ಸುಪ್ರೀಂ ಕೋರ್ಟ್ನಲ್ಲಿ ಹೈಕೋರ್ಟ್ ಪ್ರಕರಣಗಳ ಹೆಚ್ಚಳ: ಮಹತ್ವದ ಸಲಹೆಗಳನ್ನ ನೀಡಿದ CJI ಸೂರ್ಯಕಾಂತ್
ಕೊಚ್ಚಿ: ಹೈಕೋರ್ಟ್ ಗಳಲ್ಲಿ ಬಾಕಿ ಇರುವ ಪ್ರಕರಣಗಳ ತುರ್ತು ವಿಚಾರಣೆ ಅಥವಾ ಶೀಘ್ರ ವಿಚಾರಣೆ ಕೋರಿ ಅರ್ಜಿದಾರರು ಸುಪ್ರೀಂ ಕೋರ್ಟ್ನ ಮೆಟ್ಟಿಲೇರುತ್ತಿರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ, ಹೀಗಾಗಿ ಅರ್ಜಿದಾರರು ತುರ್ತು ವಿಚಾರಣೆಗಾಗಿ ಮುಗಿಬೀಳುವ ಮುನ್ನ ಮರುಪರಿಶೀಲಿಸುವಂತೆ ಹೈಕೋರ್ಟ್ ಗಳಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮಹತ್ವದ ಸಲಹೆ ನೀಡಿದ್ದಾರೆ.
ಕೊಚ್ಚಿಯಲ್ಲಿ ಕೇರಳ ಹೈಕೋರ್ಟ್ನ 70ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದ ಸಿಜೆಐ ಸೂರ್ಯಕಾಂತ್ ಅವರು, ಇದು ಈಗ ಸುಪ್ರೀಂ ಕೋರ್ಟ್ಗೆ ಅರ್ಜಿಗಳ ಮಹಾಪೂರವೇ ಹರಿದುಬರುವ ಹೊಸ ರೀತಿಯ ವ್ಯಾಜ್ಯ ಪ್ರಕ್ರಿಯೆಯಾಗಿ ಬೆಳೆದಿದೆ. ನ್ಯಾಯಾಂಗ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತವಾಗಿ ಸ್ಪಂದಿಸುವಂತೆ ಸುಧಾರಿಸಲು ಅವಕಾಶವಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ನುಡಿದರು.
ತುರ್ತು ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಗುರುತಿಸಲು ಸಾಧ್ಯವೇ? ವಿಚಾರಣೆಗೆ ಪ್ರಕರಣಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ನಿರೀಕ್ಷಿತವಾಗಿಸಲು ಸಾಧ್ಯವೇ? ವಿಳಂಬದಿಂದ ಸರಿಪಡಿಸಲಾಗದ ಹಾನಿ ಉಂಟಾಗಬಹುದಾದ ಪ್ರಕರಣಗಳಿಗೆ ಆದ್ಯತೆ ನೀಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದೇ? ಸಕಾಲದಲ್ಲಿ ನ್ಯಾಯ ಪಡೆಯಲು ಅರ್ಜಿದಾರರು ರಾಷ್ಟ್ರ ರಾಜಧಾನಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಅವಲಂಬಿಸಬೇಕಾದ ಪರಿಸ್ಥಿತಿ ತಪ್ಪಿಸಲು ಸಾಧ್ಯವೇ? ಇವು ನ್ಯಾಯಾಂಗ ವ್ಯವಸ್ಥೆಯ ಟೀಕೆಯ ಪ್ರಶ್ನೆಗಳಲ್ಲ; ಬದಲಿಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯ ಪ್ರಶ್ನೆಗಳಾಗಿವೆ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು.
ಭಾರತದಲ್ಲಿ ಸಾಂವಿಧಾನಿಕ ನ್ಯಾಯವು ನವದೆಹಲಿಯಿಂದಲೇ ಆರಂಭವಾಗಿ ಅಲ್ಲಿಯೇ ಅಂತ್ಯಗೊಳ್ಳುವುದಿಲ್ಲ. ದೇಶದಾದ್ಯಂತ ಇರುವ 25 ಹೈಕೋರ್ಟ್ಗಳ ಬಲಿಷ್ಠ ಜಾಲದಲ್ಲಿ ನ್ಯಾಯಾಂಗ ವ್ಯವಸ್ಥೆಯ ಶಕ್ತಿ ಅಡಗಿದೆ. ಪ್ರತಿಯೊಂದು ಹೈಕೋರ್ಟ್ಗೂ ಹಕ್ಕುಗಳನ್ನು ರಕ್ಷಿಸುವ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವ ಜವಾಬ್ದಾರಿ ಇದೆ ಎಂದು ಸಿಜೆಐ ಸೂರ್ಯಕಾಂತ್ ತಿಳಿಸಿದರು.
ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯುವಲ್ಲಿ ಕೇರಳ ಹೈಕೋರ್ಟ್ ಮಹತ್ವದ ಪಾತ್ರ
ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಕೇರಳ ಹೈಕೋರ್ಟ್ ಮಹತ್ವದ ಪಾತ್ರ ವಹಿಸಿದೆ. ಹಲವು ಮಾನದಂಡಗಳನ್ನು ಸ್ಥಾಪಿಸಿದೆ. ಇತಿಹಾಸದೊಂದಿಗೆ ಹೆಜ್ಜೆ ಹಾಕುವುದಷ್ಟೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ಅದಕ್ಕಿಂತಲೂ ಮುಂದೆ ಸಾಗುವ ಮೂಲಕ ಕೇರಳ ಹೈಕೋರ್ಟ್ ತನ್ನದೇ ಆದ ಛಾಪು ಮೂಡಿಸಿದೆ . ಇದಕ್ಕೆ ಉದಾಹರಣೆಯಾಗಿ 1999ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಕೇರಳ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದರು. ವಿಶ್ವದಲ್ಲೇ ಇಂತಹ ಆದೇಶ ನೀಡಿದ ಮೊದಲ ಸಾಂವಿಧಾನಿಕ ನ್ಯಾಯಾಲಯ ಕೇರಳ ಹೈಕೋರ್ಟ್ ಎಂದು ಸಿಜೆಐ ಸೂರ್ಯಕಾಂತ್ ಶ್ಲಾಘಸಿದರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರಲ್ಲಿಯೂ ಕೇರಳ ಹೈಕೋರ್ಟ್ ಮಹತ್ವದ ಪಾತ್ರ ವಹಿಸಿದೆ. ಪರಿಸರ ಸಂರಕ್ಷಣೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಪ್ರಗತಿಪರ ತೀರ್ಪುಗಳ ಮೂಲಕ ಸಾಂವಿಧಾನಿಕ ತತ್ವಗಳನ್ನು ಜನರ ದೈನಂದಿನ ಬದುಕಿನಲ್ಲಿ ಅಳವಡಿಸುವ ಕೆಲಸವನ್ನೂ ಮಾಡಿದೆ ಸೂರ್ಯಕಾಂತ್ ಕೇರಳ ಹೈಕೋರ್ಟ್ ಕಾರ್ಯ ಮತ್ತು ಪಾತ್ರವನ್ನ ಬಣ್ಣಿಸಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
