17/09/2026

Law Guide Kannada

Online Guide

ಪಿಂಚಣಿ ಕೊಡುಗೆಯೋ ಅಥವಾ ಅನುಕಂಪ ಧನವೋ ಅಲ್ಲ: ತಾಂತ್ರಿಕ ಕಾರಣ ನೀಡಿ ಪೆನ್ಷನ್ ನಿರಾಕರಿಸುವಂತಿಲ್ಲ- ಸುಪ್ರೀಂ

ನವದೆಹಲಿ: ‘ಪಿಂಚಣಿ ಎಂಬುದು ಕೊಡುಗೆಯೋ ಅಥವಾ ಅನುಕಂಪ ಧನವೋ ಅಲ್ಲ. ನೌಕರರು ಸಲ್ಲಿಸಿದ ಹಿಂದಿನ ಸೇವೆಗೆ ಪ್ರತಿಫಲವಾಗಿ ದೊರೆಯುವ ವೇತನವಾಗಿದೆ. ಹೀಗಾಗಿ ದೀರ್ಘಕಾಲ ನಿರಂತರ ಸೇವೆ ಸಲ್ಲಿಸಿ, ಕಾಯಂಗೊಂಡಿರುವ ನೌಕರರಿಗೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪಂಜಾಬ್ ಹರಿಯಾಣ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಪಂಜಾಬ್ ಶಾಲಾ ಶಿಕ್ಷಣ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ಪೀಠವು, ನೌಕರರು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಕೃತಕವಾಗಿ ಅಥವಾ ಆಡಳಿತಾತ್ಮಕ ಕಾರಣಗಳಿಂದ ಕೆಲವು ದಿನಗಳ ಕಾಲ ಸೇವೆಯಲ್ಲಿ ವಿರಾಮ ಉಂಟಾಗಿದ್ದರೆ, ಆ ವಿರಾಮವನ್ನು ಪಿಂಚಣಿ ಲೆಕ್ಕಾಚಾರದಿಂದ ಹೊರಗಿಡಬಾರದು. ಗುತ್ತಿಗೆ, ತಾತ್ಕಾಲಿಕ ಅಥವಾ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ ಅವಧಿಯನ್ನೂ ಬಳಿಕ ಅವರ ಸೇವೆ ಕಾಯಂಗೊಂಡಿದ್ದು, ಪಿಂಚಣಿಗೆ ಅರ್ಹ ಸೇವೆಯಾಗಿ ಪರಿಗಣಿಸಬೇಕು ಎಂದು ಹೇಳಿದೆ.

ಈ ಮೂಲಕ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯ ನೌಕರರು ಸೇವೆ ಕಾಯಂಗೊಳ್ಳುವ ಮುನ್ನ ಸಲ್ಲಿಸಿದ್ದ ಸೇವೆಯನ್ನೂ ಪಿಂಚಣಿಗೆ ಪರಿಗಣಿಸಲು ಅವಕಾಶ ನೀಡಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2020ರ ಆದೇಶವನ್ನು ನ್ಯಾಯಪೀಠವು ಎತ್ತಿಹಿಡಿದಿದೆ. ಇದರಿಂದ ಈ ನೌಕರರು 2004ರ ಜನವರಿ 1ರಿಂದ ಜಾರಿಗೆ ಬಂದ ಹೊಸ ಪಿಂಚಣಿ ಯೋಜನೆಯ ಬದಲು ಹಳೆಯ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

ಸೇವೆಯನ್ನು ಕಾಯಂ ಮಾಡುವಂತೆ ಈ ಹಿಂದೆ ನಡೆದಿದ್ದ ಪ್ರಕರಣದ ವಿಚಾರಣೆಯನ್ನೇ ಆಧರಿಸಿ, ಬಳಿಕ ಪಿಂಚಣಿ ಸೌಲಭ್ಯ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ನೌಕರರು ದೀರ್ಘಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ಬಳಿಕ ಅವರ ಸೇವೆ ಕಾಯಂಗೊಂಡರೆ, ತಾಂತ್ರಿಕ ಕಾರಣಗಳನ್ನು ಅಥವಾ ಆಡಳಿತಾತ್ಮಕವಾಗಿ ಉಂಟಾದ ಸೇವಾ ವಿರಾಮಗಳನ್ನು ಮುಂದಿಟ್ಟುಕೊಂಡು ಪಿಂಚಣಿ ನಿರಾಕರಿಸುವುದು ನ್ಯಾಯಸಮ್ಮತವಲ್ಲ. ನೌಕರರು ಟೈಪ್ ರೈಟಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಒಂದು ವರ್ಷದ ಪರೀಕ್ಷಾರ್ಥ ಸೇವೆ ಪೂರ್ಣಗೊಳಿಸಬೇಕು ಅಥವಾ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಮಂಡಳಿಯ ವಾದವನ್ನೂ ನ್ಯಾಯಪೀಠವು ತಿರಸ್ಕರಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.