೆಯೇ ಎದುರು ಪಕ್ಷದ ವಕೀಲರೊಂದಿಗೆ ಶಿಷ್ಟಾಚಾರದಿಂದ ವರ್ತಿಸಬೇಕು. ಎದುರು ಪಕ್ಷದ ಕಕ್ಷಿದಾರರಿಗೂ ಗೌರವ ನೀಡಬೇಕು ಎಂದು ಸೂಚಿಸಿದೆ.
ಏನಿದು ಪ್ರಕರಣ..
ಇದು 2005ರಲ್ಲಿ ನಡೆದ ಘಟನೆಯಾಗಿದೆ. ಈ ಪ್ರಕರಣದಲ್ಲಿ, ಎದುರು ಪಕ್ಷದ ಕಕ್ಷಿದಾರರ ವಿರುದ್ಧ ಅಸಭ್ಯವಾಗಿ ವರ್ತಿಸಿದ ಆರೋಪ ವಕೀಲರ ಮೇಲಿತ್ತು. ಆರೋಪದ ಪ್ರಕಾರ, ನ್ಯಾಯಾಲಯದ ಶೌಚಾಲಯದಲ್ಲಿ ದೂರುದಾರರ ಕಾಲರ್ ಹಿಡಿದು, ಹಲ್ಲೆ ನಡೆಸಿ, ನಿಂದಿಸಿ ಮತ್ತು ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ವೃತ್ತಿಪರ ದುರ್ನಡತೆಯ ಕುರಿತು ಬಾರ್ ಕೌನ್ಸಿಲ್ ಮುಂದೆ ದೂರು ದಾಖಲಾಗಿತ್ತು. ಆರಂಭದಲ್ಲಿ, ದೂರುದಾರರು ಆ ವಕೀಲರ ನೇರ ಕಕ್ಷಿದಾರರಲ್ಲ ಎಂಬ ಕಾರಣದಿಂದ ದೂರು ವಜಾಗೊಂಡಿತ್ತು. ನಂತರ ಮರುಪರಿಶೀಲನೆಯ ಸಂದರ್ಭದಲ್ಲಿ ವಕೀಲರಿಗೆ ನೋಟಿಸ್ ಜಾರಿಯಾಗಿತ್ತು.
ನ್ಯಾಯಾಲಯದ ಆವರಣದಲ್ಲಿ ವಕೀಲರು ತೋರಿಸುವ ಅಸಭ್ಯ ನಡವಳಿಕೆಯನ್ನು ಸಂಬಂಧಪಟ್ಟ ರಾಜ್ಯ ಬಾರ್ ಕೌನ್ಸಿಲ್ & ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಡ್ವೋಕೇಟ್ ಆಕ್ಟ್ & ಪ್ರೊಫೆಸನಲ್ ಮಿಸ್ ಕಂಡಕ್ಟ್ ಎಂದು ಪರಿಗಣಿಸಬಹುದು.
ವೃತ್ತಿಪರ ಕಾನೂನು ಸೇವೆಗಳನ್ನು ಆಯ್ಕೆ ಮಾಡುವುದು ಅಂದರೆ, “ಈ ಘಟನೆ ಕೋರ್ಟ್ ರೂಮ್ ನೊಳಗೆ ನಡೆದಿಲ್ಲ” ಎಂಬ ಕಾರಣ ಮಾತ್ರದಿಂದ ವೃತ್ತಿಪರ ದುರ್ನಡತೆಯ ವಿಚಾರಣೆಯಿಂದ ವಕೀಲರು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ಘನತೆ ಮತ್ತು ಶಿಸ್ತನ್ನು ಕಾಪಾಡಬೇಕು; ಯಾವುದೇ ರೀತಿಯ ಅಸಭ್ಯ, ಬೆದರಿಕೆ ಅಥವಾ ಹಿಂಸಾತ್ಮಕ ವರ್ತನೆಯನ್ನು ತೋರಬಾರದು. ನ್ಯಾಯಾಲಯದ ಆವರಣದಲ್ಲಿನ misconduct ಕೂಡ ಗಂಭೀರವಾದ ಪ್ರಮಾದವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಘಟನೆ 2005ರಲ್ಲಿ ನಡೆದಿದ್ದು, ಸುಮಾರು 21 ವರ್ಷಗಳ ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಅಂತಿಮ ಹಂತಕ್ಕೆ ಬಂದಿತ್ತು. ಈ ದೀರ್ಘಾವಧಿಯನ್ನು ಗಮನಿಸಿದ ನ್ಯಾಯಾಲಯವು ಪ್ರಕರಣವನ್ನು ಮತ್ತೆ ಬಾರ್ ಕೌನ್ಸಿಲ್ ಗೆ ವಿಚಾರಣೆಗೆ ಕಳುಹಿಸುವ ಬದಲು, ಪ್ರಕರಣದ ಸ್ವರೂಪ ಮತ್ತು ವಿಚಾರಣೆಯ ಅವಕಾಶದ ಕೊರತೆ ಸೇರಿದಂತೆ ಒಟ್ಟಾರೆ ಪರಿಸ್ಥಿತಿಯನ್ನು ಪರಿಗಣಿಸಿ, ವಕೀಲರಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಅಂತಿಮವಾಗಿ ವಿಲೇವಾರಿ ಮಾಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
