04/09/2026

Law Guide Kannada

Online Guide

SC-ST ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ: FIR ಮತ್ತು ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಸಿವಿಲ್ ವಿವಾದದಿಂದ ಉಂಟಾಗುವ ವದಂತಿಗಳನ್ನು ಅಪರಾಧ ಪ್ರಕ್ರಿಯೆಗೆ ಒಳಪಡಿಸಿ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗಪಡಿಸಿಕೊಂಡಿದ್ದಕ್ಕೆ ಕಿಡಿಕಾರಿದ ಕರ್ನಾಟಕ ಹೈಕೋರ್ಟ್ ಈ ಸಂಬಂಧ ದಾಖಲಾಗಿದ್ದ ಎಫ್ ಐಆರ್ ಮತ್ತು ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಿ ಆದೇಶಿಸಿದೆ.

‘ನಮ್ಮ ವಿರುದ್ಧದ ಎಫ್ ಐಆರ್ ಹಾಗೂ ಇದಕ್ಕೆ ಸಂಬಂಧಿಸಿದ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಕೋರಿ ಮಂಜುನಾಥ್ ಮತ್ತು ಇತರರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ಅರ್ಜಿದಾರರ ವಿರುದ್ಧ’ದೂರುದಾರರು ಸೇಡು ತೀರಿಸಿಕೊಳ್ಳಲು ಮತ್ತು ವಿಚಾರಣೆಗೆ ಬಾಕಿ ಇರುವ ಸಿವಿಲ್ ಮೊಕದ್ದಮೆಗಳಲ್ಲಿ ವ್ಯಾಜ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಳ್ಳಲು ಈ ಪ್ರಕರಣವನ್ನು ಒಂದು ಸಾಧನವಾಗಿದೆ ಬಳಸಿದ್ದಾರೆ ಎಂಬುದು ನಿಸ್ಸಂದೇಹವಾಗಿ ಗೋಚರಿಸುತ್ತದೆ. ಸಿವಿಲ್ ವಿವಾದದಿಂದ ಉಂಟಾಗುವ ವದಂತಿಗಳನ್ನು ಅಪರಾಧ ಪ್ರಕ್ರಿಯೆಗೆ ಒಳಪಡಿಸಿ ಅತೃಪ್ತ ದಾವೆದಾರನ ಕೈಯಲ್ಲಿ ಅದನ್ನೊಂದು ಆಯುಧವಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಸಿವಿಲ್ ವ್ಯಾಜ್ಯಕ್ಕೆ ಅಪರಾಧದ ಸೋಗು ಹೊದಿಸಿ ತಮ್ಮ ಎದುರುದಾರರ ವಿರುದ್ಧ ಆರೋಪದ ಮಸಿ ಬಳಿದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಎಸ್ಸಿ-ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಕ್ರಿಮಿನಲ್ ಕಾನೂನಿನ ಕಕ್ಷೆಯೊಳಗೆ ತಂದು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿದ ನ್ಯಾಯಪೀಠವು ಪ್ರಕರಣ ಸಂಬಂಧ ಎಫ್ ಐಆರ್ ಮತ್ತು ನ್ಯಾಯಿಕ ಪ್ರಕ್ರಿಯೆಯನ್ನ ರದ್ದುಗೊಳಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ..
ಪ್ರಕರಣದ ದೂರುದಾರಾದ ಎಂ.ಉಮಾ ಹಾಗೂ ಅತ್ತಿಬೆಲೆಯ ಮಂಜುನಾಥ್ ಸೇರಿದಂತೆ 7 ಜನ ಆರೋಪಿಗಳ ನಡುವೆ 2016ರಿಂದ ಆನೇಕಲ್ ತಾಲ್ಲೂಕು ಜಿಗಣಿ ಹೋಬಳಿಯ ಮಹಾಲಿಂಗಪುರದಲ್ಲಿರುವ 6.20 ಎಕರೆ ಜಮೀನಿಗೆ ಸಂಬಂಧಿಸಿದಂತೆ ಸಿವಿಲ್ ವ್ಯಾಜ್ಯ ನಡೆಯುತ್ತಿದೆ. ಆರೋಪಿಗಳು ನಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ ಮತ್ತು ವಿವಾದಿತ ಜಮೀನಿನಲ್ಲಿರುವ ನಮ್ಮ ಪೂರ್ವಜನರ ಸಮಾಧಿಯನ್ನು ಧ್ವಂಸಗೊಳಿಸಿದ್ದಾರೆ’ ಎಂದು ಆರೋಪಿಸಿ ದೀಪಾಂಜಲಿ ನಗರದಲ್ಲಿರುವ ಎಂ.ಉಮಾ ಅನೇಕಲ್ ತಾಲ್ಲೂಕು ಜಿಗಣಿ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ-1989ರ ಕಲಂ 3(1)(ಆರ್), 3(1)(ಎಸ್), 3(1)(ಟಿ), 3(1)(ಎ), 3(1(ಝಡ್ ಎ) ಹಾಗೂ ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 329, 351 ಮತ್ತು 45ರ ಅಡಿಯಲ್ಲಿ 2025ರ ಫೆಬ್ರುವರಿ 4ರಂದು ಎಫ್ಐಆರ್ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ‘ದೂರಿನ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಿ’ ಎಂದು 2025ರ ಮೇ 19ರಂದು ಜಿಗಣಿ ಪೊಲೀಸರಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.