05/09/2026

Law Guide Kannada

Online Guide

ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಳ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬನ್ನಿ-ಸುಪ್ರೀಂ ಕಟ್ಟುನಿಟ್ಟಿನ ಸೂಚನೆ

ನವದೆಹಲಿ: ದೇಶದ ಎಲ್ಲ ರಾಜ್ಯಗಳ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಗಳಿಗೆ ಹೆಚ್ಚಳ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಪ್ರಶ್ನಿಸಿ ಕೆಲ ರಾಜ್ಯಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಲ್ಯಾ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ.ಮೊಹನಾ ಅವರನ್ನೊಳಗೊಂಡ ಪೀಠವು, ದೇಶಾದ್ಯಂತ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸಿನಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯ. ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ. ನ್ಯಾಯಾಂಗ ಅಧಿಕಾರಿಗಳ ಸೇವಾ ಸ್ವರೂಪವು ಇತರ ಸರ್ಕಾರಿ ನೌಕರರಿಗಿಂತ ವಿಭಿನ್ನವಾಗಿದೆ. ಇವರು ಉದ್ಯೋಗಕ್ಕೆ ಸೇರ್ಪಡೆಯಾಗುವಾಗಲೇ ತಡವಾಗಿ ತಮ್ಮ ಸೇವೆಯನ್ನು ಆರಂಭಿಸಿರುತ್ತಾರೆ. ಆದ್ದರಿಂದ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರಿಂದ ಅವರಿಗೆ ತೊಂದರೆಯಾಗುತ್ತದೆ ಎಂಬ ವಾದ ಸೂಕ್ತವಲ್ಲ ಎಂದು ತಳ್ಳಿಹಾಕಿತು.

ಈ ಮಧ್ಯೆ ಈ ಪ್ರಸ್ತಾವನೆಯನ್ನು ವಿರೋಧಿಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಅಡ್ವಕೇಟ್ ಜನರಲ್ಗಳಿಗೆ ಈ ವಿಷಯದಲ್ಲಿ ಸಕಾರಾತ್ಮಕವಾಗಿ ಮರುಪರಿಶೀಲಿಸುವಂತೆ ಸೂಚಿಸಿದ ನ್ಯಾಯ ಪೀಠವು, ನಿವೃತ್ತಿ ವಯಸ್ಸನ್ನು ದೇಶಾದ್ಯಂತ ಏಕರೂಪವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಕ್ರಿಯವಾಗಿ ಭಾಗಿಯಾಗಬೇಕಿದೆ. ಈ ಕುರಿತು ತ್ವರಿತವಾಗಿ ಮರುಪರಿಶೀಲನೆ ನಡೆಸಿ, ಎರಡು ವಾರಗಳ ಒಳಗಾಗಿ ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳಿಗೆ ನ್ಯಾಯಪೀಠವು ನಿರ್ದೇಶನ ನೀಡಿ ಅರ್ಜಿಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿಕೆ ಮಾಡಿದೆ, ಅಂದು ನಡೆಯುವ ವಿಚಾರಣೆಗೆ ಎಲ್ಲ ರಾಜ್ಯಗಳ ಪರ ವಕೀಲರು ಸಕಾರಾತ್ಮಕ ಪ್ರತಿಯೊಂದಿಗೆ ಹಾಜರಾಗಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಪ್ರಸ್ತುತ ಮಧ್ಯಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ಹಲವಾರು ರಾಜ್ಯಗಳು ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು ಹೆಚ್ಚಳ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿವೆ. ಆದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿವೆ.

ಕರ್ನಾಟಕ ಮೂಲದ ವಕೀಲ ಎಚ್.ಬಿ.ಶಿವರಾಜು: ಮಧ್ಯಪ್ರದೇಶ ಹೈಕೋರ್ಟ್ ‘ಫುಲ್ ಕೋರ್ಟ್’ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ (Sealed Cover) ಸಲ್ಲಿಸಲಾಗಿದ್ದು, ಅದನ್ನು ಬಹಿರಂಗ ನ್ಯಾಯಾಲಯದಲ್ಲಿ ಓಪನ್ ಮಾಡುವಂತೆ ಕರ್ನಾಟಕ ಮೂಲದ ವಕೀಲರಾದ ಎಚ್.ಬಿ.ಶಿವರಾಜು ಅವರು ಈ ಹಿಂದೆ ನ್ಯಾಯಪೀಠದ ಮುಂದೆ ಮನವಿ ಮಾಡಿದ್ದರಿಂದ ಅದನ್ನು ಬಹಿರಂಗ ನ್ಯಾಯಾಲಯದಲ್ಲೇ ತೆರೆಯಲಾಯಿತು.

ಇನ್ನು ವಿಚಾರಣೆ ವೇಳೆ ಕರ್ನಾಟಕದ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳ ಪರ ವಕಾಲತ್ತು ವಹಿಸಿರುವ ಎಚ್.ಬಿ.ಶಿವರಾಜು ಅವರು ವಿಡಿಯೋ ಕಾನ್ಸರೆನ್ಸ್ ಮುಖಾಂತರ ಹಾಜರಾಗಿದ್ದರು ಹಾಗೂ ಕರ್ನಾಟಕದ ಅಡ್ವಕೇಟ್ ಜನರಲ್ ಕೂಡ ವಿಡಿಯೋ ಕಾನ್ಸರೆನ್ಸ್ ಮುಖಾಂತರ ಹಾಜರಾಗಿದ್ದು, ಮಧ್ಯಾಹ್ನ 3.30ಕ್ಕೆ ಪ್ರಾರಂಭವಾದ ಕಲಾಪ 4.32ಕ್ಕೆ ಮುಗಿಯಿತು. ಅಂದರೆ 1 ಗಂಟೆ 2 ನಿಮಿಷಗಳ ಕಾಲ ಕಲಾಪ ನಡೆದಿದ್ದು ಪ್ರತಿ ರಾಜ್ಯದ ಅಡ್ವಕೇಟ್ ಜನರಲ್ ಗಳನ್ನು ಪ್ರತ್ಯೇಕವಾಗಿಯೇ ಅಭಿಪ್ರಾಯ ಕೇಳಲಾಯಿತು

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.