16/09/2026

Law Guide Kannada

Online Guide

ಜಾಮೀನು ಪಡೆದು ವಿಜಯೋತ್ಸವ ಮೆರವಣಿಗೆ: ಕೊಲೆ ಆರೋಪಿ ಹಾಜರುಪಡಿಸಲು ಸುಪ್ರೀಂ ಸೂಚನೆ

ನವದೆಹಲಿ: ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ‘ವಿಜಯೋತ್ಸವ ಮೆರವಣಿಗೆ’ ನಡೆಸಿದ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪ ಹಿನ್ನೆಲೆಯಲ್ಲಿ ಕೊಲೆ ಆರೋಪಿ ವಿಶಾಲ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಹರಿಯಾಣ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರ ಪೀಠವು ಈ ಆದೇಶ ನೀಡಿದ್ದು, ವಿಶಾಲ್ ವಿರುದ್ಧ ಆಗಸ್ಟ್ ನಲ್ಲಿ ಜಾಮೀನು ರಹಿತ ಬಂಧನ ವಾರಂಟ್ (NBW) ಹೊರಡಿಸಿದ್ದರೂ ಅದನ್ನು ಜಾರಿಗೊಳಿಸಿಲ್ಲ. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂಬುದನ್ನು ಪೀಠ ತನ್ನ ಆದೇಶದಲ್ಲಿ ದಾಖಲಿಸಿತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿಂದ ಜಾಮೀನು ಪಡೆದ ಬಳಿಕ ವಿಶಾಲ್ ‘ವಿಜಯೋತ್ಸವ ಮೆರವಣಿಗೆ’ ನಡೆಸಿದ್ದಾನೆ. ಅಲ್ಲದೆ, ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಸೆ. 8ರಂದು ಪ್ರಕರಣದ ವಿಚಾರಣೆ ನಡೆದಾಗ ವಿಶಾಲ್ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಪ್ರತಿನಿಧಿಸಲ್ಪಟ್ಟಿದ್ದನು. ಈ ವೇಳೆ ಜಾಮೀನು ದೊರೆತ ಬಳಿಕ ವಿಜಯೋತ್ಸವ ಮೆರವಣಿಗೆ ನಡೆಸಿದ್ದಕ್ಕೆ ಆಕ್ಷೇಪಿಸಿದ ನ್ಯಾಯಪೀಠ, ‘ಮೊದಲು ಶರಣಾಗಿ, ನಂತರ ಜಾಮೀನು ಕೋರಿ. ನೀವು ಶರಣಾಗಿ ಜಾಮೀನು ಕೋರಿದರೆ ನಿಮ್ಮ ವಾದವನ್ನು ಆಲಿಸುತ್ತೇವೆ. ಜಾಮೀನು ಸಿಕ್ಕಿದೆ ಎಂದು ವಿಜಯೋತ್ಸವ ಮೆರವಣಿಗೆ ನಡೆಸುವುದು ಸರಿಯಲ್ಲ’ ಎಂದು ಗರಂ ಆಗಿ ಪ್ರತಿಕ್ರಿಯಿಸಿತು.

ಆಗಸ್ಟ್ನಲ್ಲಿ ಹೊರಡಿಸಲಾಗಿದ್ದ NBW ಇನ್ನೂ ಜಾರಿಯಾಗಿಲ್ಲ ಮತ್ತು ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂಬುದನ್ನೂ ಪೀಠ ಗಮನಿಸಿತು. ಸದ್ಯಕ್ಕೆ ನ್ಯಾಯಾಲಯ ಪರಿಶೀಲಿಸದ ಕಾರಣಗಳಿಂದ ವಾರಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ಅದು ಹೇಳಿತು. ಆದರೂ, ಹರಿಯಾಣದ ಚಾರ್ಖ ದಾದ್ರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗುವುದನ್ನು ಖಚಿತಪಡಿಸಬೇಕು. ಪ್ರತಿವಾದಿ ಸಂಖ್ಯೆ 2ನ್ನು ಮುಂದಿನ ವಿಚಾರಣೆಯ ದಿನವಾದ ಸೆ. 21, 2026ರಂದು ಈ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು’ ಎಂದು ಪೀಠ ನಿರ್ದೇಶನ ನೀಡಿದೆ.

ಟಿನ್ ಶೆಡ್ ನಿರ್ಮಾಣಕ್ಕೆ ಜಗಳ; ಹಲ್ಲೆಯಿಂದ ಓರ್ವ ಮೃತ: ಮೂರು ವರ್ಷ ಬಂಧನದಲ್ಲಿದ್ದ ಆರೋಪಿ
ಘಟನೆಗೆ ಬರುವುದಾದರೆ ಇದು 2022ರ ಅಕ್ಟೋಬರ್ 27ರಂದು ನಡೆದ ಘಟನೆಯಾಗಿದೆ. ವಿವಾದಿತ ಭೂಮಿಯಲ್ಲಿ ವಿಶಾಲ್ ಟಿನ್ ಶೆಡ್ ಗಳನ್ನು ನಿರ್ಮಿಸಲು ಆರಂಭಿಸಿದ ಬಳಿಕ, ದೂರುದಾರರಾದ ರಾಜ್ಬಾಲಾ ಅವರ ಕುಟುಂಬ ಸದಸ್ಯರು ಮತ್ತು ವಿಶಾಲ್ ನಡುವೆ ಜಗಳ ನಡೆದಿತ್ತು. ಸಂಘರ್ಷ ತೀವ್ರಗೊಂಡ ಸಂದರ್ಭದಲ್ಲಿ ವಿಶಾಲ್ ಲಾಠಿ ಮತ್ತು ಕೊಡಲಿಯಿಂದ ಹಲವರ ಮೇಲೆ ಹಲ್ಲೆ ನಡೆಸಿದನೆಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ದೂರುದಾರರ ಕಡೆಯ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರು.

ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿರುವುದು ಮತ್ತು ವಿಶಾಲ್ ಮೂರು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿರುವುದನ್ನು ಗಮನಿಸಿದ ಹೈಕೋರ್ಟ್, ನಾಲ್ಕು ಬಾರಿ ಜಾಮೀನು ನಿರಾಕರಿಸಿದ ಬಳಿಕ ಐದನೇ ಅರ್ಜಿಯಲ್ಲಿ ಆತನಿಗೆ ಜಾಮೀನು ನೀಡಿತ್ತು. ಆದರೆ ಜಾಮೀನು ಪಡೆದ ನಂತರ ಆತ ನಡೆಸಿದ ಎನ್ನಲಾದ ‘ವಿಜಯೋತ್ಸವ ಮೆರವಣಿಗೆ’ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇದೀಗ ಆತನನ್ನು ಬಂಧಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.