15/11/2026

Law Guide Kannada

Online Guide

LIC ಕಟ್ಟಿದ್ದು 4.4 ಲಕ್ಷ ರೂ. ಬಂದಿದ್ದು 1.56 ಲಕ್ಷ ರೂ.: ನಿವೃತ್ತ ಆರ್ ಟಿಸಿ ನೌಕರನಿಗೆ ನ್ಯಾಯ ದೊರಕಿಸಿಕೊಟ್ಟ ಗ್ರಾಹಕರ ಆಯೋಗ

ಹೈದರಾಬಾದ್: ವಿಮಾ ಪಾಲಿಸಿ ಮಾಡಿಸಿ 4.4 ಲಕ್ಷ ರೂ. ಪಾವತಿ ಮಾಡಿದ್ದ ನಿವೃತ್ತ ರಸ್ತೆ ಸಾರಿಗೆ ನಿಗಮದ ನೌಕರರೊಬ್ಬರಿಗೆ ಮೆಚೂರಿಟಿ ವೇಳೆ ಕೇವಲ 1.56 ರೂ.ಲಕ್ಷ ದೊರೆತಿದ್ದು ಈ ಹಿನ್ನೆಲೆಯಲ್ಲಿ ಉಳಿದ 2.83 ಲಕ್ಷ ರೂ. ಮೊತ್ತವನ್ನು ಅವರಿಗೆ ಮರುಪಾವತಿಸುವಂತೆ ಎಲ್ ಐಸಿಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-II ಆದೇಶಿಸಿದೆ.

ಹೂಡಿಕೆ ಮಾಡಿದ್ದ ನಿವೃತ್ತ ರಸ್ತೆ ಸಾರಿಗೆ ನಿಗಮದ (RTC) ನೌಕರರಾದ ಹೈದರಾಬಾದ್ನ ಹಯತ್ನಗರದ ನಿವಾಸಿ ಕೆ. ಅಂಜನೇಲು ಅವರು, ಹತ್ತು ವರ್ಷಗಳ ಅವಧಿಯಲ್ಲಿ ಎಲ್ಐಸಿಯ ಎರಡು ವಿಮಾ ಪಾಲಿಸಿಗಳಲ್ಲಿ ₹4.4 ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿದ್ದರು. ಆದರೆ ಪಾಲಿಸಿಗಳ ಮೆಚೂರಿಟಿ ಸಂದರ್ಭದಲ್ಲಿ ಕೇವಲ 1.56 ಲಕ್ಷ ರೂ. ಮಾತ್ರ ದೊರೆತಿತ್ತು. ಈ ಹಿನ್ನೆಲೆಯಲ್ಲಿ, ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-II, ಉಳಿದ 2.83 ಲಕ್ಷ ರೂ. ಹಣವನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಭಾರತೀಯ ಜೀವ ವಿಮಾ ನಿಗಮಕ್ಕೆ (LIC) ನಿರ್ದೇಶಿಸಿದೆ. ಅಲ್ಲದೆ ಈ ಜೀವವಿಮೆ ಅಲ್ಲದೆ, ಪಾಲಿಸಿದಾರನಿಗೆ ಉಂಟಾದ ಮಾನಸಿಕ ಯಾತನೆಗಾಗಿ 25,000 ರೂ. ಪರಿಹಾರ ಹಾಗೂ ಕಾನೂನು ಹೋರಾಟದ ವೆಚ್ಚಕ್ಕಾಗಿ 10,000 ರೂ. ಪಾವತಿಸುವಂತೆಯೂ ಆಯೋಗ ಆದೇಶಿಸಿದೆ.

ಕೆ. ಅಂಜನೇಲು ಅವರು ತಮ್ಮ ಭವಿಷ್ಯದ ಉಳಿತಾಯದ ಉದ್ದೇಶದಿಂದ 2010ರಲ್ಲಿ ಎಲ್ಐಸಿಯ ಎರಡು ಜೀವನ್ ಸರಳ್ (ಪ್ಲಾನ್ 165) ಪಾಲಿಸಿಗಳನ್ನು ಪಡೆದುಕೊಂಡಿದ್ದರು. ಈ ಪಾಲಿಸಿಗಳಿಗೆ ಅವರು ಪ್ರತಿ ತಿಂಗಳು ₹1,837 ಪ್ರೀಮಿಯಂ ಪಾವತಿಸುತ್ತಿದ್ದರು. ಹತ್ತು ವರ್ಷಗಳ ಅವಧಿಯಲ್ಲಿ ಅವರು ಒಟ್ಟು 4,40,880 ರೂ. ಪಾವತಿ ಮಾಡಿದ್ದರು. ಆದರೆ, 2020ರಲ್ಲಿ ಪಾಲಿಸಿಗಳ ಅವಧಿ ಪೂರ್ಣಗೊಂಡಾಗ (ಮೆಚೂರಿಟಿ), ನಿರೀಕ್ಷೆಗಿಂತ ಬಹಳ ಕಡಿಮೆ ಮೊತ್ತವನ್ನು ಎಲ್ಐಸಿ ಪಾವತಿಸಲು ಮುಂದಾಯಿತು. ಎರಡೂ ಪಾಲಿಸಿಗಳಿಗೆ ಒಟ್ಟಾರೆಯಾಗಿ ಕೇವಲ 1,56,926 ರೂ. ನೀಡಿತು. ಮೆಚೂರಿಟಿ ವೋಚರ್ ಲ್ಲಿ ಪ್ರತಿ ಪಾಲಿಸಿಗೆ ₹78,463 ಎಂದು ನಮೂದಿಸಲಾಗಿತ್ತು. ಇದರಲ್ಲಿ 55,062 ರೂ. ಮೆಚೂರಿಟಿ ಮೊತ್ತ ಹಾಗೂ 23,401 ರೂ. ಬೋನಸ್ ಸೇರಿತ್ತು.

ಪಾವತಿಗೆ ನೀಡಲಾದ ಮೊತ್ತದಿಂದ ಅತೃಪ್ತರಾದ ಅಂಜನೇಲು ಅವರು 2021ರಲ್ಲಿ ಗ್ರಾಹಕರ ಆಯೋಗದ ಮೊರೆ ಹೋದರು. ಇದಕ್ಕೆ ಪ್ರತಿಯಾಗಿ ಎಲ್ಐಸಿ, ಜೀವನ್ ಸರಳ್ ಯೋಜನೆಯಲ್ಲಿ ವಿಶೇಷವಾಗಿ ಹಿರಿಯ ವಯಸ್ಸಿನ ಪಾಲಿಸಿದಾರರಿಗೆ ಹೆಚ್ಚಿನ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡಿತು. ಪ್ರೀಮಿಯಂ ಮೊತ್ತದ ಬಹುಪಾಲು ವಿಮಾ ರಕ್ಷಣೆಗೆ ಸಂಬಂಧಿಸಿದ ಶುಲ್ಕಗಳಿಗೆ ವಿನಿಯೋಗವಾಗುವುದರಿಂದ, ಮೆಚೂರಿಟಿ ಸಂದರ್ಭದಲ್ಲಿ ಪಾವತಿಸಬೇಕಾದ ಮೊತ್ತ ಕಡಿಮೆಯಾಗುತ್ತದೆ ಎಂದು ಎಲ್ಐಸಿ ವಾದಿಸಿತು.

ಆದರೆ, ಎಲ್ಐಸಿ ನೀಡಿದ ಸಮರ್ಥನೆಯನ್ನು ತಳ್ಳಿ ಹಾಕಿದ ಗ್ರಾಹಕರ ಆಯೋಗ, ಅಂಜನೇಲು ಅವರು ಭರ್ತಿ ಮಾಡಿದ್ದ ಪ್ರಸ್ತಾವನಾ ಅರ್ಜಿಗಳು (Proposal Forms) ಮತ್ತು ಎಲ್ಐಸಿ ನೀಡಿದ ಪಾಲಿಸಿ ಬಾಂಡ್ಗಳ ನಡುವೆ ಪ್ರಮುಖ ವ್ಯತ್ಯಾಸಗಳಿರುವುದನ್ನು ಗಮನಿಸಿತು.

ಪ್ರತಿ ಪಾಲಿಸಿಗೆ ಮೆಚೂರಿಟಿ ಮೊತ್ತ ಕೇವಲ 55,062 ರೂ. ಮಾತ್ರ ದೊರೆಯಲಿದೆ ಎಂಬ ಮಾಹಿತಿಯನ್ನು ಪ್ರಸ್ತಾವನಾ ಅರ್ಜಿಗಳಲ್ಲಿ ಸ್ಪಷ್ಟವಾಗಿ ನಮೂದಿಸಿರಲಿಲ್ಲ. ಆದರೆ, ಪಾಲಿಸಿದಾರರ ಗಮನಕ್ಕೆ ಸಮರ್ಪಕವಾಗಿ ತರದೆ ಈ ಮೊತ್ತವನ್ನು ಪಾಲಿಸಿ ಬಾಂಡ್ ಗಳಲ್ಲಿ ಸೇರಿಸಲಾಗಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿತು.

ಮೆಚೂರಿಟಿ ಸಂದರ್ಭದಲ್ಲಿ ನಿರೀಕ್ಷೆಗಿಂತ ಬಹಳ ಕಡಿಮೆ ಮೊತ್ತ ದೊರೆಯುವ ಸಾಧ್ಯತೆಯ ಬಗ್ಗೆ ಪಾಲಿಸಿದಾರರಿಗೆ ಎಲ್ಐಸಿ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಇದು ಸೇವಾ ನ್ಯೂನತೆ ಎಂದು ಆಯೋಗ ತೀರ್ಮಾನಿಸಿತು. ಅಂಜನೇಲು ಅವರ ದೂರನ್ನು ಪುರಸ್ಕರಿಸಿದ ಆಯೋಗವು, ಬಾಕಿ ಉಳಿದಿರುವ 2,83,954 ರೂ. ಮೊತ್ತವನ್ನು 08.02.2021ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ9ರ ಬಡ್ಡಿಯೊಂದಿಗೆ ಪಾವತಿಸುವಂತೆ ಎಲ್ಐಸಿಗೆ ನಿರ್ದೇಶನ ನೀಡಿತು. ಜೊತೆಗೆ ಮಾನಸಿಕ ಯಾತನೆಗಾಗಿ ₹25,000 ಪರಿಹಾರ, ವ್ಯಾಜ್ಯ ಹೂಡಿಕೆ ವೆಚ್ಚಕ್ಕಾಗಿ ₹10,000 ಪಾವತಿಸುವಂತೆಯೂ ಆದೇಶಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.