05/09/2026

Law Guide Kannada

Online Guide

ಕಾನೂನು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಬಾರ್ ಕೌನ್ಸಿಲ್ ಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ – ಸುಪ್ರೀಂ

ನವದೆಹಲಿ: ಕಾನೂನು ವಿದ್ಯಾರ್ಥಿಗಳನ್ನು ನಿಯಂತ್ರಿಸುವ ಅಧಿಕಾರ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಇಲ್ಲ. ವಕೀಲರಾಗಿ ಕಾನೂನು ವೃತ್ತಿಯನ್ನು ನಿಯಂತ್ರಿಸುವ ಶಾಸನಬದ್ಧ ಚೌಕಟ್ಟಿನ ವ್ಯಾಪ್ತಿಗೆ ಬರುವ ಮುನ್ನವೇ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ಚಲಾಯಿಸಲು ಬಿಸಿಐಗೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈದರಾಬಾದ್ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿ ಘಟಿಕೋತ್ಸವದಲ್ಲಿ ಸಿಜೆಐ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಗಸ್ಟ್ 14ರಂದು ಮುಂದಿನ ಆದೇಶ ಬರುವವರೆಗೆ 2026 ವಿವಿಯ ಕಾನೂನು ಪದವೀಧರರನ್ನು ವಕೀಲರನ್ನಾಗಿ ದಾಖಲಿಸಿಕೊಳ್ಳದಂತೆ ರಾಜ್ಯ ಬಾರ್ ಕೌನ್ಸಿಲ್ ಗಳಿಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ನಂತರ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಬಿಸಿಐ ಅಂದು ರಾತ್ರಿಯೇ ಆದೇಶಗಳನ್ನು ಹಿಂಪಡೆದಿತ್ತು.

ಈ ಕುರಿತು ಬಿಸಿಐ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು,, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು ವಿದ್ಯಾರ್ಥಿಗನ್ನು ನಿಯಂತ್ರಿಸಲು ಯಾವುದೇ ಶಾಸನಬದ್ಧ ಅಧಿಕಾರವನ್ನು ಹೊಂದಿಲ್ಲ. ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ನಿಯಮಗಳಡಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಹೇಳಿದೆ.

ವಕೀಲರಾಗಿ ಕಾನೂನು ವೃತ್ತಿಯನ್ನು ನಿಯಂತ್ರಿಸುವ ಶಾಸನಬದ್ಧ ಚೌಕಟ್ಟಿನ ವ್ಯಾಪ್ತಿಗೆ ಬರುವ ಮುನ್ನವೇ ವಿದ್ಯಾರ್ಥಿಗಳ ಮೇಲೆ ನಿಯಂತ್ರಣ ಚಲಾಯಿಸಲು ಬಿಸಿಐಗೆ ಅಧಿಕಾರವಿಲ್ಲ. ವಿದ್ಯಾರ್ಥಿಗಳ ವರ್ತನೆಗಾಗಿ ಯಾವುದೇ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯು ತನ್ನದೇ ಆದ ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಬೇಕಾದ ವಿಷಯವಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.