ತನಿಖೆ ಅನುಮತಿಗೆ ವಿಳಂಬ: ʼಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಬಿಡಿʼ ಎಂದು ಕಿಡಿಕಾರಿದ ಹೈಕೋರ್ಟ್
ಬೆಂಗಳೂರು: ಭ್ರಷ್ಟಾಚಾರ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸಲು ಅಗತ್ಯ ಅನುಮತಿ ನೀಡುವಲ್ಲಿ ವಿಳಂಬ ಧೋರಣೆ ತಾಳುತ್ತಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ , ತನಿಖೆಗೆ ಅನುಮತಿಸಲಾಗದಿದ್ದರೇ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿತು.
ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಐಪಿಸಿ ವಿವಿಧ ಸೆಕ್ಷನ್ ಗಳ ಅಡಿ ದಾಖಲಾಗಿರುವ ಪ್ರಕರಣ ರದ್ದು ಮಾಡುವಂತೆ ಕೋರಿ ಬೆಂಗಳೂರಿನ ಆಲಂ ಪಾಷಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠವು, ವಿಚಾರಣೆಯ ವೇಳೆ ಪೀಠವು “ಅಧಿಕಾರಿಯೊಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲು ಸರ್ಕಾರಕ್ಕೆ ಇಷ್ಟೊಂದು ತಕರಾರು ಏಕೆ? ಆರೋಪಿಯೇನು ದೇಶ ಕಾಯುತ್ತಿದ್ದಾನೇ?” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣ ದಾಖಲಿಸಲು ಇಷ್ಟೊಂದು ವಿರೋಧವೇಕೆ? ಲೋಕಾಯುಕ್ತ ಸಂಸ್ಥೆಯೇ ಪ್ರಕರಣ ದಾಖಲಿಸಲು ಅನುಮತಿ ಕೇಳುತ್ತಿದೆ. ಅದಕ್ಕೂ ಇಷ್ಟೊಂದು ವಿರೋಧವೇ? ಹಾಗಿದ್ದರೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಬಿಡಿ. ನಾಳೆ ಬೆಳಿಗ್ಗೆ ಬೀಗ ಹಾಕಿಬಿಡಿ” ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತು.
ತನಿಖೆಗೆ ಅನುಮತಿ ನೀಡುವುದಿಲ್ಲ ಎಂದಾದರೆ ಅದಕ್ಕೆ ಕಾರಣ ನೀಡಿ. ಆದರೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಇಂತಹ ಕ್ರಮಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತವೆ” ಎಂದು ಪೀಠ ಛೀಮಾರಿ ಹಾಕಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ವಹೀದಾ ಅವರು “ಒಬ್ಬ ಆರೋಪಿಯ ವಿರುದ್ಧ ತನಿಖೆಗೆ ಅನುಮತಿ ನೀಡಲಾಗಿದೆ. ಮತ್ತೊಬ್ಬ ಆರೋಪಿ ಪ್ರಹ್ಲಾದ್ ಕಮ್ಮಾರ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಕಡತ ಮುಖ್ಯಮಂತ್ರಿ ಕಚೇರಿಯಲ್ಲಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿರುವುದರಿಂದ ಕಡತವನ್ನು ಅಲ್ಲಿಗೆ ಕಳುಹಿಸಲಾಗಿದೆ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಮುಖ್ಯಮಂತ್ರಿ ಕಚೇರಿಯಲ್ಲಿ ಕಡತ ಏಕೆ ಇದೆ? ಅನುಮತಿ ನೀಡುವುದು ಮುಖ್ಯಮಂತ್ರಿಗಳೇ? ಕಡತ ಮುಖ್ಯಮಂತ್ರಿ ಕಚೇರಿಯಲ್ಲಿ ಇರುವುದೇಕೆ? ಎಂದು ಪ್ರಶ್ನಿಸಿತು. ಪ್ರಹ್ಲಾದ್ ಕಮ್ಮಾರ್ ವಿರುದ್ಧ ತನಿಖೆ ನಡೆಸಲು ಅಗತ್ಯ ಅನುಮತಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರದ ವಕೀಲರು ಹಾಗೂ ಅಡ್ವೊಕೇಟ್ ಜನರಲ್ ಅಗತ್ಯ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
