15/11/2026

Law Guide Kannada

Online Guide

ಆರ್ಥಿಕ ಸ್ವಾವಲಂಬಿ ಪತ್ನಿಗೆ ಪತಿ ಜೀವನಾಂಶ ನೀಡಬೇಕಾದ ಅಗತ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿ ಡಿವರ್ಸ್ ಪಡೆಯುವ ಪ್ರಕರಣಗಳೇ ಹೆಚ್ಚಾಗುತ್ತಿದೆ. ಪತ್ನಿಯು ಪತಿಯಿಂದ ಜೀವನಾಂಶಕ್ಕೆ ಬೇಡಿಕೆಯಿಟ್ಟು ಡಿಮ್ಯಾಂಡ್ ಮಾಡುವುದು ಸಹ ಸಾಕಷ್ಟು ಪ್ರಕರಣಗಳಲ್ಲಿ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಜೀವನಾಂಶದ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಪತ್ನಿಯು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು, ಗೌರವಯುತ ಜೀವನ ನಡೆಸಲು ಸಾಕಾಗುವಷ್ಟು ಗಳಿಸುತ್ತಿದ್ದರೆ, ಅಂತಹ ವೇಳೆ ಆಕೆಗೆ ಪತಿಯು ಜೀವನಾಂಶ ನೀಡಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಚಿಲಕೂರು ಸುಮಾಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ 36 ವರ್ಷದ ಪತಿ, ತನಗೆ 31 ವರ್ಷದ ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ 2025ರ ಜುಲೈ 4ರಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿ ಮಾಸಿಕ 85 ಸಾವಿರ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಉತ್ತಮ ಶಿಕ್ಷಣ ಪಡೆದು, ಸ್ವಂತ ಆದಾಯದಿಂದ ಜೀವನ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುವ ಆರ್ಥಿಕವಾಗಿ ಸ್ವಾವಲಂಬಿ ಪತ್ನಿಗೆ ಗಂಡನಿಂದ ಜೀವನಾಂಶ ಪಡೆಯುವ ಅರ್ಹತೆ ಇರುವುದಿಲ್ಲ ಎಂದು ತೀರ್ಪು ಹೇಳಿದೆ. ಇದೇ ವೇಳೆ ಪತ್ನಿಗೆ ಮಾಸಿಕ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 144 ಅನ್ನು ಉಲ್ಲೇಖಿಸಿ ನ್ಯಾಯಪೀಠ ಈ ತೀರ್ಪು ನೀಡಿದ್ದು, “ತನ್ನನ್ನು ತಾನು ಸಾಕಿಕೊಳ್ಳಲು ಅಸಮರ್ಥಳಾಗಿರುವುದು” ಪತ್ನಿಯು ಜೀವನಾಂಶ ಪಡೆಯಲು ಕಾನೂನಿನಲ್ಲಿ ಇರುವ ಅತ್ಯಗತ್ಯವಾದ ಮೊದಲ ಶರತ್ತಾಗಿದೆ. ಎಲ್ಲ ಸಂದರ್ಭಗಳಲ್ಲೂ ಪತಿಯಾದವನು ಪತ್ನಿಯನ್ನು ಪೋಷಿಸಲೇಬೇಕು ಎಂದು ಕಾನೂನು ಹೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು, ಉದ್ಯೋಗದಲ್ಲಿದ್ದು, ತನ್ನ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಆದಾಯ ಗಳಿಸುತ್ತಿದ್ದರೆ ಆಕೆಯನ್ನು ಪತಿಯ ಮೇಲೆ ಅವಲಂಬಿತಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವತಂತ್ರವಾಗಿ ಜೀವನ ನಡೆಸುವ ಸಾಮರ್ಥ್ಯವು ಪತ್ನಿಯ ಜೀವನಾಂಶದ ಬೇಡಿಕೆಯನ್ನು ತಿರಸ್ಕರಿಸಲು ಸೂಕ್ತ ಆಧಾರಗಳಾಗಿವೆ ಎಂದು ಅಭಿಪ್ರಾಯಪಟ್ಟಿದೆ.

ಪತಿಯ ಆದಾಯ ಪತ್ನಿಗಿಂತ ಹೆಚ್ಚಿದೆ ಎಂಬುದು ನಿಜ. ಆದರೆ, ಪತ್ನಿಯ ಆದಾಯ ಆಕೆಯ ಜೀವನ ನಿರ್ವಹಣೆಗೆ ಸಾಕಾಗದಷ್ಟು ಕಡಿಮೆ ಇದ್ದರೆ ಅಂತಹ ಪತ್ನಿಗೆ ಪತಿ ಜೀವನಾಂಶ ನೀಡುವುದು ಅನಿವಾರ್ಯವಾಗುತ್ತದೆ. ಆದರೆ, ಪತ್ನಿಯೇ ಹೇಳಿಕೊಂಡಿರುವ ಪ್ರಕಾರ, ತನ್ನ ಆದಾಯದಿಂದ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆಕೆಯನ್ನು ಪತಿಯ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.