06/09/2026

Law Guide Kannada

Online Guide

ಬಟನ್ ಒತ್ತುವ ಮೂಲಕ ತೀರ್ಪು ನೀಡಲು ಸಾಧ್ಯವೇ? ಡಿವೋರ್ಸ್ ಕೇಸ್ ನಲ್ಲಿ ಹೈಕೋರ್ಟ್ ತರಾಟೆ, ಅರ್ಜಿ ವಜಾ.

ಬೆಂಗಳೂರು: ತಮ್ಮ ವಿಚ್ಛೇದನ ಅರ್ಜಿಯನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲು ಕೌಟುಂಬಿಕ ನ್ಯಾಯಾಲಯಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ವ್ಯಕ್ತಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡು ಅರ್ಜಿಯನ್ನ ವಜಾಗೊಳಿಸಿದೆ.

‘ನ್ಯಾಯ ಎಂಬುದು ಕೇವಲ ಪ್ರಕರಣಗಳನ್ನು ಮುಗಿಸುವ ವೇಗಕ್ಕೆ ಸೀಮಿತವಾಗಿಲ್ಲ. ಒಂದು ಬಟನ್ ಒತ್ತುವ ಮೂಲಕ ತೀರ್ಪುಗಳನ್ನು ಪಡೆಯಲು ಸಾಧ್ಯವಿಲ್ಲ. ಇಂತಿಷ್ಟೇ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಸಾಧ್ಯವಿಲ್ಲಎಂದು ಹೈಕೋರ್ಟ್ ಛೀಮಾರಿ ಹಾಕಿದೆ.

ತಮ್ಮ ವಿಚ್ಛೇದನ ಅರ್ಜಿಯನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲು ಸೊರಬ ನ್ಯಾಯಾಲಯಕ್ಕೆ ನಿರ್ದೇಶಿಸಬೇಕೆಂದು ಕೋರಿ ಸೊರಬದವರೇ ಆದ ವ್ಯಕ್ತಿಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ, ನ್ಯಾಯ ಎಂಬುದು ಕೇವಲ ಪ್ರಕರಣಗಳನ್ನು ಮುಗಿಸುವ ವೇಗಕ್ಕೆ ಸೀಮಿತವಾಗಿಲ್ಲ. ಒಂದು ಬಟನ್ ಒತ್ತುವ ಮೂಲಕ ತೀರ್ಪುಗಳನ್ನು ಪಡೆಯಲು ಸಾಧ್ಯವಿಲ್ಲ. ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸರಿಯಾದ ಮತ್ತು ನ್ಯಾಯಸಮ್ಮತ ತೀರ್ಮಾನಕ್ಕೆ ಬರುವುದು ಸುಲಭದ ಕೆಲಸವಲ್ಲ ಎಂದಿದೆ.

ಹೈಕೋರ್ಟ್ ಸಹ ವಿಲೇವಾರಿ ಸಂಖ್ಯೆಗೆ ಅತಿಯಾದ ಒತ್ತು ನೀಡಿ ಒತ್ತಡ ತರಬಾರದು. ಪ್ರತಿಯೊಬ್ಬ ನ್ಯಾಯಾಂಗ ಅಧಿಕಾರಿಯೂ ತನ್ನ ನ್ಯಾಯಾಲಯದ ಮಾಲೀಕನಾಗಿದ್ದು, ಪ್ರತಿ ಪ್ರಕರಣವೂ ವಿಶಿಷ್ಟವಾಗಿರುತ್ತದೆ. ಸಮಯದ ಗಡುವು ವಿಧಿಸುವುದರಿಂದ ನ್ಯಾಯಾಧೀಶರು ಅನಗತ್ಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ, ”ಅಲ್ಲದೆ, ಯಾವುದೇ ನಿಯಂತ್ರಣಾ ಪ್ರಾಧಿಕಾರಗಳು ವೃತ್ತಿಪರರಿಂದ ಕೆಲಸ ಮಾಡುವುದನ್ನು ಸಂಗೀತ ವಾದ್ಯ ನುಡಿಸಿದಂತೆ ಇರಬೇಕೇ ವಿನಾ ಕಬ್ಬಿನ ಗಾಣದಿಂದ ಕೊನೆಯ ಹನಿಯವರೆಗೆ ರಸಹಿಂಡಿ ಅದನ್ನು ರಸಹೀನವನ್ನಾಗಿ ಮಾಡುವಂತಿರಬಾರದು,” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ದಿನನಿತ್ಯದ ಆದೇಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ”ಸೊರಬದ ಹಿರಿಯ ಸಿವಿಲ್ ನ್ಯಾಯಾಧೀಶರು ಈಗಾಗಲೇ ಪ್ರಕರಣವನ್ನು ಸೂಕ್ತ ರೀತಿಯಲ್ಲಿ, ತ್ವರಿತವಾಗಿ ವಿಚಾರಣೆ ನಡೆಸುತ್ತಿರುವುದು ಕಂಡು ಬಂದಿದೆ. ಪ್ರಕರಣವು ಸಾಕ್ಷಿಗಳ ಪಾಟೀ ಸವಾಲು ಹಂತದಲ್ಲಿದೆ, ವಿಚಾರಣಾಧಿಕಾರಿಗೆ ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲ ಎಂದಿದೆ.

ಏನಿದು ಪ್ರಕರಣ..?
ಸೊರಬ ತಾಲೂಕಿನ ಅರ್ಜಿದಾರರು ಮತ್ತು ಬೆಂಗಳೂರಿನ ಪ್ರತಿವಾದಿ ಮಹಿಳೆ ವಿವಾಹವಾಗಿದ್ದರು. ಕೆಲ ದಿನಗಳ ಕಾಲ ಇಬ್ಬರ ನಡುವೆ ಚೆನ್ನಾಗಿದ್ದ ವೈವಾಹಿಕ ಸಂಬಂಧ ನಂತರ ಹದಗೆಟ್ಟಿತ್ತು. ಈ ನಡುವೆ, ಪತ್ನಿಯನ್ನು ತನ್ನೊಂದಿಗೆ ಇರುವಂತೆ ಕೋರಿ ಪತಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಆದೇಶದ ನಡುವೆಯೂ ಪತ್ನಿ ಜೊತೆಯಾಗಿರಲಿಲ್ಲ. ಆದ ಕಾರಣ, 2026ರ ಮಾ. 6ರಂದು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಈ ಮಧ್ಯೆ, ಪ್ರತಿವಾದಿ ಪತ್ನಿಗೆ ನೋಟಿಸ್ ಜಾರಿ ಮಾಡಲಾಗಿತ್ತು, ಅವರು ತಮ್ಮ ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜಿ ಮಾಡಿಕೊಳ್ಳಲು ಶಿಫಾರಸು ಮಾಡಿತ್ತು. ಅಲ್ಲಿಯೂ ಪ್ರಕರಣ ಇತ್ಯರ್ಥವಾಗಿಲ್ಲ. ಅಲ್ಲಿಂದ ಈವರೆಗೂ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿಅರ್ಜಿ ವಿಚಾರಣೆಯನ್ನು ಒಂದು ತಿಂಗಳೊಳಗೆ ನಡೆಸಿ ವಿಲೇವಾರಿ ಮಾಡಲು ಸೊರಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪತಿ ಹೈಕೋರ್ಟ್ನ ಮೆಟ್ಟಿಲೇರಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.