ಬಾಡಿಗೆ ವಸೂಲಾತಿಗೆ ಪೊಲೀಸ್ ಠಾಣೆ ಬಳಕೆ ಕಾನೂನು ಬಾಹಿರ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಬಾಡಿಗೆ ಬಾಕಿ ಅಥವಾ ಸಿವಿಲ್ ಸ್ವರೂಪದ ಒಪ್ಪಂದಗಳ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ಹಣ ವಸೂಲಿ ಮಾಡಲು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುವುದು ಕಾನೂನು ಬಾಹಿರ. ಪೊಲೀಸರು ರಿಕವರಿ ಏಜೆಂಟ್ಗಳಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿದೆ.
ನಗರದ ವರ್ತೂರು ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದು ಕೋರಿ ಕ್ಲೌಡ್ನೈನ್ ಆಸ್ಪತ್ರೆಯನ್ನು ನಿರ್ವಹಿಸುವ ‘ಕಿಡ್ಸ್ ಕ್ಲಿನಿಕ್ ಇಂಡಿಯಾ ಲಿಮಿಟೆಡ್’ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಕುಲದೀಪ್ ಬೆಹೆರಾ ಸೇರಿ ಮತ್ತಿತರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿ ಆಸ್ಪತ್ರೆ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದೆ. ಪೊಲೀಸರು ‘ರಿಕವರಿ ಏಜೆಂಟ್’ ಅಲ್ಲ, ಒಪ್ಪಂದದ ಅನ್ವಯ ಬರಬೇಕಾದ ಬಾಡಿಗೆ ಹಣವನ್ನು ವಸೂಲಿ ಮಾಡಲು ಪೊಲೀಸ್ ಅಧಿಕಾರಿಗಳು ಸಿವಿಲ್ ನ್ಯಾಯಾಲಯದಂತೆ ವರ್ತಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತು.
ಪ್ರಕರಣದ ವಿವರ.
ವರ್ತೂರು ಹೋಬಳಿಯ ಜಮೀನು ಮಾಲೀಕ ಸಂಜೀವ್ ಎಸ್.ಎಂಬವರು ತಮ್ಮ ಕಟ್ಟಡವನ್ನು ಆಸ್ಪತ್ರೆ ನಡೆಸಲು 2023ರಲ್ಲಿ ಕಿಡ್ಸ್ ಕ್ಲಿನಿಕ್ ಸಂಸ್ಥೆಗೆ ಬಾಡಿಗೆಗೆ ಕೊಟ್ಟಿದ್ದರು. ವಿದ್ಯುತ್ ಮೀಟರ್ ನ ಆರ್.ಆರ್ ಸಂಖ್ಯೆ ಆಸ್ಪತ್ರೆಯ ಹೆಸರಿಗೆ ಬದಲಾಯಿಸುವ ವಿಚಾರವು ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಆಸ್ಪತ್ರೆ ಆಡಳಿತ ಮಂಡಳಿಯು 3 ತಿಂಗಳ ಬಾಡಿಗೆ ಮೊತ್ತವಾದ 11,70,858 ರೂ.ಗಳನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕ ಸಂಜೀವ್ ವಂಚನೆ ಮತ್ತು ವಿಶ್ವಾಸದ್ರೋಹದ ಆರೋಪದಡಿ ಎಫ್ ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಸಕಾಲದಲ್ಲಿ ಬಾಡಿಗೆ ಪಾವತಿಸಿಕೊಂಡು ಬಂದಿದೆ. ಒಪ್ಪಂದ ಮಾಡಿಕೊಳ್ಳುವಾಗಲೇ ವಂಚಿಸುವ ಉದ್ದೇಶ ಹೊಂದಿಲ್ಲದಿದ್ದರೆ, ನಂತರದ ದಿನಗಳಲ್ಲಿ ಉಂಟಾಗುವ ಬಾಡಿಗೆ ಬಾಕಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಉಭಯ ಪಕ್ಷಗಳ ನಡುವಿನ ಬಾಡಿಗೆ ಒಪ್ಪಂದದಲ್ಲೇ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಸ್ಪಷ್ಟ ಅವಕಾಶವಿದೆ. ಹಾಗಿದ್ದರೂ ಸಿವಿಲ್ ವಿವಾದಕ್ಕೆ ಕ್ರಿಮಿನಲ್ ಮುಖವಾಡ ತೊಡಿಸುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಕಿಡಿಕಾರಿತು.
ಅಲ್ಲದೆ ಇಂತಹ ದುರ್ಬಲ ಕ್ರಿಮಿನಲ್ ಪ್ರಕರಣಗಳಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿರುವ ನ್ಯಾಯಪೀಠವು, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
