ಶ್ರೀಮಂತ ಭಾರತೀಯರ ಫೋರ್ಬ್ಸ್ ಪಟ್ಟಿ ಬಿಡುಗಡೆ: ಅದಾನಿ ಅಗ್ರ: ಮೂವರು ಕನ್ನಡಿಗರಿಗೆ ಸ್ಥಾನ
ನವದೆಹಲಿ: ಪ್ರಸಿದ್ಧ ಫೋರ್ಬ್ಸ್ ನಿಯತಕಾಲಿಕೆಯು ಬಿಡುಗಡೆ ಮಾಡಿರುವ 2026ನೇ ಸಾಲಿನ ‘ಭಾರತದ 100 ಅತ್ಯಂತ ಶ್ರೀಮಂತರ ಪಟ್ಟಿ’ಯಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತೆ ಮೊದಲ ಸ್ಥಾನ ಪಡೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಎರಡನೇ ಸ್ಥಾನದಲ್ಲಿದ್ದ ಅದಾನಿ ಕುಟುಂಬ, ಈ ಬಾರಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅರ್ಧಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಮಾರ್ವಾಡಿ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಕುಟುಂಬವು 10.85 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಮೂರು ವರ್ಷಗಳ ನಂತರ ಮತ್ತೆ ಅಗ್ರಸ್ಥಾನಕ್ಕೇರಿದೆ. ಮುಖೇಶ್ ಅಂಬಾನಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಸಾವಿತ್ರಿ ಜಿಂದಾಲ್ ಮೂರನೇ ಸ್ಥಾನದೊಂದಿಗೆ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ. ಕರ್ನಾಟಕದಲ್ಲಿ ಮೂರು ಮಂದಿ ಕನ್ನಡಿಗ ಉದ್ಯಮಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅದಾನಿ ಕುಟುಂಬದ ಸಂಪತ್ತು 1.99 ಲಕ್ಷ ಕೋಟಿ ರೂ. (20.7 ಶತಕೋಟಿ ಡಾಲರ್) ಹೆಚ್ಚಾಗಿದೆ. ಡಾಲರ್ ಲೆಕ್ಕದಲ್ಲಿ ಈ ವರ್ಷ ಪಟ್ಟಿಯಲ್ಲಿರುವ ಉದ್ಯಮಿಗಳ ಪೈಕಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತು ಹೆಚ್ಚಿಸಿಕೊಂಡವರು ಅದಾನಿ. ಆದರೂ, 2022ರಲ್ಲಿ ಅವರ ಸಂಪತ್ತಿಗೆ (150 ಶತಕೋಟಿ ಡಾಲರ್ ಅಥವಾ 14.43 ಲಕ್ಷ ಕೋಟಿ ರೂ.) ಹೋಲಿಸಿದರೆ ಇದು ಕಡಿಮೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಸಂಪತ್ತು 1.80 ಲಕ್ಷ ಕೋಟಿ ರೂ. ಇಳಿಕೆಯಾಗಿದ್ದು, ಒಟ್ಟು 9.3 ಲಕ್ಷ ಕೋಟಿ ರೂ.ಗೆ ತಗ್ಗಿದೆ. ವಿವಿಧ ವ್ಯವಹಾರಗಳಲ್ಲಿ ಲಾಭಾಂಶದ ಮೇಲಿನ ಒತ್ತಡದಿಂದ ರಿಲಯನ್ಸ್ ಷೇರುಗಳ ಮೇಲೆ ಪರಿಣಾಮ ಬೀರಿದೆ ಎಂದು ಫೋರ್ಟ್ಸ್ ತಿಳಿಸಿದೆ.
ಒ.ಪಿ. ಜಿಂದಾಲ್ ಸಮೂಹದ ಸಾವಿತ್ರಿ ಜಿಂದಾಲ್ ಅವರು 39.3 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ 3ನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಮುಂದುವರಿದಿದ್ದಾರೆ. ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಸಂಪತ್ತು ಶೇ. 74ರಷ್ಟು ಏರಿಕೆಯಾಗಿ (34.7 ಶತಕೋಟಿ ಡಾಲರ್) 4ನೇ ಸ್ಥಾನಕ್ಕೇರಿದ್ದಾರೆ.
ಐಟಿ ದಿಗ್ಗಜರಿಗೆ ಹಿನ್ನೆಡೆ
ಕೃತಕ ಬುದ್ಧಿಮತ್ತೆ ಮತ್ತು ಆಟೊಮೇಷನ್ ಕಾರಣದಿಂದ ಭಾರತದ ಸಾಫ್ಟ್ವೇರ್ ಸೇವಾ ವಲಯಕ್ಕೆ ಹೊಡೆತ ಬಿದ್ದಿದ್ದು, ತಂತ್ರಜ್ಞಾನ ಕ್ಷೇತ್ರದ ಶ್ರೀಮಂತರ ಸಂಪತ್ತು ಇಳಿಕೆಯಾಗಿದೆ. ಶಿವ್ ನಾಡಾರ್, ಅಜೀಮ್ ಪ್ರೇಮ್ಜಿ ಮತ್ತು ಎನ್.ಆರ್.ನಾರಾಯಣ ಮೂರ್ತಿ ಅವರ ಆಸ್ತಿ ಮೌಲ್ಯ ಕುಸಿದಿದೆ. ಇನ್ಫೋಸಿಸ್ನ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ, ಗೋಪಾಲಕೃಷ್ಣನ್ ಅವರು 100 ಶ್ರೀಮಂತರ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ.
ಮೂವರು ಕನ್ನಡಿಗರು ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
1)ನಿತಿನ್ ಮತ್ತು ನಿಖಿಲ್ ಕಾಮತ್ – 7.86 ಶತಕೋಟಿ ಡಾಲರ್ (33 ನೇ ಸ್ಥಾನ)
2)ಡಾ. ರಂಜನ್ ಪೈ -4.07 ಶತಕೋಟಿ ಡಾಲರ್ (72 ನೇ ಸ್ಥಾನ)
3) ಎನ್.ಆರ್.ನಾರಾಯಣ ಮೂರ್ತಿ – 3.95 ಶತಕೋಟಿ ಡಾಲರ್ (78ನೇ ಸ್ಥಾನ)
ಮೂಲತಃ ಕನ್ನಡಿಗರಲ್ಲದಿದ್ದರೂ ಕರ್ನಾಟಕದಲ್ಲಿ ವಾಸ್ತವ್ಯವಿರುವ ಅಜೀಮ್ ಪ್ರೇಮಿ, ಇರ್ಫಾನ್ ರಜಾಕ್, ಕಿರಣ್ ಮಜುಂದಾರ್ ಶಾ ಮತ್ತು ಜಿ.ಎಂ. ರಾವ್ ಅವರು ಫೋರ್ಟ್ಸ್ 100 ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಟಾಪ್ 10 ಶ್ರೀಮಂತರ ಪಟ್ಟಿ (2026):ವ್ಯಾಪಾರ ಸುದ್ದಿ ನೋಡಿ
ಶ್ರೇಯಾಂಕ ಉದ್ಯಮಿಯ ಹೆಸರು ಒಟ್ಟು ಸಂಪತ್ತು (USD) ಪ್ರಮುಖ ಉದ್ಯಮ
1 ಗೌತಮ್ ಅದಾನಿ ಮತ್ತು ಕುಟುಂಬ $112.7 ಬಿಲಿಯನ್ ಅದಾನಿ ಗ್ರೂಪ್ (ಇಂಧನ, ಬಂದರು)
2 ಮುಖೇಶ್ ಅಂಬಾನಿ $86.3 ಬಿಲಿಯನ್ ರಿಲಯನ್ಸ್ ಇಂಡಸ್ಟ್ರೀಸ್
3 ಸಾವಿತ್ರಿ ಜಿಂದಾಲ್ ಮತ್ತು ಕುಟುಂಬ $39.8 ಬಿಲಿಯನ್ ಒ.ಪಿ. ಜಿಂದಾಲ್ ಗ್ರೂಪ್
4 ಲಕ್ಷ್ಮಿ ಮಿತ್ತಲ್ $34.7 ಬಿಲಿಯನ್ ಆರ್ಸಿಲರ್ ಮಿತ್ತಲ್
5 ಸುನಿಲ್ ಮಿತ್ತಲ್ ಮತ್ತು ಕುಟುಂಬ $32.9 ಬಿಲಿಯನ್ ಭಾರ್ತಿ ಏರ್ಟೆಲ್
6 ಸೈರಸ್ ಪೂನಾವಾಲಾ $28.4 ಬಿಲಿಯನ್ ಸೀರಮ್ ಇನ್ಸ್ಟಿಟ್ಯೂಟ್
7 ಶಿವ್ ನಾಡಾರ್ $27.4 ಬಿಲಿಯನ್ ಹೆಚ್ಸಿಎಲ್ (HCL)
8 ದಿಲೀಪ್ ಸಾಂಘ್ವಿ $26.3 ಬಿಲಿಯನ್ ಸನ್ ಫಾರ್ಮಾ
9 ಕುಮಾರ್ ಮಂಗಲಂ ಬಿರ್ಲಾ $23.2 ಬಿಲಿಯನ್ ಆದಿತ್ಯ ಬಿರ್ಲಾ ಗ್ರೂಪ್
10 ಹಿಂದೂಜಾ ಕುಟುಂಬ $21.2 ಬಿಲಿಯನ್ ಹಿಂದೂಜಾ ಗ್ರೂಪ್
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
