18/11/2026

Law Guide Kannada

Online Guide

ಹಲ್ಲೆ ಪ್ರಕರಣ: ಆರೋಪಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮೈಸೂರಿನ III ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಹಲ್ಲೆಗೊಳಗಾದ ಸಂತ್ರಸ್ತ ವ್ಯಕ್ತಿ ಅನಿಲ್ ಬಿ.ಎಸ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಅವರಿದ್ದ ಪೀಠವು, ಆರೋಪಿ ಆದಿಶೇಷ ಬಿಎಸ್ ಎಂಬುವವರಿಗೆ ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನ ರದ್ದುಗೊಳಿಸಿ ಆದೇಶಿಸಿದೆ.

ಏನಿದು ಪ್ರಕರಣ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಹಲ್ಲೆಗೊಳಗಾದ ಸಂತ್ರಸ್ತ ಅನಿಲ್ ಬಿ.ಎಸ್ ಮತ್ತು ಅದೇ ಗ್ರಾಮದ ಆರೋಪಿ ಆದಿಶೇಷ ಬಿಎಸ್ ನಡುವೆ ಕೆಲವು ಸಿವಿಲ್ ವಿವಾದವಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 05.02.2026 ರಂದು ಆರೋಪಿ ಆದಿಶೇಷ ಅರ್ಜಿದಾರರ ಮೇಲೆ ಮಚ್ಚಿನಿಂದ (ಮಚ್ಚು/ಲಾಂಗ್) ಹಲ್ಲೆ ನಡೆಸಿದ್ದರು. ಈ ಪರಿಣಾಮ ಅರ್ಜಿದಾರರಿಗೆ ಗಂಭೀರಗಾಯಗಳಾಗಿತ್ತು.

ಈ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಗೆ ಅರ್ಜಿದಾರ ಅನಿಲ್ ಪತ್ನಿ ರಕ್ಷಿತಾ ಅವರು ದಿನಾಂಕ 05.02.2026 ರಂದು ದೂರು ದಾಖಲಿಸಿದ್ದರು. ಪ್ರಥಮ ಮಾಹಿತಿಯ ಆಧಾರದ ಮೇಲೆ, ಪ್ರತಿವಾದಿ ಸಂಖ್ಯೆ 1 ಆರೋಪಿ ಆದಿಶೇಷ ಅಪರಾಧಗಳಿಗೆ ಅಪರಾಧ ಸಂಖ್ಯೆ 18/2026 ರಲ್ಲಿ ಈIಖ ದಾಖಲಿಸಲಾಗಿತ್ತು.

ನಂತರ ಆರೋಪಿ ಆದಿಶೇಷ ಪ್ರಕರಣದಲ್ಲಿ ಬಂಧನದ ಭೀತಿಯಿಂದ, ನಿರೀಕ್ಷಣಾ ಜಾಮೀನು ಕೋರಿ Crl.Misc.No.5040/2026 ರಲ್ಲಿ ಅಧಿಕಾರ ವ್ಯಾಪ್ತಿಯ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಅರ್ಜಿಯನ್ನು 28.02.2026 ರಂದು ಮಂಜೂರು ಮಾಡಿದ್ದ ಸೆಷನ್ಸ್ ಕೋರ್ಟ್ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನ ಪ್ರಶ್ನಿಸಿ ಆರೋಪಿಗೆ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದುಕೋರಿ ಗಾಯಗೊಂಡ ಸಂತ್ರಸ್ತ ಅನಿಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಎರಡು ಕಡೆ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠವು, ಆರೋಪಿ ಆದಿಶೇಷ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಿ ತೀರ್ಪು ನೀಡಿದೆ. ಅಲ್ಲದೆ ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಒಂದು ವಾರದ ಅವಧಿಯೊಳಗೆ ಆರೋಪಿ ಆದಿಶೇಷ ಅವರು ಶರಣಾಗಬೇಕೆಂದು (ಸರೆಂಡರ್) ನಿರ್ದೇಶಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.