09/09/2026

Law Guide Kannada

Online Guide

ನ್ಯಾಯದಾನದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ‘ನ್ಯಾ. ನಾಗಪ್ರಸನ್ನ’: ವ್ಯಾಪಕ ಪ್ರಶಂಸೆ, ಕ್ಷೀರಾಭಿಷೇಕ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಆರು ವರ್ಷಗಳಲ್ಲಿ 22 ಸಾವಿರಕ್ಕೂ ಹೆಚ್ಚು ಜಟಿಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅಪೂರ್ವ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದು ಇವರ ನ್ಯಾಯಾಂಗ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನ್ಯಾಯದಾನದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, 6 ವರ್ಷಗಳಿಗೂ ಕಡಿಮೆ ಅವಧಿಯಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣಗಳ ವಿಲೇವಾರಿ ಮಾಡುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಹೀಗಾಗಿ ನ್ಯಾ, ನಾಗಪ್ರಸನ್ನ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ರೈತ ಸಂಘವು ತಮ್ಮ ಅಭಿಮಾನ ವ್ಯಕ್ತಪಡಿಸಿದೆ.

ನ್ಯಾ.ನಾಗಪ್ರಸನ್ನ ಅವರು ವಕೀಲ ವೃಂದದಿಂದ ನೇರವಾಗಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2019ರ ನವೆಂಬರ್ ನಲ್ಲಿ ನೇಮಕಗೊಂಡ ನಂತರ ಪ್ರಕರಣಗಳ ವಿಲೇವಾರಿಯಲ್ಲಿ ವಿನೂತನ ದಾಖಲೆಗಳನ್ನು ನಿರ್ಮಿಸುತ್ತಿರುವುದು ಗಮನಾರ್ಹವಾಗಿದೆ.

ಕಳೆದ ಬುಧವಾರ(ಸೆ.2)ರಂದು ನ್ಯಾ. ನಾಗಪ್ರಸನ್ನ ಅವರು ಒಂದೇ ದಿನ ತುರ್ತು ವಿಚಾರಣೆಗೆ ಕೋರಿದ್ದ 250ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸುವ ಮೂಲಕ ಹೊಸ ಇತಿಹಾಸ ಬರೆದರು. ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ನಡೆಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯಗೊಳಿಸಿದರು. ಬೆಳಿಗ್ಗೆ ಎಂದಿನಂತೆ ಕಲಾಪದಲ್ಲಿ ತುರ್ತು ವಿಚಾರಣೆಗೆ ಕೋರಲಾದ 250ಕ್ಕೂ ಹೆಚ್ಚು ಮೆಮೊ ಸ್ವೀಕರಿಸಿ ಅವುಗಳನ್ನು ಮಧ್ಯಾಹ್ನದ ಕಲಾಪ ಪಟ್ಟಿಗೆ ಅಣಿಗೊಳಿಸುವಂತೆ ಆದೇಶಿಸಿದರು. ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯ ಗೊಳಿಸಿದರು.

ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು. ವಿಚಾರಣೆಯಲ್ಲಿ ಕಿಕ್ಕಿರಿದ್ದ ಹಿರಿ-ಕಿರಿಯ ವಕೀಲರು “ನ್ಯಾಯಮೂರ್ತಿಗಳು ದಿನವೊಂದರಲ್ಲಿ 10 ಗಂಟೆಗಳ ನಿರಂತರ ಕಲಾಪ ನಡೆಸಿದ ಹೆಗ್ಗಳಿಕೆ ಹೊಂದುವ ಮೂಲಕ ದೇಶದ ಹೈಕೋರ್ಟ್ ಗಳ ಇತಿಹಾಸದಲ್ಲಿ ಹೊಸ ಹೆಜ್ಜೆ ಮೂಡಿಸಿದ್ದೀರಿ” ಎಂದು ನ್ಯಾ.ನಾಗಪ್ರಸನ್ನ ಅವರನ್ನು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.