ಬರಗಾಲದ ಹಿನ್ನೆಲೆಯಲ್ಲಿ ದುಂದು ವೆಚ್ಚಗಳನ್ನು ಕಡಿವಾಣ ಹಾಕಲು ಸರಳ ವಿವಾಹಕ್ಕೆ ಹೆಚ್ಚು ಮಹತ್ವ ನೀಡಿ ಎಂದು ಸತ್ಯಪ್ಪ ಕರೆ ನೀಡಿದರು.
ಭಾರತೀಯ ಬುದ್ಧ ಸಮುದಾಯ ಟ್ರಸ್ಟ್ ಹುಣಸೂರು ಇವರ ವತಿಯಿಂದ ರಾಮಸ್ವಾಮಿ ಪೆರಿಯಾರ್ ನಾಯಕರವರ 147ನೇ ಜಯಂತೋತ್ಸವ ಅಂಗವಾಗಿ ಪ್ರಜಾಪ್ರಭುತ್ವದ ಮಹತ್ವ ಬುದ್ಧ ಪೂರ್ಣಿಮಾ ಸರಳ ವಿವಾಹ ಹಾಗೂ ಕರ್ನಾಟಕ ರಾಜ್ಯ ಬೀದಿ ಕರ್ನಾಟಕ ಕಲಾವಿದರ ಜಿಲ್ಲಾ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಕಲಾವಿದರಾದ ಹನುಮಯ್ಯ ರವರ ನೇತೃತ್ವದಲ್ಲಿ ಇಂದು ದಿನಾಂಕ : 27.09.2026 ರ ಭಾನುವಾರ ಚಿಕ್ಕ ಹುಣಸೂರು ರಸ್ತೆಯಲ್ಲಿರುವ ಡೀಡ್ ಸಂಸ್ಥೆಯಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಯುತ ಪುಟ್ಟ ಸಿದ್ದಶೆಟ್ಟಿ ರವರು ಉದ್ಘಾಟನೆ ಮಾಡಿ ನಂತರ ಮಾತನಾಡಿ ಬೌದ್ಧ ಧರ್ಮದ ಆಚರಣೆ ಪದ್ಧತಿಯಲ್ಲಿ ಸರಳ ವಿವಾಹ ಮಾಡುತ್ತಿರುವುದು ಬಡವರ ಪಾಲಿಗೆ ಉತ್ತಮ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಮಾತನಾಡಿ ಬುದ್ಧ ಪೂರ್ಣಿಮೆ ಅಂಗವಾಗಿ ಬುದ್ಧರ ಪ್ರೀತಿ ಕರುಣೆ, ಅಹಿಂಸಾ ತತ್ವವನ್ನು ಮೈಗೂಡಿಸಿಕೊಂಡು ಆಗಬೇಕೆಂಬ ಶಪಥವನ್ನು ಮಾಡುತ್ತಾ ಇದೇ ಕಾರ್ಯಕ್ರಮದಲ್ಲಿ ರಾಮಸ್ವಾಮಿ ಪೆರಿಯಾರ್ ರವರ 147ನೇ ಜಯಂತೋತ್ಸವವನ್ನು ಆಚರಿಸಲಾಗುತ್ತಿದ್ದು ಪೆರಿಯಾರ್ ರವರು ಪ್ರಮುಖ ಭಾರತೀಯ ಸಮಾಜ ಸುಧಾರಕ ಹಾಗೂ ದ್ರಾವಿಡ ಚಳುವಳಿಯ ಪಿತಾಮಹ ಎಂದೇ ಕರೆಸಿಕೊಂಡಿದ್ದರು. ಮೂಡನಂಬಿಕೆ ಅಸ್ಪೃಶ್ಯತೆ ಜಾತಿ ವ್ಯವಸ್ಥೆ ಹಾಗೂ ಸ್ತ್ರೀ ದಬ್ಬಾಳಿಕೆಯ ಬಗ್ಗೆ ತೀವ್ರವಾಗಿ ಧ್ವನಿಯೆತ್ತಿದ್ದ ಇವರು ಸರಳ ವಿವಾಹಕ್ಕೆ ಅತಿ ಹೆಚ್ಚು ಮನ್ನಣೆಯನ್ನು ಕೊಟ್ಟಿದ್ದರು. ಅದೇ ರೀತಿಯಲ್ಲಿ ಇಂದು ಬಡ ಕುಟುಂಬದ ಜೋಡಿಯ ಸರಳ ವಿವಾಹವನ್ನು ಮಾಡಿರುವುದು ಹನುಮಯ್ಯನವರಿಗೆ ಧನ್ಯವಾದಗಳು, ಅರ್ಪಿಸುತ್ತೇನೆ ಹಾಗೂ ಪೆರಿಯಾರ್ ರವರು ಸರಳತೆಯನ್ನು ಹಾಕಿ ಕೊಟ್ಟ ದಾರಿಯಲ್ಲಿ ಪ್ರತಿಯೊಬ್ಬರು ಮುಂದುವರಿಯಬೇಕೆಂದು ಹಾಗೂ ಈ ಬಾರಿ ಭೀಕರ ಬರಗಾಲ ಉಂಟಾಗಿರುವುದರಿಂದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಸರಳ ವಿವಾಹದಂತ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು. *ಇದೇ ರೀತಿ ಪ್ರತಿ ವರ್ಷ 10 ರಿಂದ 20 ಸರಳ ವಿವಾಹಗಳನ್ನು ಮಾಡಲು ನಾವೆಲ್ಲರೂ ಒಂದಾಗಿರೋಣ ಎಂದು ಸತ್ಯಪ್ಪ ರವರು ಘೋಷಣೆ ಮಾಡಿದರು.
ಪ್ರಾಧ್ಯಾಪಕರು ಹಾಗೂ ಪ್ರಗತಿಪರ ಚಿಂತಕರಾದ ಜೆ ಮಹದೇವರವರು ಮಾತನಾಡಿ ರಾಮಸ್ವಾಮಿ ಪೆರಿಯಾರ್ ರವರು 100 ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳಿಗೆ ಸ್ವಾವಲಂಬತೆ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಡುವಲ್ಲಿ ಹೋರಾಟ ಮಾಡಿದವರು. ವಿಚಾರವಾದಿ ಮತ್ತು ಕಟ್ಟ ಸಮಾಜ ಸುಧಾರಕರಾಗಿ ಪೆರಿಯಾರ್ ತಮ್ಮ ಜೀವನದಕ್ಕೂ ಮಹಿಳೆಯರಿಗೆ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಕಾನೂನು ಬದ್ಧ ಸ್ಥಾನವನ್ನು ನೀಡಬೇಕು ಅವರಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಮತ್ತು ಆಸ್ತಿಯ ಹಕ್ಕನ್ನು ಹೊಂದಿರಬೇಕು ಎಂದು ಬಲವಾಗಿ ಪ್ರತಿಪಾದಿಸಿದವರು. ವರದಕ್ಷಿಣೆಯ ಬಗ್ಗೆ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಬಗ್ಗೆ ಧ್ವನಿಯೆತ್ತಿದ ಇವರು ದೇವರ ಅಸ್ತಿತ್ವಕ್ಕಿಂತಲೂ ಮನುಷ್ಯರಲ್ಲಿ ಮನುಷ್ಯರಲ್ಲಿ ಮಾನವೀಯತೆಯ ಗುಣ ನೆಲೆಸಬೇಕೆಂದು ಕರೆ ನೀಡಿದ ಮಹಾನ್ ಮಾನವತಾವಾದಿ ಪೆರಿಯಾರ್ ರಾಮಸ್ವಾಮಿ ರವರ ಜಯಂತಿ ದಿನವಾದ ಇಂದು ನಾವು ಇವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ ಎಂದರು.
ಕಾಯಕ ಸಮಾಜದ ಹೊನ್ನಪ್ಪ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಎಚ್ ಡಿ ಕೋಟೆ ತಾಲೂಕಿನ ಸಾರಾನಾಥ ಬುದ್ಧ ವಿಹಾರದ ಬಿಕ್ಕುಣಿ ಗೌತಮಿ ಮಾತಾಜಿ ಬಂತೇಜಿರವರು ಬೌದ್ಧ ಸಂಪ್ರದಾಯದಂತೆ ನವಜೋಡಿಗೆ ಬೋಧನೆ ನೀಡಿ ವಿವಾಹ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಮಹದೇವ್, ಡೀಡ್ ಸಂಸ್ಥೆಯ ನಿರ್ದೇಶಕರಾದ ಶ್ರೀಕಾಂತ್, ಪ್ರಸನ್ನ, ವರ ಯೋಗೇಶ್, ವಧು ಶಾರದಾಂಬೆ, ಇವರ ಪೋಷಕರುಗಳು, ಸುಮಾರು 50ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
