2006ಕ್ಕೂ ಮೊದಲು ಸೇವೆ ಸಲ್ಲಿಸಿ ನಂತರ ಖಾಯಂಗೊಂಡ ನೌಕರರು ಒಪಿಎಸ್ ಗೆ ಅರ್ಹರು – ಹೈಕೋರ್ಟ್
ಚಂಡಿಗಢ: 2006ಕ್ಕೂ ಮೊದಲು ಅರೆಕಾಲಿಕ ತಾತ್ಕಾಲಿಕ ಸೇವೆ ಸಲ್ಲಿಸಿ, ನಂತರ ಖಾಯಂಗೊಂಡ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಅರ್ಹರು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.
ಖಾಯಂಗೊಳಿಸಲ್ಪಟ್ಟ ನೌಕರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ಅಂಗೀಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹರ್ಪ್ರೀತ್ ಸಿಂಗ್ ಬ್ರಾರ್ ಅವರಿದ್ದ ಪೀಠವು, ಅರ್ಜಿದಾರರ ಕಾಯಂಗೊಳಿಸುವಿಕೆಯ ಪೂರ್ವದ ಸೇವೆಯನ್ನು ಪರಿಗಣಿಸದೆ ಪಿಂಚಣಿ ಸೌಲಭ್ಯ ನಿರಾಕರಿಸಿದ್ದ ಆಕ್ಷೇಪಿತ ಆದೇಶಗಳನ್ನು ರದ್ದು ಪಡಿಸಿದರು.
1 ಜನವರಿ 2006ಕ್ಕೂ ಮೊದಲು ಪಾರ್ಟ್ ಟೈಮ್/ತಾತ್ಕಾಲಿಕ (ad hoc) / ತಾತ್ಕಾಲಿಕ ನೇಮಕಾತಿ /ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು, ನಂತರ ಅವರ ಹಿಂದಿನ ಸೇವೆಯನ್ನು ಪರಿಗಣಿಸಿ ಖಾಯಂಗೊಳಿಸಲ್ಪಟ್ಟ ನೌಕರರು ಹಳೆಯ ಪಿಂಚಣಿ ಯೋಜನೆ (Old Pension Scheme-OPS) ಪಡೆಯಲು ಅರ್ಹರಾಗಿದ್ದಾರೆ. ಇದಲ್ಲದೆ, 28 ಅಕ್ಟೋಬರ್ 2005ಕ್ಕೂ ಮೊದಲು ಹೊರಡಿಸಲಾದ ನೇಮಕಾತಿ ಜಾಹೀರಾತಿನ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ, 1 ಜನವರಿ 2006ರ ನಂತರ ನೇಮಕಗೊಂಡ ನೌಕರರು ಕೂಡ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರು ಎಂದು ನ್ಯಾಯಾಲಯವು ಅರ್ಜಿಗಳನ್ನು ಅಂಗೀಕರಿಸಿದೆ.
ಅದೇ ರೀತಿ, ಅನುಕಂಪದ ಆಧಾರದ ಅಥವಾ ಎಕ್ಸ್ ಗ್ರೇಷಿಯಾ (ex-gratia) ಆಧಾರದ ನೇಮಕಾತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ, ನೌಕರರ ಸೇವೆಯಲ್ಲಿರುವಾಗಲೇ ಆತನ ಮರಣವು 28 ಅಕ್ಟೋಬರ್ 2005ಕ್ಕೂ ಮೊದಲು ಸಂಭವಿಸಿದ್ದರೆ ಮತ್ತು ಅನುಕಂಪದ ನೆಲೆಯಲ್ಲಿ ನೇಮಕಾತಿಗಾಗಿ ಅರ್ಜಿ/ದಾವೆ ಪ್ರಕ್ರಿಯೆಯು ಸಹ ಆ ದಿನಾಂಕಕ್ಕೂ ಮೊದಲು ಆರಂಭವಾಗಿದ್ದರೆ, ನಂತರ ಔಪಚಾರಿಕ ನೇಮಕಾತಿ ನಡೆದಿದ್ದರೂ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನ ದೊರೆಯುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹರಿಯಾಣ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ, ಅರ್ಜಿದಾರರು ಖಾಯಂಗೊಳ್ಳುವ ಮೊದಲು ಪಾರ್ಟ್ ಟೈಮ್/ತಾತ್ಕಾಲಿಕ/ಚಿಜ hoಛಿ/ಗುತ್ತಿಗೆ ಆಧಾರದ ಮೇಲೆ ಸಲ್ಲಿಸಿದ ಸೇವೆಯನ್ನು ಪಿಂಚಣಿ ಪ್ರಯೋಜನಕ್ಕಾಗಿ ಅರ್ಹತಾ ಸೇವೆ (qualifying service) ಎಂದು ಪರಿಗಣಿಸುವಂತೆ ನಿರ್ದೇಶಿಸಲಾಯಿತು. ಅಲ್ಲದೆ, ಅವರಿಗೆ ಹಳೆಯ ಪಿಂಚಣಿ ಯೋಜನೆಯ (OPS) ಪ್ರಯೋಜನ ಹಾಗೂ ಅದರ ಪರಿಣಾಮವಾಗಿ ದೊರೆಯುವ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು, ಬಾಕಿ ಮೊತ್ತ ಸೇರಿದಂತೆ, ಆದೇಶದ ಪ್ರಮಾಣೀಕೃತ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಆರು ವಾರಗಳೊಳಗೆ ನೀಡುವಂತೆ ನ್ಯಾಯಪೀಠವು ಆದೇಶಿಸಿತ್ತು.
ಅನುಕಂಪದ ಆಧಾರದ ನೇಮಕಾತಿ ಪ್ರಕರಣಗಳಿಗೂ ಒಪಿಎಸ್
ಅನುಕಂಪದ ಆಧಾರದ/ಎಕ್ಸ್ ಗ್ರೇಷಿಯಾ ನೇಮಕಾತಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ನ್ಯಾಯಮೂರ್ತಿ ಬ್ರಾರ್ ಅವರು, ಕಟ್-ಆಫ್ ದಿನಾಂಕಕ್ಕೂ ಮೊದಲು ನೌಕರರು ಸೇವೆಯಲ್ಲಿರುವಾಗ ಮರಣ ಹೊಂದಿದ್ದರೆ ಮತ್ತು ಅನುಕಂಪದ ನೆಲೆಯಲ್ಲಿ ನೇಮಕಾತಿಗಾಗಿ ಅರ್ಜಿ ಅಥವಾ ದಾವೆ ಪ್ರಕ್ರಿಯೆಯೂ ಅದಕ್ಕೂ ಮೊದಲು ಆರಂಭವಾಗಿದ್ದರೆ, ನಂತರ ನಡೆದ ನೇಮಕಾತಿಯನ್ನು ಹೊಸ ಪ್ರಕ್ರಿಯೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಂತರ ನಡೆದ ನೇಮಕಾತಿಯು 28 ಅಕ್ಟೋಬರ್ 2005ಕ್ಕೂ ಮೊದಲು ಆರಂಭಗೊಂಡಿದ್ದ ಪ್ರಕ್ರಿಯೆಯ ಅಂತಿಮ ಹಂತ (culmination) ಮಾತ್ರವಾಗಿದೆ. ಔಪಚಾರಿಕ ನೇಮಕಾತಿಯಲ್ಲಿ ಉಂಟಾದ ವಿಳಂಬವು ಅರ್ಜಿದಾರರ ಕಾರಣದಿಂದ ಆಗಿಲ್ಲದಿದ್ದರೆ, ಅದರ ದುಷ್ಪರಿಣಾಮವನ್ನು ಅರ್ಜಿದಾರರ ಮೇಲೆ ಹೊರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಹೀಗಾಗಿ, 28 ಅಕ್ಟೋಬರ್ 2005ಕ್ಕೂ ಮೊದಲು ಸೇವೆಯಲ್ಲಿದ್ದ ನೌಕರರ ಮರಣ ಸಂಭವಿಸಿ, ಅನುಕಂಪದ ಆಧಾರದ ಅಥವಾ ಎಕ್ಸ್ ಗ್ರೇಷಿಯಾ ನೇಮಕಾತಿಗಾಗಿ ಅರ್ಜಿ/ದಾವೆಯೂ ಅದಕ್ಕೂ ಮೊದಲು ಆರಂಭವಾಗಿದ್ದ ಪ್ರಕರಣಗಳಲ್ಲಿ, ಅರ್ಜಿದಾರರು 8 ಮೇ 2023ರ ಕಚೇರಿ ಜ್ಞಾಪನ ಪತ್ರದ ಪ್ರಯೋಜನ ಪಡೆಯಲು ಅರ್ಹರು ಎಂದು ನ್ಯಾಯಪೀಠ ತಿಳಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
