ಜನನ ಪ್ರಮಾಣಪತ್ರದಲ್ಲಿ ಮಲ ತಂದೆಯ ಹೆಸರು: ಹೈಕೋರ್ಟ್ ನಿಂದ ಮಹತ್ವದ ತೀರ್ಪು ಪ್ರಕಟ
ಕೊಲ್ಕತ್ತಾ: ಭಾರತದ ಕಾನೂನಿನ ಪ್ರಕಾರ, ಮಗುವಿನ ಜನನ ಪ್ರಮಾಣ ಪತ್ರದಲ್ಲಿ (Birth Certificate) ಜೈವಿಕ ತಂದೆಯ (Biological Father) ಹೆಸರನ್ನು ತೆಗೆದು ಮಲ ತಂದೆಯ (Step-father) ಹೆಸರನ್ನು ನೇರವಾಗಿ ಸೇರಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಮಲ ತಂದೆಯ ಹೆಸರನ್ನು ಸೇರಿಸಬೇಕಾದರೆ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಆದರೂ ಮಗುವಿನ ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಹೆಸರಿನ ಬದಲಿಗೆ ಮಲ ತಂದೆಯ ಹೆಸರನ್ನ ನಮೂದಿಸಬಹುದೇ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ.
ಅಪ್ರಾಪ್ತ ಮಗುವಿನ ಹಿತಾಸಕ್ತಿಗೆ ಅನುಕೂಲವಾಗಿದ್ದರೆ ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಹೆಸರಿನ ಬದಲಿಗೆ ಮಲ ತಂದೆಯ ಹೆಸರನ್ನು ನಮೂದಿಸಬಹುದು ಎಂದು ಕೊಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ರಾಜಾ ಬಸು ಚೌಧುರಿ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಗುವಿನ ಪರವಾಗಿ ಅವರ ತಾಯಿ ಬರ್ನಾಲಿ ಘೋಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅಕೆಲ್ಲಾ ಲಲಿತಾ ವಿರುದ್ಧ ಕೊಂಡ ಹನುಮಂತ ರಾವ್ (2022 SCC Online SC 928) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಪೀಠ ಮಗುವಿನ ಉಪ ನಾಮ ಮತ್ತು ಐಡೆಂಟಿಟಿಯನ್ನು ನಿರ್ಧರಿಸುವ ಹಕ್ಕು ಮಗುವಿನ ತಾಯಿಗೆ ಇದೆ ಎಂದು ತೀರ್ಪು ಪ್ರಕಟಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
