ಆರೈಕೆ ಷರತ್ತಿಲ್ಲದ ಆಸ್ತಿಯ ದಾನಪತ್ರ ರದ್ಧು ಸಾಧ್ಯವಿಲ್ಲ: ಹೈಕೋರ್ಟ್
ಬೆಂಗಳೂರು: ಸೊಸೆಗೆ ಬರೆದುಕೊಟ್ಟ ಆಸ್ತಿಯ ದಾನಪತ್ರದಲ್ಲಿ ಆರೈಕೆ ಷರತ್ತಿಲ್ಲದಿದ್ದರೇ ಆ ಆಸ್ತಿಯ ದಾನಪತ್ರ ರದ್ಧುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಮಾವನ ಪರ ಆದೇಶ ವಜಾಗೊಳಿಸಿ ಸೊಸೆಗೆ ಆಸ್ತಿ ಹಕ್ಕು ಹಿಂದಿರುಗಿಸಿದೆ.
ಸೊಸೆಗೆ ನೀಡಿದ್ದ ದಾನಪತ್ರವನ್ನು ಅಸಿಂಧುಗೊಳಿಸಿ ಆಸ್ತಿಯನ್ನು ಮಾವನಿಗೆ ಮರಳಿಸಿದ್ದ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿತು.
ಆಸ್ತಿ ವರ್ಗಾವಣೆ ರದ್ದಿಗೆ ಹಿರಿಯರ ಆರೈಕೆ ಷರತ್ತು ಇರಬೇಕು
ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 23ರ ಅಡಿ ಆಸ್ತಿ ವರ್ಗಾವಣೆಗಳನ್ನು ರದ್ದುಪಡಿಸಬೇಕಾದರೆ, ಆ ದಾನಪತ್ರದಲ್ಲಿ ಹಿರಿಯ ನಾಗರಿಕರಿಗೆ ಮೂಲಸೌಕರ್ಯ ಮತ್ತು ಇತರ ಅಗತ್ಯಗಳನ್ನು ಪೂರೈಸುವ ಕಡ್ಡಾಯ ಷರತ್ತು ಇರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಷರತ್ತುಗಳಿಲ್ಲದೆ ಸ್ವಯಂಪ್ರೇರಿತರಾಗಿ ಆಸ್ತಿಯನ್ನು ಸೊಸೆಗೆ ನೀಡಲಾಗಿದೆ. ಆದ್ದರಿಂದ, ನಂತರ ಉದ್ಭವಿಸಿದ ಕೌಟುಂಬಿಕ ಸಮಸ್ಯೆಗಳ ಕಾರಣ ದಾನಪತ್ರವನ್ನು ರದ್ದುಪಡಿಸಲು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯನ್ನು ಬಳಸಲು ಅವಕಾಶವಿಲ್ಲ.
ಕಾಯ್ದೆ ಅಡಿಯಲ್ಲಿ ಬರುವ ಮಕ್ಕಳು ಅಥವಾ ಮಕ್ಕಳಿಲ್ಲದಿರುವ ಹಿರಿಯ ನಾಗರಿಕರ ಸಂಬಂಧಿಕರ ವ್ಯಾಪ್ತಿಗೆ ಸೊಸೆಯು ಬರುವುದಿಲ್ಲ. ಪಾಲಕರನ್ನು ನೋಡಿಕೊಳ್ಳುವ ಪ್ರಾಥಮಿಕ ಜವಾಬ್ದಾರಿಯು ಮಕ್ಕಳ ಮೇಲಿರುತ್ತದೆಯೇ ಹೊರತು ಸೊಸೆಯ ಮೇಲಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿತು.
ಏನಿದು ವಿವಾದ; ಮಗನ ಬಿಟ್ಟು ಸೊಸೆ ಹೆಸರಿಗೇಕೆ ಆಸ್ತಿ ವರ್ಗಾವಣೆ.
ಬೆಂಗಳೂರಿನ ಬ್ಯಾಟರಾಯನಪುರದ ವ್ಯಕ್ತಿಯೊಬ್ಬರು ತಮ್ಮ ಮಗ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದ ಹಿನ್ನೆಲೆಯಲ್ಲಿ, ಸೊಸೆ ಮತ್ತು ಮೊಮ್ಮಗನ ಭವಿಷ್ಯದ ರಕ್ಷಣೆಗಾಗಿ ಆಸ್ತಿಯನ್ನ ಅವರ ಹೆಸರಿಗೆ ನೋಂದಾಯಿಸಿದ್ದರು.
ತಮಗೆ ಸೇರಿದ್ದ 10 ವಸತಿ ಘಟಕಗಳನ್ನು ಹೊಂದಿರುವ ಆಸ್ತಿಯನ್ನು ಸೊಸೆ ಮತ್ತು ಮೊಮ್ಮಗನ ಮೊಮ್ಮಗನ ಹೆಸರಿಗೆ 2020ರ ಅಕ್ಟೋಬರ್ ನಲ್ಲಿ ದಾನಪತ್ರ (ರಿಜಿರ್ಸ್ಟ ಗಿಫ್ಟ್ ಡೀಡ್) ಮೂಲಕ ನೋಂದಾಯಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ ಸೊಸೆಯು ಮನೆಯಿಂದ ಹೊರಬಂದಿದ್ದರು. 2022ರಲ್ಲಿ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದ ಮಾವ, ಸೊಸೆಯು ತಮಗೆ ಮೂಲಸೌಕರ್ಯಗಳನ್ನು ಪೂರೈಸದ ಹಿನ್ನಲೆಯಲ್ಲಿ ದಾನಪತ್ರವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ಮನವಿಯನ್ನು ನ್ಯಾಯಮಂಡಳಿ ಪುರಸ್ಕರಿಸಿತ್ತು. ಆದರೆ ಈ ಆದೇಶವನ್ನು ರದ್ದುಕೋರಿ ಸೊಸೆ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಬಹಿರಂಗಗೊಂಡ ಬಾಲ್ಯವಿವಾಹದ ವಿಚಾರ, ತನಿಖೆಗೆ ಆದೇಶ
ಅರ್ಜಿ ವಿಚಾರಣೆ ವೇಳೆ ಬಾಲ್ಯವಿವಾಹದ ವಿಚಾರ ಬಹಿರಂಗಗೊಂಡಿದೆ. ಅರ್ಜಿದಾರರಿಗೆ (ಸೊಸೆ) ತಮ್ಮ 15ನೇ ವಯಸ್ಸಿನಲ್ಲಿ ಸೋದರ ಮಾವನ ಮಗನ ಜತೆ ವಿವಾಹವಾಗಿತ್ತು. ಅರ್ಜಿದಾರರು ಮದುವೆಯಾಗುವಾಗ ಅಪ್ರಾಪ್ತಯಾಗಿದ್ದರು ಎಂಬ ಅಂಶವನ್ನು ವಿಚಾರಣೆ ವೇಳೆ ಗಮನಿಸಿದ ನ್ಯಾಯಪೀಠ, ಇದನ್ನು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿದ್ದು, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
