ಖಾಸಗಿ ದೂರು: ಆರೋಪಿಗೆ ಮ್ಯಾಜಿಸ್ಟ್ರೇಟ್ ಯಾವ ಹಂತದಲ್ಲಿ ನೋಟಿಸ್ ನೀಡಬೇಕು? ಸ್ಪಷ್ಟಪಡಿಸಿದ ಹೈಕೋರ್ಟ್
ನವದೆಹಲಿ: ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS) ಸೆಕ್ಷನ್ 223(1) ಅಡಿಯಲ್ಲಿ ಖಾಸಗಿ ದೂರಿನ ಮೇರೆಗೆ ಅಪರಾಧದ ಸಂಜ್ಞಾನ (Cognizance) ತೆಗೆದುಕೊಳ್ಳುವ ಮೊದಲು ಮ್ಯಾಜಿಸ್ಟ್ರೇಟ್ ಅನುಸರಿಸಬೇಕಾದ ಕ್ರಮವನ್ನು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಪ್ರಕಾರ ದೂರನ್ನು ವಜಾಗೊಳಿಸಬೇಕೇ ಅಥವಾ ಬೇಡವೇ ಎಂಬುದನ್ನು ಮೊದಲು ಪರಿಗಣಿಸಬೇಕು. ದೂರನ್ನು ಸೆಕ್ಷನ್ 226ರ ಅಡಿಯಲ್ಲಿ ವಜಾಗೊಳಿಸಬೇಕಾದ ಅಗತ್ಯವಿಲ್ಲ ಮತ್ತು ಅಪರಾಧದ ಸಂಜ್ಞಾನ ತೆಗೆದುಕೊಳ್ಳಲು prima facie ಆಧಾರವಿದೆ ಎಂಬ ಅಭಿಪ್ರಾಯಕ್ಕೆ ಮ್ಯಾಜಿಸ್ಟ್ರೇಟ್ ಬಂದ ನಂತರ, ಆರೋಪಿಗೆ ನೋಟಿಸ್ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ನವೀನ್ ಚಾಪ್ಲಾ ಮತ್ತು ನ್ಯಾಯಮೂರ್ತಿ ರವೀಂದ್ರ ದುಡೇಜಾ ಅವರ ವಿಭಾಗೀಯ ಪೀಠವು ಸ್ಪಷ್ಟಪಡಿಸಿದೆ.
ದೂರುದಾರ ಮತ್ತು ಹಾಜರಿರುವ ಸಾಕ್ಷಿಗಳನ್ನು ಪ್ರಮಾಣವಚನದ ಮೇಲೆ ಪರೀಕ್ಷಿಸುವುದು, ಕಾನೂನಿನಿಂದ ಅಂತಹ ಪರೀಕ್ಷೆಗೆ ವಿನಾಯಿತಿ ನೀಡಿರುವ ಸಂದರ್ಭಗಳನ್ನು ಹೊರತುಪಡಿಸಿ, ಹಾಗೂ ಆರೋಪಿಗೆ ವಿಚಾರಣೆಗೆ ಅವಕಾಶ ನೀಡುವುದು ಇವೆಲ್ಲವೂ ಮ್ಯಾಜಿಸ್ಟ್ರೇಟ್ ಔಪಚಾರಿಕವಾಗಿ ಸಂಜ್ಞಾನ ತೆಗೆದುಕೊಳುವ ಮೊದಲು ನಡೆಯಬೇಕಾದ ಕ.ಮಗಳು.”ಕಾನೂನಿನಿಂದ ವಿನಾಯಿತಿ ನೀಡಿರುವುದನ್ನು ಹೊರತುಪಡಿಸಿ, ದೂರುದಾರ ಮತ್ತು ಹಾಜರಿರುವ ಸಾಕ್ಷಿಗಳನ್ನು ಪ್ರಮಾಣವಚನದ ಮೇಲೆ ಪರೀಕ್ಷಿಸಿದ ನಂತರ ಹಾಗೂ ಆರೋಪಿಗೆ ವಿಚಾರಣೆಗೆ ಅವಕಾಶ ನೀಡಿದ ನಂತರವೇ ಮ್ಯಾಜಿಸ್ಟ್ರೇಟ್ ಅಪರಾಧದ ಸಂಜ್ಞಾನ ತೆಗೆದುಕೊಳ್ಳಬಹುದು.” ಎಂದು ಪೀಠ ವಿವರಿಸಿದೆ.
ಖಾಸಗಿ ದೂರಿನಲ್ಲಿ (Private Complaint), ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 (BNSS) ಸೆಕ್ಷನ್ 223(1) ರ ಪ್ರಕಾರ ಮ್ಯಾಜಿಸ್ಟ್ರೇಟ್ ಅವರು ದೂರುದಾರರನ್ನು ಮತ್ತು ಸಾಕ್ಷಿಗಳನ್ನು ಪ್ರಮಾಣವಚನದ ಮೇಲೆ (ಸ್ವಾರ್ನ್ ಸ್ಟೇಟ್ಮೆಂಟ್) ವಿಚಾರಣೆ ನಡೆಸಿದ ನಂತರ ಹಾಗೂ ಪ್ರಕರಣದ ಗಂಭೀರತೆಯನ್ನು ಪರಿಶೀಲಿಸಿ, ಆರೋಪಿಗೆ ಆಕ್ಷೇಪಣೆ ಸಲ್ಲಿಸಲು ಅಥವಾ ವಿಚಾರಣೆಯಲ್ಲಿ ಭಾಗವಹಿಸಲು ಪೂರ್ವ-ಜ್ಞಾಪನಾ (Pre-cognizance) ಹಂತದಲ್ಲಿ ನೋಟಿಸ್ ಜಾರಿಗೊಳಿಸಬಹುದು.
ಅಂದರೆ, ಪ್ರಕರಣದ ಬಗ್ಗೆ ಜ್ಞಾಪನೆ (Cognizance) ತೆಗೆದುಕೊಳ್ಳುವ ಮುನ್ನವೇ ಮತ್ತು ಆರೋಪಿಗೆ ಆಲಿಸುವ ಅವಕಾಶ (Opportunity of being heard) ನೀಡುವ ಹಂತದಲ್ಲಿ ಈ ನೋಟಿಸ್ ನೀಡಲಾಗುತ್ತದೆ
ಪ್ರಕರಣದ ಹಿನ್ನೆಲೆ
ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಎರಡು ಅರ್ಜಿಗಳು ವಿಚಾರಣೆಗೆ ಬಂದಿದ್ದು, ಒಂದು ಅರ್ಜಿಯಲ್ಲಿ, ಪ್ರಸ್ತಾವಿತ ಆರೋಪಿಯು ದೂರುದಾರನ pre-summoning ಸಾಕ್ಷ್ಯವನ್ನು ದಾಖಲಿಸುವ ಮೊದಲು ಮ್ಯಾಜಿಸ್ಟ್ರೇಟ್ ಸೆಕ್ಷನ್ 223ರ ಅಡಿಯಲ್ಲಿ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿದ್ದರು. ಇನ್ನೊಂದು ಸಂಬಂಧಿತ ಅರ್ಜಿಯಲ್ಲಿ ಖಾಸಗಿ ದೂರು ಸ್ವೀಕರಿಸಿದ ಕೂಡಲೇ ಆರೋಪಿಗೆ ನೋಟಿಸ್ ನೀಡುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.
BNSS ಸೆಕ್ಷನ್ 223ರಲ್ಲಿ ಮಾಡಲಾದ ಪ್ರಮುಖ ಬದಲಾವಣೆ
ನ್ಯಾಯಾಲಯವು ಗಮನಿಸಿದಂತೆ, BNSS ಸೆಕ್ಷನ್ 223ರಲ್ಲಿ CrPC ಸೆಕ್ಷನ್ 200ಕ್ಕೆ ಹೋಲಿಸಿದರೆ ಎರಡು ಪ್ರಮುಖ ಬದಲಾವಣೆಗಳಿವೆ. “having jurisdiction while” ಎಂಬ ಪದವನ್ನ ಸೇರಿಸಲಾಗಿದೆ. ಸೆಕ್ಷನ್ 223(1)ರ ಮೊದಲ ಪರಂತುಕದ ಮೂಲಕ ಆರೋಪಿಯನ್ನು ಆಲಿಸದೆ ಸಂಜ್ಞಾನ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
“while” ಎಂಬ ಪದವನ್ನು ಅದರ ಕಾಲಾತ್ಮಕ ಅರ್ಥದಲ್ಲಿ ಬಳಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಂದರೆ, ದೂರುದಾರ ಮತ್ತು ಸಾಕ್ಷಿಗಳ ಪರೀಕ್ಷೆಯು ಸಂಜ್ಞಾನ ತೆಗೆದುಕೊಂಡ ನಂತರ ನಡೆಯುವ ಪ್ರಕ್ರಿಯೆಯಲ್ಲ; ಬದಲಾಗಿ ಸಂಜ್ಞಾನ ತೆಗೆದುಕೊಳ್ಳುವ ಪ್ರಕ್ರಿಯೆಯ ಭಾಗವಾಗಿಯೇ ನಡೆಯಬೇಕು.
ಹಿಂದೆ CrPC ಅಡಿಯಲ್ಲಿ ಸಂಜ್ಞಾನ ತೆಗೆದುಕೊಳ್ಳುವುದು ದೂರುದಾರ ಮತ್ತು ಸಾಕ್ಷಿಗಳ ಪರೀಕ್ಷೆಗೆ ಮುಂಚಿತವಾಗಿರಬಹುದಾಗಿತ್ತು. ಆದರೆ BNSSನಲ್ಲಿ ಶಾಸಕರು “while” ಎಂಬ ಪದವನ್ನು ಬಳಸುವ ಮೂಲಕ ಈ ಪ್ರಕ್ರಿಯೆಯಲ್ಲಿ ಬದಲಾವಣೆ ತಂದಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
BNSS ಸೆಕ್ಷನ್ 223(1)ರ ಅಡಿಯಲ್ಲಿ ಕಾನೂನಿನಿಂದ ವಿನಾಯಿತಿ ನೀಡಿರುವುದನ್ನು ಹೊರತುಪಡಿಸಿ, ದೂರುದಾರ ಮತ್ತು ಹಾಜರಿರುವ ಸಾಕ್ಷಿಗಳನ್ನು ಪ್ರಮಾಣವಚನದ ಮೇಲೆ ಮೊದಲು ಪರೀಕ್ಷಿಸಬೇಕು.
ಆ ಹೇಳಿಕೆಗಳನ್ನು ದಾಖಲಿಸಿದ ನಂತರ, ದೂರುವನ್ನು BNSS ಸೆಕ್ಷನ್ 226ರ ಅಡಿಯಲ್ಲಿ ವಜಾಗೊಳಿಸುವ ಅಗತ್ಯವಿಲ್ಲ ಮತ್ತು ಅಪರಾಧದ ಸಂಜ್ಞಾನ ತೆಗೆದುಕೊಳ್ಳಲು prima facie ಆಧಾರವಿದೆ ಎಂಬ ಅಭಿಪ್ರಾಯಕ್ಕೆ ಮ್ಯಾಜಿಸ್ಟ್ರೇಟ್ ಬರಬೇಕು. ನಂತರ ಆರೋಪಿಗೆ ನೋಟಿಸ್ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಆರೋಪಿಗೆ ವಿಚಾರಣೆಗೆ ಸಮರ್ಪಕ ಅವಕಾಶ ನೀಡಿದ ನಂತರವೇ ಅಪರಾಧದ ಸಂಜ್ಞಾನ ತೆಗೆದುಕೊಳ್ಳುವ ಔಪಚಾರಿಕ ನಿರ್ಧಾರವನ್ನು ಮ್ಯಾಜಿಸ್ಟ್ರೇಟ್ ಕೈಗೊಳ್ಳಬೇಕು. ಸಂಜ್ಞಾನ ತೆಗೆದುಕೊಂಡ ನಂತರವೂ ಸೆಕ್ಷನ್ 225, 226 ಅಥವಾ 227ರ ಅಡಿಯಲ್ಲಿ ಮುಂದಿನ ಸೂಕ್ತ ಕ್ರಮವನ್ನು ಪ್ರತ್ಯೇಕವಾಗಿ ನಿರ್ಧರಿಸಬೇಕು.
ಒಟ್ಟಿನಲ್ಲಿ, ಖಾಸಗಿ ದೂರಿನಲ್ಲಿ, ದೂರು ಬಂದ ತಕ್ಷಣವೇ ಆರೋಪಿಗೆ ನೋಟಿಸ್ ನೀಡುವುದು ಸರಿಯಾದ ಕ್ರಮವಲ್ಲ. ಮೊದಲು ದೂರುದಾರ ಮತ್ತು ಹಾಜರಿರುವ ಸಾಕ್ಷಿಗಳ ಪ್ರಮಾಣವಚನದ ಹೇಳಿಕೆಗಳನ್ನು ದಾಖಲಿಸಬೇಕು (ಕಾನೂನಿನಿಂದ ವಿನಾಯಿತಿ ಇಲ್ಲದಿದ್ದರೆ); ನಂತರ ಮ್ಯಾಜಿಸ್ಟ್ರೇಟ್ ದೂರನ್ನು ವಜಾಗೊಳಿಸುವ ಅಗತ್ಯವಿಲ್ಲವೆಂದು prima facie ಅಭಿಪ್ರಾಯಕ್ಕೆ ಬಂದ ಮೇಲೆ ಆರೋಪಿಗೆ ನೋಟಿಸ್ ನೀಡಬೇಕು; ಆರೋಪಿಯನ್ನು ಆಲಿಸಿದ ನಂತರವೇ ಸಂಜ್ಞಾನ ತೆಗೆದುಕೊಳ್ಳುವ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
