15/10/2026

Law Guide Kannada

Online Guide

ಅತ್ಯಾಚಾರ ಘಟನೆಗಳ ಕುರಿತು ಸ್ವಯಂ ಪ್ರೇರಿತ ಕೇಸ್ : ಗೂಂಡಾಗಳಿಗೆ ಪೊಲೀಸರು ಭಯ ಹುಟ್ಟಿಸಬೇಕಿದೆ – ಸುಪ್ರೀಂ

ನವದೆಹಲಿ: ದೆಹಲಿಯಲ್ಲಿ ನಡೆದ ಅತ್ಯಾಚಾರ ಘಟನೆಗಳ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಹಿಳೆಯರ ವಿರುದ್ಧ ಅಪರಾಧ ಎಸಗುವ ಗೂಂಡಾಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ಕೆಲಸವನ್ನ ಪೊಲೀಸರು ಮಾಡಬೇಕು ಎಂದು ಸ್ಪಷ್ಟ ಸಂದೇಶ ನೀಡಿದೆ.

ದೆಹಲಿ-ಎನ್ಸಿಆರ್ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಘಟನೆಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಕೆ ವಿನೋದ್ ಚಂದ್ರನ್ ಅವರ ಪೀಠವು, ನಗರದಲ್ಲಿ, ವಿಶೇಷವಾಗಿ ಕೆಲವು ದುರ್ಬಲ ಪ್ರದೇಶಗಳಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬ ಭಾವನೆ ಇದೆ. ನಾವು ಒಟ್ಟಾಗಿ ಕೆಲಸ ಮಾಡಬೇಕು. ದೆಹಲಿ-ಎನ್ಸಿಆರ್ನಲ್ಲಿರುವ ಪ್ರತಿಯೊಬ್ಬ ಮಹಿಳೆಯೂ ರಾತ್ರಿ 11 ಗಂಟೆಗೆ ರಸ್ತೆಗಳಲ್ಲಿ ಪ್ರಯಾಣಿಸುವಾಗ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು” ಎಂದಿತು.

”ಅಪರಾಧ ನಡೆದ ನಂತರ ನೀವು ಏನು ಮಾಡುತ್ತೀರಿ ಎಂಬುದಲ್ಲ, ಅಪರಾಧವನ್ನು ತಡೆಯುವುದು ಮುಖ್ಯ. , ‘ಅತ್ಯಾಚಾರ ಯಾವುದೇ ಸಮಾಜಕ್ಕೆ ಸ್ವೀಕಾರಾರ್ಹವಲ್ಲದ ವಿಷಯ. ಗೂಂಡಾಗಳು ಮತ್ತು ಅಂತಹ ಅಪರಾಧಗಳನ್ನು ಮಾಡುವ ಪ್ರವೃತ್ತಿಯನ್ನು ಹೊಂದಿರುವ ಸಮಾಜ ವಿರೋಧಿ ಶಕ್ತಿಗಳ ಮನಸ್ಸಿನಲ್ಲಿ ಪೊಲೀಸರು ಭಯವನ್ನು ಸೃಷ್ಟಿಸಬೇಕು ಎಂದು ನ್ಯಾಯಪೀಠ ತಿಳಿಸಿತು.

ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್)ದಾದ್ಯಂತ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ಅಪರಾಧಗಳ ಕುರಿತಾದ ಸುದ್ದಿ ವರದಿಗಳನ್ನು ಪರಿಗಣಿಸಿ ಸೆಪ್ಟೆಂಬರ್ 28 ರಂದು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು, ಇಂತಹ ಪ್ರಕರಣಗಳು ಕಾನೂನು ಜಾರಿ ಅಧಿಕಾರಿಗಳ ವ್ಯವಸ್ಥಿತ ವೈಫಲ್ಯವನ್ನು ಎತ್ತಿ ತೋರಿಸುತ್ತವೆ ಎಂದು ಗಮನಿಸಿತ್ತು.

ದೆಹಲಿಯ ಆಸ್ತಾ ಕುಂಜ್ ಪಾರ್ಕ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ದೆಹಲಿಯ ಸ್ವರೂಪ್ ನಗರ ಪ್ರದೇಶದಲ್ಲಿ ಹದಿಹರೆಯದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮತ್ತು ಗ್ರೇಟರ್ ನೋಯ್ಯಾದಿಂದ ದೆಹಲಿಗೆ 47ಕಿ.ಮೀ. ದೂರ ಪ್ರಯಾಣಿಸುತ್ತಿದ್ದಾಗ ಚಲಿಸುವ ಸ್ವೀಪರ್ ಬಸ್ಸಿನೊಳಗೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಕಾನೂನು ಜಾರಿ ಸಂಸ್ಥೆಗಳು ತಡೆಯಲು ವಿಫಲವಾದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಅವಗಾಹನೆಗೆ ತೆಗೆದುಕೊಂಡಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು