ರಸ್ತೆ ಅಪಘಾತ: ಮೃತ ಮಹಿಳೆಯ ಕುಟುಂಬಕ್ಕೆ 59.69 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಕುಟುಂಬಕ್ಕೆ ಬರೋಬ್ಬರಿ 59.69 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪರಿಹಾರ ಹೆಚ್ಚಳ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ಮತ್ತು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣದ ಆದೇಶವನ್ನ ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜೂ ಅವರಿದ್ದ ವಿಭಾಗೀಯ ಪೀಠ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಗೃಹಿಣಿಯರ ಪ್ರಕರಣದಲ್ಲಿ ನೀಡಲಾದ ಅತಿ ದೊಡ್ಡ ಪರಿಹಾರ ಮೊತ್ತವಾಗಿದೆ.
ಮೃತ ಮಹಿಳೆಯು ಒಬ್ಬ ಗೃಹಿಣಿಯಾಗಿದ್ದು, ಆಕೆ ತನ್ನ ಇಡೀ ಜೀವಮಾನದಲ್ಲಿ ಕುಟುಂಬಕ್ಕಾಗಿ ಮೀಸಲಿಡುವ ಶ್ರಮ ಮತ್ತು ನೀಡುವ ಕೊಡುಗೆಯನ್ನ ಕೇವಲ ಕನಿಷ್ಠ ಆದಾಯದ ಮಾನದಂಡದಲ್ಲಿ ಅಳೆಯುವುದು ಅಸಾಧ್ಯ. ಅವರ ನಿಸ್ವಾರ್ಥ ಸೇವೆಗೆ ಯಾವುದೇ ಬೆಲೆ ಕಟ್ಟಲಾಗದು ಎಂದು ನ್ಯಾಯಪೀಠವು ನುಡಿದಿದೆ.
ವಿಚಾರಣೆ ವೇಳೆ ವಿಮಾ ಕಂಪನಿಯ ಪರ ವಕೀಲರು, ಬೈಕ್ ಗೆ ಹಸುವೊಂದು ಅಡ್ಡಬಂದು ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಈ ಪ್ರಕರಣದಲ್ಲಿ ಸವಾರನಿಗೆ ಕ್ರಿಮಿನಲ್ ನ್ಯಾಯಾಲಯದಿಂದ ಈಗಾಗಲೇ ಖುಲಾಸೆ ಸಿಕ್ಕಿದೆ. ಹೀಗಾಗಿ ಪರಿಹಾರ ನೀಡುವ ಹೊಣೆಗಾರಿಕೆ ನಮ್ಮ ಮೇಲಿಲ್ಲ ಎಂದು ವಾದಿಸಿದ್ದರು.
ಆದರೆ ಈ ವಾದವನ್ನ ತಳ್ಳಿಹಾಕಿದ ನ್ಯಾಯಪೀಠವು, ಮೋಟಾರು ವಾಹನ ಕಾಯ್ದೆಯಡಿ ಪರಿಹಾರವನ್ನು ಸಾಕ್ಷ್ಯಾಧಾರಗಳ ಪ್ರಬಲ ಸಾಧ್ಯತೆಯ ಆಧಾರದ ಮೇಲೆ ನೀಡಲಾಗುತ್ತದೆಯೇ ಹೊರತು, ಕ್ರಿಮಿನಲ್ ಪ್ರಕರಣದ ಖುಲಾಸೆಯ ಆಧಾರದ ಮೇಲಲ್ಲ ಎಂದು ತಿಳಿಸಿತು.
ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್, ಗೃಹಿಣಿಯರ ಮನೆಕೆಲಸ ಹಾಗೂ ಕುಟುಂಬದ ಆರೈಕೆಯ ಮೌಲ್ಯವನ್ನು ಮಾಸಿಕ 30,000 ರೂಪಾಯಿ ಎಂದು ಪರಿಗಣಿಸಬೇಕು ಎಂದು ಸೂಚಿಸಿತ್ತು. ‘ಕಿಶು ಪಾಲ್ ವರ್ಸಸ್ ಸುಜೀತ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಈ ತೀರ್ಪನ್ನ ಉಲ್ಲೇಖಿಸಿರುವ ಹೈಕೋರ್ಟ್ ನ್ಯಾಯಪೀಠವು, ಮೃತ ಗೃಹಿಣಿಯ ಮಾಸಿಕ ಆದಾಯವನ್ನ 30 ಸಾವಿರ ರೂಪಾಯಿ ಎಂದು ಲೆಕ್ಕಾಚಾರ ಮಾಡಿದೆ. ಇದಕ್ಕೆ ಭವಿಷ್ಯದ ಗಳಿಕೆಯ ಶೇ.40ರಷ್ಟು ಮೊತ್ತವನ್ನು ಸೇರ್ಪಡೆ ಮಾಡಿ, ಒಟ್ಟು 59.69 ಲಕ್ಷ ರೂಪಾಯಿ ಪರಿಹಾರವನ್ನ ನಿಗದಿಪಡಿಸಿದೆ. ಈ ಮೊತ್ತವನ್ನ ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ಮೃತ ಮಹಿಳೆಯ ಪುತ್ರನಿಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.
ಪ್ರಕರಣ ಹಿನ್ನೆಲೆ
2011ರ ಆಗಸ್ಟ್ 23ರಲ್ಲಿ ಈ ಅಪಘಾತ ಸಂಭವಿಸಿತ್ತು. ಪುಷ್ಪಾ ಅಲಿಯಾಸ್ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಂಜುಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬಿದಡಿ ಸಮೀಪದ ಕೆಂಪೂಸಹಳ್ಳಿ ಗೇಟ್ ಬಳಿ ಹೋಗುವಾಗ ಬೈಕ್ ಭೀಕರ ಅಪಘಾತಕ್ಕೀಡಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಪುಷ್ಪಾ ಅವರನ್ನ ಆಸ್ಪತ್ರೆಗೆ ದಾಖಲಿಸಿ ಸತತ 45 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆ ವೆಚ್ಚಕ್ಕಾಗಿ ಬರೋಬ್ಬರಿ 7.36 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಪುಷ್ಪಾ ಅವರು ಹೂವು ಮಾರಾಟ ಮಾಡಿಕೊಂಡು ತಿಂಗಳಿಗೆ 8 ಸಾವಿರ ರೂಪಾಯಿ ಗಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕೋರಿ ಅವರ ಸಂಬಂಧಿಕರು ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು. ಆರಂಭದಲ್ಲಿ ನ್ಯಾಯಾಧಿಕರಣವು ಕೇವಲ 11.18 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು, ಆದರೆ ಇದೀಗ ಹೈಕೋರ್ಟ್ ಅದನ್ನು 59.69 ಲಕ್ಷ ರೂಪಾಯಿಗೆ ಹೆಚ್ಚಿಸಿ ತೀರ್ಪು ನೀಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
