14/11/2026

Law Guide Kannada

Online Guide

ಪೂಜೆ, ಮಾಟ ಮಂತ್ರದ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: ಹೈಕೋರ್ಟ್ ಕಳವಳ: ಆರೋಪಿಗಳ ಅರ್ಜಿ ವಜಾ

ಬೆಂಗಳೂರು: ತಂತ್ರಜ್ಞಾನ ಮುಂದುವರೆದಿರುವ ಈ ಆಧುನಿಕ ಯುಗದಲ್ಲೂ ವಿಶೇಷ ಪೂಜೆ ಮತ್ತು ಮಾಟಮಂತ್ರ ಮಾಡಿಸುವುದರಿಂದ ಕುಟುಂಬದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿ ವಂಚನೆಗೊಳಗಾಗುವ ಮೂಢ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಆರೋಪಿಗಳ ಅರ್ಜಿಯನ್ನ ವಜಾಗೊಳಿಸಿದೆ.

ಕುಟುಂಬದ ಕಷ್ಟಗಳನ್ನು ಪರಿಹರಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಹಾಗೂ ಐದು ಸ್ಥಿರ ಆಸ್ತಿಗಳನ್ನು ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯ ಪತ್ನಿ ಹಾಗೂ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರ ವಿರುದ್ಧದ ಮೊಕದ್ದಮೆಯನ್ನು ರದ್ದುಪಡಿಸಲು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ನಿರಾಕರಿಸಿದೆ.

ಬೆಂಗಳೂರಿನಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡಲು ಕೋಲಾರ ಹಾಗೂ ತಮಿಳುನಾಡಿನ ಧರ್ಮಪುರಿಯ ಏಜೆಂಟರನ್ನು ಮಹಿಳೆ ವೆಬ್ಸೈಟ್ ಮೂಲಕ ಸಂಪರ್ಕಿಸಿದ್ದರು ಎಂಬ ಅರ್ಜಿದಾರರ ವಾದ ನಂಬಲರ್ಹವಾಗಿಲ್ಲ. ಎಫ್ಐಆರ್ನಲ್ಲಿ ಆರಂಭದಲ್ಲಿ ಹೆಸರಿಲ್ಲದ ಮಾತ್ರಕ್ಕೆ ಅವರು ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗದು. ಪ್ರಮುಖ ಆರೋಪಿಯ ಪತ್ನಿ ಹಾಗೂ ಏಜೆಂಟರ ನಡುವೆ ಮೊದಲೇ ನಂಟು ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖೆ ವೇಳೆ ಲಭ್ಯವಾದ ಸಾಕ್ಷ್ಯಗಳ ಪ್ರಕಾರ ಇವರೆಲ್ಲರೂ ಸಂಚು ನಡೆಸಿ ಆಸ್ತಿ ಮಾರಾಟದ ಹಣದ ಲಾಭ ಪಡೆದಿರುವುದು ದೃಢಪಟ್ಟಿದೆ ಎಂದು ಪೀಠ ತಿಳಿಸಿದೆ.

ದೇವರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಕೋಟ್ಯಾಂತರ ವಂಚನೆಗೈದಿದ್ದ ಆರೋಪಿಗಳು
ಬೆಂಗಳೂರು ನಿವಾಸಿ ಗೀತಾ ಎಚ್.ರವರ ಪತಿ 2009ರಲ್ಲಿ ನಿಧನರಾಗಿದ್ದರು. ನಂತರ ಕುಟುಂಬದಲ್ಲಿ ಎದುರಾದ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಮೊದಲ ಆರೋಪಿ ನಾಗರಾಜ್ ಎಂಬಾತ ಮಹಿಳೆಗೆ ಪರಿಚಯವಾಗಿದ್ದನು. ಪೂಜೆ ಮಾಡುವ ವೇಳೆ ತನ್ನ ಮೈಮೇಲೆ ದೇವರು ಬರುತ್ತಾನೆ ಎಂದು ಅಮಾಯಕ ಮಹಿಳೆಯನ್ನು ನಂಬಿಸಿದ ಆತ, ಸಂಕಷ್ಟ ನಿವಾರಣೆಯ ನೆಪದಲ್ಲಿ ಮಹಿಳೆಯ ಒಟ್ಟು ಐದು ಸ್ಥಿರ ಆಸ್ತಿಗಳನ್ನು ಬಲವಂತವಾಗಿ ಮಾರಾಟ ಮಾಡಿಸಿದ್ದನು. ಇದರೊಂದಿಗೆ 450 ಗ್ರಾಂ ಚಿನ್ನಾಭರಣ ಹಾಗೂ ಭಾರಿ ಪ್ರಮಾಣದ ನಗದನ್ನು ದೋಚಿ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಲಪಟಾಯಿಸಿದ್ದನು.

ಈ ಕುರಿತು ಸಂತ್ರತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಐಪಿಸಿ (IPC) ಸೆಕ್ಷನ್ 420, 406, 120ಬಿ ಹಾಗೂ ‘ಕರ್ನಾಟಕ ಮಾಟಮಂತ್ರ ಮತ್ತು ಅನಿಷ್ಟ ಪದ್ಧತಿಗಳ ತಡೆ ಕಾಯ್ದೆ – 2017’ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಮುಖ ಆರೋಪಿಯ ಪತ್ನಿ ಲಕ್ಷ್ಮಮ್ಮ ಹಾಗೂ ರಿಯಲ್ ಎಸ್ಟೇಟ್ ಏಜೆಂಟರಾದ ಪೆರುಮಾಳ್ ಮತ್ತು ಹೊಸೂರು ಮಂಜು ಎಂಬುವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನ ವಜಾಗೊಳಿಸಿದ ಹೈಕೋರ್ಟ್, ಪ್ರಕರಣವು ಪ್ರಸ್ತುತ ವಿಚಾರಣಾ ಹಂತದಲ್ಲಿದ್ದು, ಈ ಹಂತದಲ್ಲಿ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಕಾನೂನು ಪ್ರಕಾರ ಪೂರ್ಣ ಪ್ರಮಾಣದ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಹೈಕೋರ್ಟ್ ಎಚ್ಚರಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.