17/11/2026

Law Guide Kannada

Online Guide

ಅಗತ್ಯವಿದ್ದರೆ ಮಾತ್ರ DNA ಪರೀಕ್ಷೆ:ಮೊದಲು ವ್ಯಾಜ್ಯ ಪರಿಹಾರ ಸಾಧ್ಯತೆ ಬಗ್ಗೆ ಪರಿಶೀಲಿಸಿ – ಹೈಕೋರ್ಟ್

ಬೆಂಗಳೂರು: ‘ಮಗುವಿನ ಪಿತೃತ್ವ ನಿರ್ಧರಿಸಲು ಅಗತ್ಯವಿದ್ದರೇ ಮಾತ್ರ ಡಿಎನ್ಎ ಪರೀಕ್ಷೆಗೆ ಆದೇಶಿಸಬೇಕು. ಈ ಬಗ್ಗೆ ತೀರ್ಮಾನಿಸುವ ಮೊದಲು, ಲಭ್ಯವಿರುವ ಇತರ ಸಾಕ್ಷ್ಯಗಳ ಆಧಾರದ ಮೇಲೆ ವ್ಯಾಜ್ಯವನ್ನು ಪರಿಹರಿಸಲು ಸಾಧ್ಯವಿದೆಯೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಪರಿಶೀಲಿಸಬೇಕು’ ಎಂದು ಹೈಕೋರ್ಟ್ ಸೂಚಿಸಿದೆ.

ಮಗುವಿನ ಪಿತೃತ್ವವನ್ನು ನಿರ್ಧರಿಸಲು ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ತಂದೆ ಸಲ್ಲಿಸಿದ್ದ ಅರ್ಜಿಯನ್ನ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ಡಿಎನ್ಎ ಪರೀಕ್ಷೆ ನಡೆಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಮರು ಪರಿಶೀಲಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನ್ಯಾಯಪೀಠ ಹಿಂದಿರುಗಿಸಿದೆ.

‘ಮಗುವಿನ ಕಲ್ಯಾಣವೇ ಪರಮ ಆದ್ಯತೆ ಎಂಬ ಕಾರಣವನ್ನು ಮುಂದು ಮಾಡಿಕೊಂಡು ಪಿತೃತ್ವವನ್ನು ನಿರ್ಧರಿಸಲು ಡಿಎನ್ಎ ಪರೀಕ್ಷೆಗೆ ಆದೇಶಿಸಲಾಗದು. ಡಿಎನ್ಎ ಪರೀಕ್ಷೆ ವ್ಯಕ್ತಿಯೊಬ್ಬರ ದೈಹಿಕ ಸ್ವಾಯತ್ತತೆ ಮತ್ತು ಗೋಪ್ಯತೆಯ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

‘ಇಂತಹ ಪರೀಕ್ಷೆಗೆ ಆದೇಶಿಸುವ ಮೊದಲು ನ್ಯಾಯಾಲಯ ಉಭಯ ಪಕ್ಷಗಾರರ ಹಿತಾಸಕ್ತಿಗಳನ್ನು ಸಮತೋಲನದಲ್ಲಿ ಪರಾಮರ್ಶಿಸಬೇಕು. ಪಿತೃತ್ವದ ವಿವಾದವನ್ನು ಪರಿಹರಿಸಲು ಲಭ್ಯವಿರುವ ಸಾಕ್ಷ್ಯಗಳು ಸಾಕಾಗುತ್ತಿಲ್ಲ ಎಂದಾಗ ಮಾತ್ರವೇ ಡಿಎನ್ಎ ಪರೀಕ್ಷೆಯ ಅಗತ್ಯತೆಯನ್ನು ಪರಿಗಣಿಸಬೇಕು’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಪ್ರಕರಣದ ವಿವರ
ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಮಗುವಿನ ನಿರ್ವಹಣೆ ಕೋರಿ ಮಗುವಿನ ತಾಯಿ ಕೌಟುಂಬಿಕ ನ್ಯಾಯಾಲಯದಲ್ಲಿ ಮಗುವಿನ ತಂದೆಯ ವಿರುದ್ದ ಅರ್ಜಿ ಸಲ್ಲಿಸಿದ್ದರು. ಆದರೆ, 56 ವರ್ಷದ ಮಗುವಿನ ತಂದೆ ತಾನು ಮಗುವಿನ ಜೈವಿಕ ತಂದೆ ಎಂಬುದನ್ನು ನಿರಾಕರಿಸಿದ್ದರು. ಇದನ್ನು ತಳ್ಳಿ ಹಾಕಿದ್ದ ತಾಯಿ, ಮಗುವಿನ ಪಿತೃತ್ವವನ್ನು ನಿರ್ಧರಿಸಲು ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ನ್ಯಾಯಾಲಯ ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ತಂದೆ ಹೈಕೋರ್ಟ್ ಮೊರೆ ಹೋಗಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.