ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅನರ್ಹರೆಂಬ ಕಾನೂನು ಅಪ್ರಸ್ತುತ – ಸುಪ್ರೀಂ
ನವದೆಹಲಿ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿವಂತಿಲ್ಲ ಎಂಬ ಕಾನೂನು ಇಂದಿಗೆ ಅಪ್ರಸ್ತುತವಾದುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 2003ರಲ್ಲಿ ಜಾವೇದ್ ವಿರುದ್ಧ ಹರಿಯಾಣ ರಾಜ್ಯ ಪ್ರಕರಣದಲ್ಲಿ ಮೂರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲನೆಗಾಗಿ ದೊಡ್ಡ ಪೀಠಕ್ಕೆ ವರ್ಗಾಯಿಸಿದೆ. ಹಾಗೆಯೇ ಇದೇ ಪ್ರಕರಣದಲ್ಲಿ ಮಹಾರಾಷ್ಟ್ರದ ಕಾಕೋಡಾ ಗ್ರಾಮ ಪಂಚಾಯತ್ನ ಮಾಜಿ ಸರಪಂಚ್ ಮಂಗಳಾ ಭೀಮರಾವ್ ಅವರಿಗೆ ಮೂರನೇ ಮಗು ಜನಿಸಿದ ಕಾರಣ ವಿಧಿಸಲಾಗಿದ್ದ ಅನರ್ಹತೆಯನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯ್ದೆಯ ಸೆಕ್ಷನ್ 14(1)(ಜೆ-1) ಅಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಅನರ್ಹತೆ ವಿಧಿಸುವ ನಿಯಮ ಜಾರಿಯಲ್ಲಿತ್ತು.
ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆ ವಿಧಿಸುವ ಕಾನೂನುಗಳು ಇಂದಿನ ಜನಸಂಖ್ಯಾ ಪರಿಸ್ಥಿತಿಯಲ್ಲಿ ಪ್ರಸ್ತುತತೆ ಕಳೆದುಕೊಂಡಿವೆ. ಭಾರತದಲ್ಲಿ ಒಟ್ಟು ಜನನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎರಡು ಮಕ್ಕಳ ನಿಯಮದ ಆಧಾರದಲ್ಲಿ ಜಾರಿಯಲ್ಲಿರುವ ಕಾನೂನುಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಪೀಠವು ತಿಳಿಸಿದೆ.
2003ರ ತೀರ್ಪಿನಲ್ಲಿ ಹರಿಯಾಣ ಪಂಚಾಯತ್ ರಾಜ್ ಕಾಯ್ದೆಯಡಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹರು ಎಂಬ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು ಭಾರತದಲ್ಲಿ 2003ರಲ್ಲಿ 3ರಷ್ಟಿದ್ದ ಒಟ್ಟು ಫಲವತ್ತತೆ ದರ (ಜನನ ಪ್ರಮಾಣ) ಪ್ರಸ್ತುತ 1.9ಕ್ಕೆ ಇಳಿದಿದೆ. ಜನಸಂಖ್ಯೆ ಸ್ಥಿರವಾಗಿ ಮುಂದುವರಿಯಲು ಅಗತ್ಯವಿರುವ ಬದಲಿ ಫಲವತ್ತತೆ ದರ 2.1 ಆಗಿದೆ. ಈ ಪ್ರಮಾಣಕ್ಕಿಂತ ಫಲವತ್ತತೆ ದರ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಳವಾಗುವ ಮತ್ತು ದುಡಿಯುವ ವಯೋಮಾನದ ಜನರ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ತಿಳಿಸಿತು.
ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕಾರಣಕ್ಕೆ ವ್ಯಕ್ತಿಗಳನ್ನು ರಾಜಕೀಯ ಪ್ರಾತಿನಿಧ್ಯದಿಂದ ಹೊರಗಿಡುವುದು ಅವರ ಸಾರ್ವಜನಿಕ ಹುದ್ದೆ ನಿರ್ವಹಿಸುವ ಸಾಮರ್ಥ್ಯಕ್ಕೆ ಸಂಬಂಧಿಸದ ಮಾನದಂಡವಾಗಿದೆ. ಅಲ್ಲದೆ, ಮಕ್ಕಳನ್ನು ಹೊಂದುವ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕಿನ ನಡುವೆ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾಯತ್ತತೆಯ ಹಕ್ಕಿಗೂ ಸಂಬಂಧಿಸಿದೆ ಎಂದು ನ್ಯಾಯಪೀಠ ತಿಳಿಸಿದೆ.
ದೇಶದ ಏಳು ರಾಜ್ಯಗಳು ಎರಡು ಮಕ್ಕಳ ನಿಯಮವನ್ನು ರದ್ದುಗೊಳಿಸಿದ್ದು, 15 ರಾಜ್ಯಗಳಲ್ಲಿ ಇಂತಹ ನೀತಿ ಜಾರಿಯಲ್ಲಿಲ್ಲ ಎಂದು ಪ್ರಕರಣದಲ್ಲಿ ಸಲ್ಲಿಸಲಾದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಅಸ್ಸಾಂ, ಗೋವಾ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ನಿಯಮ ಮುಂದುವರಿದಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
