15/11/2026

Law Guide Kannada

Online Guide

33 ವರ್ಷಗಳ ಕಾನೂನು ಹೋರಾಟಕ್ಕೆ ಜಯ; ಚಂದನ ತೈಲಕ್ಕೆ 3 ಕೋಟಿ ರೂ. ಪರಿಹಾರಕ್ಕೆ ಆದೇಶ

ಕಾಸರಗೋಡು: 33 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿದ ಸ್ಟ್ಯಾಂಡರ್ಡ್ ಎಸೆನ್ಸಿಯಲ್ ಆಯಿಲ್ ಲಿಮಿಟೆಡ್ ಸಂಸ್ಥೆಯ ಮಾಲೀಕ ಎನ್.ಎ. ಅಬ್ದುಲ್ ರಹಮಾನ್ ಅವರಿಗೆ 125 ಕೆ.ಜಿ. ಚಂದನ ತೈಲಕ್ಕೆ ಬದಲಾಗಿ 3 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ಕೇರಳ ಸರಕಾರ ಆದೇಶಿಸಿದೆ.

ನಾಯಮ್ಮಾರ್ ಮೂಲೆಯ ಮನೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದ 125 ಕೆ.ಜಿ. ಚಂದನ ತೈಲಕ್ಕೆ ಬದಲಾಗಿ ಮಾಲೀಕರಿಗೆ 3,00,62,500 ರೂ. ಪರಿಹಾರ ನೀಡಲು ಕೇರಳ ಸರಕಾರ ಆದೇಶಿಸಿದೆ. ಮರಯೂರು ಚಂದನ ವಿಭಾಗದಲ್ಲಿ ಕಳೆದ ಮೂರು ವರ್ಷಗಳ ಹರಾಜಿನಲ್ಲಿ ಲಭಿಸಿದ ಕನಿಷ್ಠ ದರವಾದ ಪ್ರತಿ ಕೆ.ಜಿ.ಗೆ 2,40,500 ರೂ. ಆಧರಿಸಿ 125 ಕೆ.ಜಿ. ಚಂದನ ತೈಲಕ್ಕೆ ಒಟ್ಟು 3,00,62,500 ರೂ. ಪರಿಹಾರ ನಿಗದಿಪಡಿಸಲಾಗಿದೆ. ಈ ಸಂಬಂಧ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಕಾರ್ಯದರ್ಶಿ ಕೆ. ಬಿಜು ಸರಕಾರಿ ಆದೇಶ ಹೊರಡಿಸಿದ್ದಾರೆ.

ಇನ್ನು ಈ ಪ್ರಕರಣವನ್ನು 2018, ಎಪ್ರಿಲ್ 19ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಅಬ್ದುಲ್ ರಹಮಾನ್ ಅವರನ್ನು ದೋಷಮುಕ್ತಗೊಳಿಸಿತ್ತು. ಬಳಿಕ ವಶಪಡಿಸಿಕೊಂಡ ಚಂದನ ತೈಲವನ್ನು ಹಿಂದಿರುಗಿಸುವಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ 2010ರ ಚಂದನ ಕಾಯ್ದೆಯ ಪ್ರಕಾರ ಮನೆಯಲ್ಲಿ 100 ಮಿಲಿಲೀಟರ್ ಗಿಂತ ಹೆಚ್ಚು ಚಂದನ ತೈಲ ಸಂಗ್ರಹಿಸಲು ಅನುಮತಿಯಿಲ್ಲ ಎಂಬ ಕಾರಣ ನೀಡಿ ಅರಣ್ಯ ಇಲಾಖೆ ತೈಲವನ್ನು ಹಿಂದಿರುಗಿಸಿರಲಿಲ್ಲ.

ಹೀಗಾಗಿ ಅಬ್ದುಲ್ ರಹಮಾನ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಹೈಕೋರ್ಟ್ ಅಬ್ದುಲ್ ರಹಮಾನ್ ಪರವಾಗಿ 2026ರ ಜೂನ್ 19ರಂದು ಆದೇಶ ಹೊರಡಿಸಿ, ಕಾನೂನುಬದ್ಧವಾಗಿ ಅರ್ಹವಾದ ಪರಿಹಾರವನ್ನು ಮೂರು ತಿಂಗಳೊಳಗೆ ನೀಡುವಂತೆ ಸೂಚಿಸಿತ್ತು. ಆದೇಶ ಜಾರಿಗೊಳಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಅರ್ಜಿ ಸಲ್ಲಿಸಿದ್ದರು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.