ಹೊರರಾಜ್ಯ ಪೊಲೀಸರು ತನಿಖೆಗೆ ಬಂದಾಗ ಅನುಮತಿ ಕಡ್ಡಾಯ – ಹೈಕೋರ್ಟ್
ಬೆಂಗಳೂರು: ಹೊರರಾಜ್ಯಗಳ ಪೊಲೀಸರು ತನಿಖೆಗೆ ಬಂದಾಗ ಇಲ್ಲಿನ ಸ್ಥಳೀಯ ಪೊಲೀಸರ ಜೊತೆ ಕಡ್ಡಾಯವಾಗಿ ಸಮನ್ವಯ ಸಾಧಿಸಬೇಕು. ಕಡ್ಡಾಯವಾಗಿ ಅವರ ನೆರವು ಪಡೆಯಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ತುಮಕೂರಿನ ತಂಬಾಕು ಸಂಸ್ಥೆಗಳ ಮೇಲೆ ಮಹಾರಾಷ್ಟ್ರದ ಕೊಲ್ಲಾಪುರ ವ್ಯಾಪ್ತಿಯ ವಡಗಾಂವ್ ಪೊಲೀಸರು ಕೈಗೊಂಡಿದ್ದ ಗಡಿಪಾರು ತನಿಖಾ ಕಾರ್ಯಾಚರಣೆಯನ್ನು ಅಕ್ರಮ ಎಂದು ಘೋಷಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಈ ಖಡಕ್ ನಿರ್ದೇಶನ ನೀಡಿದೆ.
ಶಿವ ಎಂಟರ್ಪ್ರೈಸಸ್ ಮತ್ತು ಸಿದ್ಧಿ ಏಜೆನ್ಸೀಸ್ ಎಂಬ ತುಮಕೂರಿನ ಎರಡು ಸಂಸ್ಥೆಗಳು ಮಹರಾಷ್ಟ್ರ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು, ಬೇರೆ ರಾಜ್ಯಕ್ಕೆ ತೆರಳಿ ತನಿಖೆ ನಡೆಸುವ ಪೊಲೀಸ್ ಸಿಬ್ಬಂದಿ, ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅವರ ನೆರವು ಪಡೆಯುವುದು ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ವಡಗಾಂವ್ ಪೊಲೀಸರು ಸಂವಿಧಾನ ಮತ್ತು ಶಾಸನಬದ್ಧ ಗಡಿಗಳನ್ನು ಮೀರಿ ವರ್ತಿಸಿದ್ದಾರೆ ಎಂದು ಆಕ್ಷೇಪಿಸಿತು.
ಪ್ರಸ್ತುತ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಮತ್ತು ನಕಲಿ ಅಧಿಕಾರಿಗಳನ್ನು ಭೇಟಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮನೆ ಅಥವಾ ಕಚೇರಿಗೆ ಬರುವ ಅಧಿಕಾರಿಗಳು ನಿಜವಾದ ಪೊಲೀಸರೇ ಎಂಬುದನ್ನು ಪರಿಶೀಲಿಸಲು ಸಾರ್ವಜನಿಕರಿಗೆ ತಕ್ಷಣದ ವ್ಯವಸ್ಥೆಯಿರುವುದಿಲ್ಲ. ಹೀಗಾಗಿ ಯಾವುದೇ ಮುನ್ಸೂಚನೆ ಇಲ್ಲದೆ ನಡೆಸುವ ಇಂತಹ ಕಾರ್ಯಾಚರಣೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತವೆ. ಇದನ್ನು ಅಪರಾಧಿಗಳು ದುರುಪಯೋಗಪಡಿಸಿಕೊಂಡು ಬೆದರಿಕೆ ಒಡ್ಡುವ ಸಾಧ್ಯತೆ ಇರುತ್ತದೆ ಎಂದು ನ್ಯಾಐಪೀಠ ತಿಳಿಸಿದೆ. .
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
