14/11/2026

Law Guide Kannada

Online Guide

ಅಜ್ಜನ ಆಸ್ತಿ ವಿಭಜನೆ ಬಳಿಕ ತಂದೆಗೆ ಸಿಕ್ಕ ಭಾಗದಲ್ಲಿ ಮೊಮ್ಮಗನಿಗೆ ಹಕ್ಕಿದೆಯೇ..? ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ

ನವದೆಹಲಿ : ಅಜ್ಜನ ಆಸ್ತಿಯೂ ಕಾನೂನುಬದ್ಧ ವಿಭಜನೆಯಾದ ಬಳಿಕ ತಂದೆಗೆ ಸಿಕ್ಕ ಭಾಗ ಸ್ವಾರ್ಜಿತವಾದುದು. ಹೀಗಾಗಿ ಇಂತಹ ಆಸ್ತಿಯಲ್ಲಿ ಅಜ್ಜನ ಮೊಮ್ಮಗನಿಗೆ ಜನನಸಿದ್ದ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಅಪ್ರಾಪ್ತ ವಯಸ್ಕನೊಬ್ಬ ತನ್ನ ತಾಯಿಯ ಮೂಲಕ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸುನಿತಾ ಅಗರ್ವಾಲ್ ಅವರನ್ನೊಳಗೊಂಡ ಪೀಠವು, ಹಿಂದೂ ಉತ್ತರಾಧಿಕಾರ ಕಾಯ್ದೆ 1956 ರ ಅಡಿಯಲ್ಲಿ ಅಜ್ಜನ ಆಸ್ತಿಯು ಕಾನೂನುಬದ್ಧವಾಗಿ ವಿಭಜನೆಯಾದ ನಂತರ, ತಂದೆಯ ಪಾಲಿಗೆ ಬಂದ ಆಸ್ತಿಯನ್ನು ಆತ ತನ್ನ ವೈಯಕ್ತಿಕ (ಸ್ವಾರ್ಜಿತ) ಸಾಮರ್ಥ್ಯದಲ್ಲಿ ಹೊಂದಿರುತ್ತಾನೆ. ಅಂತಹ ಆಸ್ತಿಯಲ್ಲಿ ಮೊಮ್ಮಗನು ತನ್ನ ತಂದೆಯ ಜೀವಿತಾವಧಿಯಲ್ಲಿ ಹುಟ್ಟಿನಿಂದ ಯಾವುದೇ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಒಮ್ಮೆ ಆಸ್ತಿ ವಿಭಜನೆಯಾದ ಮೇಲೆ ಅದು ತನ್ನ ಸಹ-ಪಾರ್ಸೆನರಿ (ಅವಿಭಜಿತ) ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಅದನ್ನು ಮತ್ತೆ ಜಂಟಿ ಕುಟುಂಬದ ಆಸ್ತಿ ಎಂದು ಕರೆಯಲು ಹಾಗೂ ಹಕ್ಕು ಕೋರಲು ಬರುವುದಿಲ್ಲ. ಕ್ರೋಢೀಕರಿಸಿದ ಹಿಂದೂ ಕಾನೂನಿನ ಸೆಕ್ಷನ್ 8 ರ ಅಡಿಯಲ್ಲಿ ವರ್ಗ I ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ‘ಮಗ’ ಸೇರುತ್ತಾನೆಯೇ ಹೊರತು, ತಂದೆ ಜೀವಂತವಾಗಿದ್ದಾಗ ‘ಮಗನ ಮಗ’ (ಮೊಮ್ಮಗ) ಸೇರುವುದಿಲ್ಲ ಎಂಬುದನ್ನು ನ್ಯಾಯಾಲಯ ಪ್ರಮುಖವಾಗಿ ಉಲ್ಲೇಖಿಸಿದೆ. ಈ ಕಾಯ್ದೆಯು ಕೇವಲ ಪೂರ್ವ ಮೃತ ಮಗನ ಮಗನಿಗೆ ಮಾತ್ರ ಹಕ್ಕನ್ನು ನೀಡುತ್ತದೆ. ಸೆಕ್ಷನ್ 8 ರ ಸ್ಪಷ್ಟ ನಿಯಮಗಳನ್ನು ನಿರ್ಲಕ್ಷಿಸಿ, ಮಗನು ಆಸ್ತಿಯನ್ನು ಪಡೆದಾಗ ಅದನ್ನು ತನ್ನ ಸ್ವಂತ ಅವಿಭಜಿತ ಕುಟುಂಬದ ‘ಕರ್ತಾ’ ಆಗಿ ಸ್ವೀಕರಿಸುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣದ ವಿವರ
ಮೇಲ್ಮನವಿದಾರರು ಚೆನ್ನೈನಲ್ಲಿರುವ 1,811 ಚದರ ಅಡಿ ವಿಸ್ತೀರ್ಣದ ಆಸ್ತಿಯಲ್ಲಿ ಅರ್ಧ ಪಾಲನ್ನು ಕೋರಿ ಮೊಕದ್ದಮೆ ಹೂಡಿದ್ದರು. ಇದು ಅಜ್ಜ ಎನ್. ರಾಮಕೃಷ್ಣನ್ ಅವರಿಗೆ ಸೇರಿದ ಜಂಟಿ ಕುಟುಂಬದ ಆಸ್ತಿಯಾಗಿದೆ. ತಂದೆಗೆ ಬಂದ ಆಸ್ತಿಯಲ್ಲಿ ತಮಗೂ ಹಕ್ಕಿದೆ ಎಂಬುದು ಅವರ ವಾದವಾಗಿತ್ತು.

ತಂದೆಯು 1997 ರಲ್ಲಿ ಸಹೋದರಿಯೊಂದಿಗಿನ ವಿಭಜನೆಯ ರಾಜಿ ತೀರ್ಪಿನಂತೆ ಬಂದ ಆಸ್ತಿಯನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು. ಈ ಮಾರಾಟವನ್ನು ಪ್ರಶ್ನಿಸಿ ಮೊಮ್ಮಗ ನ್ಯಾಯಾಲಯದ ಮೆಟ್ಟಿಲೇರಿದ್ದನು.

ಈ ಮಧ್ಯೆ ವಿಚಾರಣಾ ನ್ಯಾಯಾಲಯವು ಆರಂಭದಲ್ಲಿ ಮೊಮ್ಮಗನ ಪರವಾಗಿ ಪ್ರಾಥಮಿಕ ತೀರ್ಪು ನೀಡಿದ್ದರೂ, ಮೊದಲ ಮೇಲ್ಮನವಿ ನ್ಯಾಯಾಲಯ ಮತ್ತು ಮದ್ರಾಸ್ ಹೈಕೋರ್ಟ್ ಅದನ್ನು ರದ್ದುಗೊಳಿಸಿ ತಂದೆಯೇ ಆ ಆಸ್ತಿಯ ಸಂಪೂರ್ಣ ಮಾಲೀಕ ಎಂದು ತೀರ್ಪು ನೀಡಿದ್ದವು.

ಇದನ್ನು ಪ್ರಶ್ನಿಸಿ ಅರ್ಜಿದಾರ ಮೊಮ್ಮಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದನು. ಇದೀಗ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದು, ಮೇಲ್ಮನವಿದಾರರು ಪುರುಷರಾಗಿರುವುದರಿಂದ ಹೆಣ್ಣುಮಕ್ಕಳಿಗೆ ಮೀಸಲಾದ ತಿದ್ದುಪಡಿ ಕಾಯ್ದೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಮತ್ತು ಆಸ್ತಿಯು ಈಗಾಗಲೇ ವಿಭಜನೆಯ ಮೂಲಕ ವೈಯಕ್ತಿಕ ಆಸ್ತಿಯಾಗಿ ಪರಿವರ್ತನೆಯಾಗಿದೆ ಎಂದು ಸ್ಪಷ್ಟಪಡಿಸಿ ಮೇಲ್ಮನವಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.