Law Guide Kannada

ಉತ್ತಮ ಸಮಾಜಕ್ಕಾಗಿ - ಲಾಗೈಡ್

ರೂ.10 ಸಾವಿರದ ಶಾಂತಿ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ: ನೇಹಾ ಬೋರಾಗೆ ಹಿನ್ನಡೆ

ನವದೆಹಲಿ: ವಿಚಾರಣೆ ವೇಳೆ ಶಾಂತಿ ಕಾಪಾಡುತ್ತೇನೆಂದು ರೂ 10 ಸಾವಿರ ವೈಯಕ್ತಿಕ ಬಾಂಡ್ ಜತೆಗೆ ಶ್ಯೂರಿಟಿ ನೀಡಿ ಸಹಿ ಹಾಕಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (ಎಐಎಸ್ಎ) ರಾಷ್ಟ್ರೀಯ ಅಧ್ಯಕ್ಷೆ ನೇಹಾಬೊರಾ ಅವರಿಗೆ ಆದೇಶಿಸಿದ್ದ ವಿಶೇಷ ಮ್ಯಾಜಿಸ್ಟ್ರೇಟ್ ಆದೇಶವನ್ನ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.

ಶಾಂತಿ ಕಾಪಾಡಲು ₹ 10 ಸಾವಿರದ ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಒದಗಿಸುವಂತೆ ಸೂಚಿಸಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಅಖಿಲ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ತಿರಸ್ಕರಿಸಿದ್ದು, ಪ್ರಕರಣದಲ್ಲಿ ‘ಸಾಕಷ್ಟು ಸುರಕ್ಷತಾ ಕ್ರಮಗಳು’ ಇವೆ ಎಂದು ಅಭಿಪ್ರಾಯಪಟ್ಟರು.
ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ ಮೊದಲು, ಸಂಬಂಧಿತ ಎಲ್ಲ ದಾಖಲೆಗಳು ಹಾಗೂ ಮಾಹಿತಿಯನ್ನು ನೇಹಾ ಬೋರಾ ಅವರಿಗೆ ಒದಗಿಸುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಗೆ ಕೋರ್ಟ್ ಸೂಚಿಸಿತು.

ವಿಚಾರಣೆ ವೇಳೆ ನೇಹಾ ಬೋರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆಗೆ ಕರೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ರಾಷ್ಟ್ರಧ್ವಜ ಹಾರಿಸಲು ನಾಗರಿಕರು ಅನುಮತಿ ಪಡೆಯುವ ಅಗತ್ಯವೂ ಇಲ್ಲ ಎಂದು ಹೇಳಿದ್ದರು. ಅಕ್ಟೋಬರ್ 16ರಂದು ಮಂಡಿ ಹೌಸ್ನಲ್ಲಿ ಶಾಂತಿಯುತ ಸಭೆ ನಡೆಸುವಂತೆ ಮಾತ್ರ ನೇಹಾ ಬೋರಾ ಕರೆ ನೀಡಿದ್ದರು. ಅಲ್ಲಿಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರು ಯಾವುದೇ ಅಪರಾಧ ಮಾಡಿಲ್ಲ ಎಂದರು.

ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಸರ್ಕಾರ ಬದಲಾವಣೆಯಾಗಬೇಕಾದರೆ ಅದು ಮತದಾನದ ಮೂಲಕವೇ ಆಗಬೇಕು; ರಾಷ್ಟ್ರ ರಾಜಧಾನಿಯಲ್ಲಿ ‘ಅರಾಜಕ ಗುಂಪುಗಳು’ ಸೇರಿಕೊಳ್ಳುವ ಮೂಲಕ ಅಲ್ಲ ಎಂದರು.

ನೇಹಾ ಬೋರಾ ಅವರು ಮಂಡಿ ಹೌಸ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಶಕ್ಕೆ ಪಡೆದ ಬಳಿಕ, ಅಕ್ಟೋಬರ್ 17ರಂದು ಈ ನೋಟಿಸ್ ನೀಡಲಾಗಿತ್ತು.

‘ಲೆಹರಾ ದೋ ತಿರಂಗಾ’ ಮೆರವಣಿಗೆಗೆ ಸಂಬಂಧಿಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 126 ಮತ್ತು 130ರ ಜೊತೆಗೆ ಸೆಕ್ಷನ್ 135(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿತ್ತು. ನೋಟಿಸ್ ಅಸ್ಪಷ್ಟವಾಗಿದೆ, ಅದರಲ್ಲಿನ ಅಂಶಗಳು ವಾಸ್ತವಕ್ಕೆ ವಿರುದ್ಧವಾಗಿವೆ ಹಾಗೂ ಶಾಂತಿಯುತ ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ನೇಹಾ ಬೋರಾ ಆಕ್ಷೇಪಿಸಿದ್ದರು.

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಂತರ್ ಮಂತರ್ ಸಮೀಪ ಪದೇಪದೇ ಪ್ರತಿಭಟನೆ ನಡೆಸಿದ್ದು, ಘೋಷಣೆಗಳನ್ನು ಕೂಗಿದ್ದು ಹಾಗೂ ಕನಾಟ್ ಪ್ಲೇಸ್ ನಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಲು ಯತ್ನಿಸಿದ್ದು ಸೇರಿದಂತೆ ಹಲವು ಆರೋಪಗಳನ್ನು ಪೊಲೀಸರು ಉಲ್ಲೇಖಿಸಿದ್ದರು.

ಮುಂಜಾಗ್ರತಾ ಕ್ರಮದ ಭಾಗವಾಗಿ ಕೈಗೊಂಡಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಸಂಬಂಧಿತ ಕಾನೂನು ನಿಯಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ಕಾನೂನುಬದ್ದ ಪ್ರಕ್ರಿಯೆ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ಮ್ಯಾಜಿಸ್ಟ್ರೇಟ್ ಗೆ ನಿರ್ದೇಶಿಸಿತು.

 

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Scroll to Top