‘ಪ್ರತಿಯೊಬ್ಬ ವ್ಯಕ್ತಿಯ ಸಮಯವೂ ಅತ್ಯಂತ ಅಮೂಲ್ಯ’: ಚಿತ್ರಮಂದಿರಕ್ಕೆ ಬಿತ್ತು ಭರ್ಜರಿ ದಂಡ
ಬೆಂಗಳೂರು: ನಿಗದಿತ ಸಮಯಕ್ಕೆ ಸಿನಿಮಾ ಆರಂಭವಾಗದೆ, ಮೊದಲು ಸುಮಾರು 25 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡಿ ತನ್ನ ಸಮಯ ವ್ಯರ್ಥ ಮಾಡಿದ ಸಿನಿ ಥಿಯೇಟರ್ ವಿರುದ್ದ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ವಕೀಲರೊಬ್ಬರಿಗೆ ಜಯ ಸಿಕ್ಕಿದೆ.
26.12.2023ರಂದು ಬೆಂಗಳೂರಿನ ವಕೀಲ ಅಭಿಷೇಶ್ ಎಂ.ಆರ್. ಅವರು ‘ಸಾಮ್ ಬಹದ್ದೂರ್’ ಚಿತ್ರದ ಮಧ್ಯಾಹ್ನದ ಪ್ರದರ್ಶನಕ್ಕಾಗಿ ಮೂರು ಟಿಕೆಟ್ ಗಳನ್ನು ಖರೀದಿಸಿದ್ದರು. ಟಿಕೆಟ್ನಲ್ಲಿ ನಮೂದಿಸಿದ್ದ ಸಮಯಕ್ಕೆ ಅವರು ಚಿತ್ರಮಂದಿರಕ್ಕೆ ಹಾಜರಾಗಿ ತಮ್ಮ ಆಸನದಲ್ಲಿ ಕುಳಿತಿದ್ದರು. ಆದರೆ ಚಿತ್ರಮಂದಿರದಲ್ಲಿ ನಿಗದಿತ ಸಮಯಕ್ಕೆ ಸಿನಿಮಾ ಆರಂಭವಾಗದೆ, ಮೊದಲು ಸುಮಾರು 25 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡಲಾಯಿತು. ಇದರಿಂದ ಸಿನಿಮಾ ತಡವಾಗಿ ಮುಕ್ತಾಯಗೊಂಡಿತು. ಸಿನಿಮಾದ ನಂತರ ನಿಗದಿಯಾಗಿದ್ದ ತಮ್ಮ ವೃತ್ತಿಪರ ದೂರವಾಣಿ ಕರೆಗಳಿಗೆ ಹಾಜರಾಗಲು ಸಾಧ್ಯವಾಗದೆ, ಅವುಗಳನ್ನು ರದ್ದುಗೊಳಿಸಬೇಕಾಯಿತು ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ಜಿಲ್ಲಾ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ನಿಗದಿತ ಸಮಯಕ್ಕಿಂತ ಮೊದಲು ದೀರ್ಘಕಾಲ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುವುದರಿಂದ ಗ್ರಾಹಕರ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ ಎಂದು ಪರಿಗಣಿಸಿ ಪಿವಿಆರ್ ಮತ್ತು ಐನೆಕ್ಸ್ ಗೆ ಚಾಟಿ ಬೀಸಿತು.
ಇದೇ ವೇಳೆ ವಾದ ಮಂಡಿಸಿದ ಗ್ರಾಹಕರ ದೂರುದಾರ ವಕೀಲರು, ನಿಗದಿತ ಸಮಯದಲ್ಲಿ ಆರಂಭವಾಗುತ್ತದೆ ಎಂದು ತಿಳಿಸಲಾದ ಸೇವೆಗೆ ನಾನು ಹಣ ಪಾವತಿಸಿದ್ದೇನೆ. ಆದರೆ ಆ ಸೇವೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ನನ್ನ ಒಪ್ಪಿಗೆಯಿಲ್ಲದೆ ನನ್ನ ಅಮೂಲ್ಯ ಸಮಯವನ್ನು ಬಳಸಿಕೊಳ್ಳಲಾಗಿದೆ.” ಚಿತ್ರಮಂದಿರದ ಟಿಕೆಟ್ ಖರೀದಿಸುವಾಗ ಗ್ರಾಹಕನು ಸಿನಿಮಾ ಯಾವ ಸಮಯಕ್ಕೆ ಆರಂಭವಾಗುತ್ತದೆ ಎಂಬ ಮಾಹಿತಿಯ ಆಧಾರದ ಮೇಲೆ ತನ್ನ ಇತರ ಕೆಲಸಗಳನ್ನು ಯೋಜಿಸುತ್ತಾನೆ. ಆದ್ದರಿಂದ ನಿಗದಿತ ಸಮಯಕ್ಕಿಂತ ಹೆಚ್ಚುವರಿ ಅವಧಿಗೆ ಗ್ರಾಹಕರನ್ನು ಜಾಹೀರಾತುಗಳನ್ನು ವೀಕ್ಷಿಸಲು ಬಲವಂತಪಡಿಸುವುದು ಸೇವೆಯ ಕೊರತೆಯಾಗಿ ಪರಿಗಣಿಸಬೇಕು ಎಂದರು.
ಇದಕ್ಕೆ ಪ್ರತಿವಾದ ಮಂಡಿಸಿದ PVR INOX, ಚಿತ್ರಮಂದಿರ ಸಂಸ್ಥೆಯು, ಸಿನಿಮಾ ಆರಂಭಕ್ಕೂ ಮೊದಲು ಸಾರ್ವಜನಿಕ ಹಿತಾಸಕ್ತಿ ಪ್ರಕಟಣೆಗಳನ್ನು ಪ್ರಸಾರ ಮಾಡುವ ಕಾನೂನುಬದ್ದ ಅವಶ್ಯಕತೆಗಳಿವೆ. ಈ ಕಾರಣದಿಂದ ಸ್ವಲ್ಪ ವಿಳಂಬವಾಗುವುದು ಅನಿವಾರ್ಯವಾಗಬಹುದು ಎಂದು ಅದು ತನ್ನನ್ನು ಸಮರ್ಧಿಸಿಕೊಂಡಿತು.
ಆದರೆ ಈ ವಾದವನ್ನು ಸಂಪೂರ್ಣವಾಗಿ ಒಪ್ಪದ ಗ್ರಾಹಕರ ಆಯೋಗವು, ಸಾರ್ವಜನಿಕ ಹಿತಾಸಕ್ತಿ ಪ್ರಕಟಣೆಗಾಗಿ ಅಗತ್ಯವಿರುವ ಸಮಯವನ್ನು ಒಪ್ಪಿಕೊಂಡರೂ, ಅದನ್ನು ನೆಪವನ್ನಾಗಿ ಮಾಡಿಕೊಂಡು 25 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಸಮರ್ಥಿಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತು.
ಆಧುನಿಕ ಯುಗದಲ್ಲಿ ಸಮಯವನ್ನು ಹಣಕ್ಕೆ ಸಮಾನವಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸಮಯವೂ ಅತ್ಯಂತ ಅಮೂಲ್ಯವಾಗಿದೆ. 25ರಿಂದ 30 ನಿಮಿಷಗಳಷ್ಟು ದೀರ್ಘಕಾಲ ಚಿತ್ರಮಂದಿರದಲ್ಲಿ ಕುಳಿತು ಅನಗತ್ಯ ಜಾಹೀರಾತುಗಳನ್ನು ನೋಡುವಂತೆ ಮಾಡುವುದು ಗಣನೀಯ ಪ್ರಮಾಣದ ಸಮಯವನ್ನು ವ್ಯರ್ಥಗೊಳಿಸುವಂತಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.
ಹಾಗೆಯೇ ದೂರುದಾರರಾದ ಅಭಿಷೇಕ್ ಅವರಿಗೆ 20,000 ಪರಿಹಾರಧನ 8,000 ವ್ಯಾಜ್ಯ ವೆಚ್ಚ ಪಾವತಿಸುವಂತೆ ಗ್ರಾಹಕ ಆಯೋಗವು ಪಿವಿಆರ್, ಐನೆಕ್ಸ್ ಗೆ ಆದೇಶಿಸಿತು. ಇದಲ್ಲದೆ, ಗ್ರಾಹಕರ ಕಲ್ಯಾಣ ನಿಧಿಗೆ (Consumer Welfare Fund) ₹1,00,000 ಪಾವತಿಸುವಂತೆಯೂ ಸಂಸ್ಥೆಗೆ ಸೂಚಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
