29/08/2026

Law Guide Kannada

Online Guide

‘ಶಿಕ್ಷೆಯ ಅಮಾನತು’ ಮತ್ತು ‘ಅಪರಾಧ ನಿರ್ಣಯದ ಅಮಾನತು’ ನಡುವಿನ ವ್ಯತ್ಯಾಸಗಳೇನು..? ಸ್ಪಷ್ಟ ವಿವರಣೆ ನೀಡಿದ ಸುಪ್ರೀಂ

ನವದೆಹಲಿ: ಪ್ರಕರಣವೊಂದರ ಮೇಲ್ಮವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಶಿಕ್ಷೆಯ ಅಮಾನತು (suspension of sentence) ಮತ್ತು ಅಪರಾಧ ನಿರ್ಣಯದ ಅಮಾನತು (suspension of conviction) ನಡುವಿನ ವ್ಯತ್ಯಾಸವೇನೆಂಬುದರ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಿದೆ.

ಶಿಕ್ಷೆಯ ಅಮಾನತಿನೊಂದಿಗೆ ಅಪರಾಧ ನಿರ್ಣಯವೂ ಸ್ವಯಂಚಾಲಿತವಾಗಿ ಅಮಾನತುಗೊಳಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಕಲ್ಕತ್ತಾ ಹೈಕೋರ್ಟ್ 22.12.2025ರ ಆದೇಶದ ವಿರುದ್ಧ ಲಲಿತಾ ರಾಣಿ ಮಂಡಲ್ ಸಾಹಾ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಅಂಗೀಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಪೀಲು ವಿಚಾರಣೆಯು ಬಾಕಿ ಇರುವ ಅವಧಿಯಲ್ಲಿ ಅಪರಾಧ ನಿರ್ಣಯ ಮುಂದುವರಿದರೆ ತನಗೆ ನಿರ್ದಿಷ್ಟವಾದ, ಪರಿಹರಿಸಲಾಗದ ಪರಿಣಾಮ ಅಥವಾ ಗಂಭೀರ ಪೂರ್ವಾಗ್ರಹ (irreparable prejudice) ಉಂಟಾಗುತ್ತದೆ ಎಂಬುದನ್ನು ಅಪೀಲುದಾರನು ತೋರಿಸಿದಂತಹ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಮೇಲ್ಮನವಿ ನ್ಯಾಯಾಲಯವು ಅಪರಾಧ ನಿರ್ಣಯವನ್ನು ಅಮಾನತುಗೊಳಿಸಬಹುದು ಎಂದು ಪೀಠ ಹೇಳಿದೆ.

ದಂಡ ಪ್ರಕ್ರಿಯ ಸಂಹಿತೆ 389 ರ ಅಡಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಿದ ಮಾತ್ರಕ್ಕೆ ಅಪರಾಧ ನಿರ್ಣಯವನ್ನು (Conviction) ಅಮಾನತುಗೊಳಿಸಲಾಗುವುದಿಲ್ಲ. ನಿರ್ದಿಷ್ಟವಾದ ಮತ್ತು ಪರಿಹರಿಸಲಾಗದ ಹಾನಿ ಅಥವಾ ಗಂಭೀರ ಪೂರ್ವಾಗ್ರಹ ಉಂಟಾಗುತ್ತದೆ ಎಂಬುದನ್ನು ತೋರಿಸಬೇಕು. ಅಪರಾಧ ನಿರ್ಣಯದ ಅಮಾನತು ಭಿನ್ನವಾದ ಮತ್ತು ಅತ್ಯಂತ ಅಪರೂಪದ ಪರಿಹಾರವಾಗಿದೆ. ಪ್ರಸ್ತುತ BNSS ಸೆಕ್ಷನ್ 430ರಲ್ಲಿ ಇದೇ ಅಧಿಕಾರವಿದ್ದು ಅದು ಹಳೆಯ CrPCಯ ಸೆಕ್ಷನ್ 389ಕ್ಕೆ ಸಮಾನವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.

ಶಿಕ್ಷೆಯ ಅಮಾನತು ಮತ್ತು ಅಪರಾಧ ನಿರ್ಣಯದ ಅಮಾನತು ನಡುವಿನ ವ್ಯತ್ಯಾಸ ಈ ಕೆಳಕಂಡಂತಿದೆ.
ಶಿಕ್ಷೆಯ ಅಮಾನತು ಮತ್ತು ಅಪರಾಧ ನಿರ್ಣಯದ ಅಮಾನತು ನಡುವಿನ ವ್ಯತ್ಯಾಸದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ವಿವರಿಸಿದೆ. ಆ ಪ್ರಕಾರ ಶಿಕ್ಷೆಯ ಅಮಾನತು ಎಂದರೆ ಮೇಲ್ಮನವಿ ವಿಚಾರಣೆಯು ಬಾಕಿ ಇರುವ ಅವಧಿಯಲ್ಲಿ ವಿಧಿಸಲಾದ ಶಿಕ್ಷೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸದೆ ಇಡುವುದು. ಆದರೆ ಇದರಿಂದ ಆರೋಪಿಯ ತಪ್ಪಿತಸ್ಥನೆಂಬ ನಿರ್ಣಯ (finding of guilt) ರಾಗುವುದಿಲ್ಲ ಅಥವಾ ನಿಷ್ಕ್ರಿಯವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಅಪರಾಧ ನಿರ್ಣಯದ ಅಮಾನತು ನೀಡಿದಾಗ, ತಡೆಯಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಆ ಅಪರಾಧ ನಿರ್ಣಯವು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿರುತ್ತದೆ. ಅದರ ಪರಿಣಾಮವಾಗಿ ಉಂಟಾಗಬಹುದಾದ ಕಾನೂನು ಅನರ್ಹತೆಗಳು ಅಥವಾ ಇತರ ಪರಿಣಾಮಗಳನ್ನು ತಾತ್ಕಾಲಿಕವಾಗಿ ತಡೆಯಬಹುದು. ಆದರೆ, ಅಪರಾಧ ನಿರ್ಣಯವನ್ನು ಅಮಾನತುಗೊಳಿಸಿದರೂ ಅದು ಅಳಿದುಹೋಗುವುದಿಲ್ಲ. “ಅಪರಾಧ ನಿರ್ಣಯಕ್ಕೆ ತಡೆಯಾಜ್ಞೆ ನೀಡಿದ ದಿನಾಂಕದಿಂದ ಅದು ಕಾರ್ಯನಿರ್ವಹಿಸದ ಸ್ಥಿತಿಗೆ ಬರುತ್ತದೆ. ಆದರೆ ಅದರಿಂದ ಅಪರಾಧ ನಿರ್ಣಯ ಅಳಿದುಹೋಗುವುದಿಲ್ಲ ಅಥವಾ ಅಸ್ತಿತ್ವದಲ್ಲೇ ಇಲ್ಲದಂತಾಗುವುದಿಲ್ಲ.” ಅಪರಾಧ ನಿರ್ಣಯವನ್ನು ಅಮಾನತುಗೊಳಿಸಲು ಪ್ರತ್ಯೇಕ ಪರಿಗಣನೆ ಮತ್ತು ಕಾರಣಗಳನ್ನು ದಾಖಲಿಸುವುದು ಅಗತ್ಯ. ಅದು ಶಿಕ್ಷೆಯ ಅಮಾನತಿನ ಸ್ವಯಂಚಾಲಿತ ಅಥವಾ ಪಾರ್ಶ್ವ ಪರಿಣಾಮವಾಗಿ ದೊರೆಯಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಅಪರಾಧ ನಿರ್ಣಯವನ್ನು ಅಮಾನತುಗೊಳಿಸುವ ಅಧಿಕಾರ BNSS, 2023ರ ಸೆಕ್ಷನ್ 430ರ ಅಡಿಯಲ್ಲಿ ಮೇಲ್ಮನವಿ ನ್ಯಾಯಾಲಯಕ್ಕೆ ಅಪರಾಧ ನಿರ್ಣಯವನ್ನು ಅಮಾನತುಗೊಳಿಸುವ ಅಧಿಕಾರವಿದೆ. ಇದು ಹಳೆಯ CrPCಯ ಸೆಕ್ಷನ್ 389ಕ್ಕೆ ಸಮಾನವಾಗಿದೆ.

ಸುಪ್ರೀಂ ಕೋರ್ಟ್ ತನ್ನ ಹಿಂದಿನ Rama Narang v. Ramesh Narang (1995) ತೀರ್ಪನ್ನು ಉಲ್ಲೇಖಿಸಿ, ಈ ವಿಧಿಯಲ್ಲಿರುವ “order appealed against” ಎಂಬ ಪದಪ್ರಯೋಗವು ಅಪರಾಧ ನಿರ್ಣಯದ ಆದೇಶವನ್ನೂ ಒಳಗೊಂಡಷ್ಟು ವ್ಯಾಪಕವಾಗಿದೆ ಎಂದು ಹೇಳಿದೆ. ಆದರೆ, ಅಂತಹ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂಬ ಕಾರಣದಿಂದ ಪ್ರತಿಯೊಂದು ಪ್ರಕರಣದಲ್ಲಿಯೂ ಅಪರಾಧ ನಿರ್ಣಯವನ್ನು ಅಮಾನತುಗೊಳಿಸಬಹುದು ಎಂದರ್ಥವಲ್ಲ.

Ravikant S. Patil v. Sarvabhouma S. Bagali (2007) , ನಿರ್ಣಯಕ್ಕೆ ತಡೆಯಾಜ್ಞೆ ನೀಡುವುದು ಒಂದು ವಿನಾಯಿತಿ (exಛಿeಠಿಣioಟಿ) ಆಗಿದ್ದು, ವಿಶೇಷ ಸತ್ಯಾಂಶಗಳಿರುವ ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅದನ್ನು ಬಳಸಬೇಕು ಎಂದು ಹೇಳಿತ್ತು.

Lok Prahari v. Election Commission of India (2018) ಪುನರುಚ್ಚರಿಸಲಾಗಿತ್ತು. ಅಪರಾಧ ನಿರ್ಣಯವನ್ನು ಅಮಾನತುಗೊಳಿಸಲು ಬಯಸುವ ವ್ಯಕ್ತಿಯು, ಆ ನಿರ್ಣಯ ಜಾರಿಯಲ್ಲಿಯೇ ಮುಂದುವರಿದರೆ ತಾನು ಎದುರಿಸಬೇಕಾಗುವ ನಿರ್ದಿಷ್ಟ ಪರಿಣಾಮಗಳನ್ನು ಮೇಲ್ಮನವಿ ನ್ಯಾಯಾಲಯದ ಗಮನಕ್ಕೆ ಸ್ಪಷ್ಟವಾಗಿ ತರಬೇಕು ಎಂದು ಆ ತೀರ್ಪಿನಲ್ಲಿ ಹೇಳಲಾಗಿತ್ತು.

ಹೈಕೋರ್ಟ್ನ ಅಪರಾಧ ನಿರ್ಣಯದ ತಡೆಯಾಜ್ಞೆಯನ್ನು ಸುಪ್ರೀಂ ರದ್ದುಗೊಳಿಸಲು ಕಾರಣ…?
ಈ ಪ್ರಕರಣವು IPCಯ ಸೆಕ್ಷನ್ 143 ಮತ್ತು 302 ಜೊತೆಗೆ 34ರ ಅಡಿಯಲ್ಲಿ ಖಾಸಗಿ ಪ್ರತಿವಾದಿಗಳ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದೆ. ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಪ್ರಾಸಿಕ್ಯೂಷನ್ ಪ್ರಕಾರ, 25.03.2016ರಂದು, ಮಾರಾಟ ಒಪ್ಪಂದದಡಿ ಹಣ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಆರೋಪಿಗಳು ಮೃತರಾದ ಭಬತೋಷ್ ಸಾಹಾ @ ಬಾಬ್ಯಾ ಮತ್ತು ಪೂರ್ಣಚಂದ್ರ ಸಾಹಾ ಅವರನ್ನು ಅಮರ್ ದಾಸ್ ಎಂಬವರ ಮನೆಯ ಸಮೀಪಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ವಾಗ್ವಾದ ಉಂಟಾಗಿ, ಆರೋಪಿಗಳು ಹರಿತವಾದ ಆಯುಧಗಳಿಂದ ಮೃತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಅವರನ್ನು ಚಾಂಚಲ್ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಮೃತರ ಪತ್ನಿ ಹಾಗೂ ದೂರುದಾರರಾದ ಮೇಲ್ಮನವಿದಾರರು, ಹೈಕೋರ್ಟ್ ಅಪರಾಧ ನಿರ್ಣಯದ ಜಾರಿಗೆ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ಮೇಲ್ಮನವಿಯನ್ನ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಹೈಕೋರ್ಟ್ ಮುಂದೆ ಅಪರಾಧ ನಿರ್ಣಯವನ್ನು ಅಮಾನತುಗೊಳಿಸುವಂತೆ ಯಾವುದೇ ನಿರ್ದಿಷ್ಟ ಮನವಿ ಸಲ್ಲಿಸಲಾಗಿರಲಿಲ್ಲ. ಅಪರಾಧ ನಿರ್ಣಯ ಮುಂದುವರಿದರೆ ತಮಗೆ ಉಂಟಾಗುವ ಯಾವುದೇ ನಿರ್ದಿಷ್ಟ ಅನರ್ಹತೆ, ಹಿಂತಿರುಗಿಸಲಾಗದ ಪರಿಣಾಮ ಅಥವಾ ಅಪರೂಪದ ಗಂಭೀರ ಪೂರ್ವಾಗ್ರಹವನ್ನು ಪ್ರತಿವಾದಿಗಳು ವಿವರಿಸಿರಲಿಲ್ಲ.

ಪ್ರಾಸಿಕ್ಯೂಷನ್ ಸಾಕ್ಷ್ಯದಲ್ಲಿ ಕೆಲವು ಸುಧಾರಣೆಗಳಿವೆ ಎಂಬ ವಾದ, ಮೇಲ್ಮನವಿಯಲ್ಲಿ ಪರಿಗಣಿಸಬಹುದಾದ ವಿಚಾರಗಳಿವೆ ಎಂಬ ಅಂಶ ಮತ್ತು ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಜಾಮೀನಿನಲ್ಲಿದ್ದು ಅದನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿತ್ತು. ಆದರೆ, ಈ ಅಂಶಗಳು ಶಿಕ್ಷೆಯನ್ನು ಅಮಾನತುಗೊಳಿಸಲು ಮತ್ತು ಜಾಮೀನು ನೀಡಲು ಸಂಬಂಧಿಸಿದ ವಿಚಾರಗಳಾಗಬಹುದು; ಅಪರಾಧ ನಿರ್ಣಯವನ್ನು ಅಮಾನತುಗೊಳಿಸಲು ಅಗತ್ಯವಾದ ಅಪರೂಪದ ಸಂದರ್ಭಗಳನ್ನು ಅವು ಸಾಬೀತುಪಡಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು.

ಸುಪ್ರೀಂ ಕೋರ್ಟ್ ಅಪರಾಧ ನಿರ್ಣಯದ ಜಾರಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್ ಆದೇಶದ ಆ ಭಾಗವನ್ನು ರದ್ದುಗೊಳಿಸಿತು, ಆದರೆ, ಹೈಕೋರ್ಟ್ ನೀಡಿದ್ದ ಶಿಕ್ಷೆಯ ( Sentence) ಅಮಾನತು ಮತ್ತು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಆದೇಶ ಇವುಗಳನ್ನು ಹೈಕೋರ್ಟ್ ವಿಧಿಸಿದ್ದ ಷರತ್ತುಗಳಿಗೆ ಒಳಪಟ್ಟು ಸುಪ್ರೀಂ ಕೋರ್ಟ್ ಮುಂದುವರಿಯಲು ಅವಕಾಶ ನೀಡಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.