E.D ತನ್ನ ಗಮನಕ್ಕೆ ಬರುವ ಎಲ್ಲವನ್ನೂ ತನಿಖೆ ನಡೆಸುವ ‘ಸೂಪರ್ ಕಾಪ್’ ಅಲ್ಲ- ಹೈಕೋರ್ಟ್ ಮಾರ್ಮಿಕ ನುಡಿ
ಬೆಂಗಳೂರು : ಜಾರಿ ನಿರ್ದೇಶನಾಲಯ ತನ್ನ ಗಮನಕ್ಕೆ ಬರುವ ಎಲ್ಲವನ್ನೂ ತನಿಖೆ ನಡೆಸುವ ಸೂಪರ್ ಕಾಪ್ ಅಲ್ಲ. ಜಾರಿ ನಿರ್ದೇಶನಾಲಯಕ್ಕೆ ಈ ರೀತಿಯ ಅಧಿಕಾರವಿಲ್ಲ ಎಂದು ಹೈಕೋರ್ಟ್ ಮಾರ್ಮಿಕವಾಗಿ ನುಡಿದಿದೆ.
ಕೊಮುಲ್ ಅಧ್ಯಕ್ಷರೂ ಆದ ಮಾಲೂರು ಶಾಸಕ ಕೆ.ವೈ. ನಂಜೇಗೌಡ, ಅಂದಿನ ಕೊಮುಲ್ ನಿರ್ದೇಶಕ ವೈ.ಬಿ. ಅಶ್ವಥನಾರಾಯಣ, ಕೆ.ಎನ್. ಗೋಪಾಲಮೂರ್ತಿ, ನಾಗೇಶ್ ಎನ್. ಹಾಗೂ ರಾಜು ಕೃಷ್ಣ ಸಿ. ಸಲ್ಲಿಸಿದ್ದ ಐದು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೋಲಾರ ಜಿಲ್ಲೆಯ ಮಾಲೂರು ಭೂ ಮಂಜೂರಾತಿ ಹಗರಣ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೊಮುಲ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಆರಂಭಿಸಿದ್ದ ಎಲ್ಲ ಪ್ರಕ್ರಿಯೆಗಳನ್ನು ರದ್ದುಪಡಿಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಕ್ರಮ ಕೈಗೊಳ್ಳಲು ‘ನಿಗದಿತ ಅಪರಾಧದ (ಷೆಡ್ಯೂಲ್ಡ್ ಅಪರಾಧ) ಅಸ್ತಿತ್ವ’ ಅತ್ಯಗತ್ಯವಾಗಿದ್ದು, ಇ.ಡಿಗೆ ಎಲ್ಲ ಅಪರಾಧಗಳ ತನಿಖೆ ನಡೆಸುವ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿತು.
ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಖಾಸಗಿ ದೂರು ದಾಖಲಿಸಿ, ಅದರ ಆಧಾರದಲ್ಲಿ ಆರೋಪಿಗಳ ವಿರುದ್ಧ ಪಿಎಂಎಲ್ಎ ಅಡಿ ತನಿಖೆ ಆರಂಭಿಸಲು ಕಾಯ್ದೆಯು ಇ.ಡಿ ಗೆ ಸ್ಪಷ್ಟ ಅಧಿಕಾರ ನೀಡಿಲ್ಲ. ಇ.ಡಿ ರವಾನಿಸಿದ ಮಾಹಿತಿಯನ್ನು ಸಂಬಂಧಿತ ಪ್ರಾಧಿಕಾರ ಪರಿಶೀಲಿಸಿ, ವಿಚಾರಣೆ ಅಥವಾ ಪ್ರಾಸಿಕ್ಯೂಷನ್ ಆರಂಭಿಸಬೇಕೇ ಎಂಬುದನ್ನು ನಿರ್ಧರಿಸಬೇಕು. ಸಂಬಂಧಿತ ಪ್ರಾಧಿಕಾರ ಕ್ರಮ ಕೈಗೊಳ್ಳದಿದ್ದಾಗ ಇ.ಡಿ ಸ್ವತಃ ಖಾಸಗಿ ದೂರು ದಾಖಲಿಸಿ ತನಿಖೆ ಆರಂಭಿಸುವುದು, ಅದಕ್ಕೆ “ಸೂಪರ್ ಕಾಪ್” ಅಧಿಕಾರ ನೀಡಿದಂತಾಗುತ್ತದೆ. ಇ.ಡಿ ಖಾಸಗಿ ದೂರು ದಾಖಲಿಸುವುದನ್ನು ಪಿಎಂಎಲ್ಎ ಕಾಯ್ದೆ ಪರಿಗಣಿಸಿಲ್ಲ. ಇ.ಡಿಗೆ ಇಂತಹ ಅಧಿಕಾರ ನೀಡಿದರೆ, ಯಾವುದೇ ವ್ಯಕ್ತಿಯ ವಿರುದ್ಧ ಖಾಸಗಿ ದೂರು ದಾಖಲಿಸಿ, ನಂತರ ಪಿಎಂಎಲ್ಎ ಅಡಿ ತನಿಖೆ ಆರಂಭಿಸಲು ಅವಕಾಶವಾಗುತ್ತದೆ. ಆದರೆ, ಕಾಯ್ದೆಯು ಅಂತಹ ಕ್ರಮವನ್ನು ಕಲ್ಪಿಸಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಏನಿದು ಪ್ರಕರಣ
ಮಾಲೂರು ತಾಲೂಕಿನಲ್ಲಿ ನಡೆದಿರುವ ಭೂ ಮಂಜೂರಾತಿ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಭೂ ಮಂಜೂರಾತಿ ಸಮಿತಿ ಅಧ್ಯಕ್ಷ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರು ಸುಮಾರು 38 ಮಂದಿಗೆ 80 ಎಕರೆ ಭೂಮಿಯನ್ನು ಶಿಫಾರಸು ಮಾಡುವ ಮೂಲಕ ಅಕ್ರಮವಾಗಿ ಮಂಜೂರಾತಿ ಮಾಡಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಸಂಬಂಧ ದೂರು ನೀಡಲಾಗಿತ್ತು. ಈ ದೂರಿನ ಆಧಾರದಲ್ಲಿ 2022ರಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ಗಳಾದ 468, 464, 465, 471, 420 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನು ಆಧರಿಸಿ ದೂರು ದಾಖಲಿಸಿದ ಇ.ಡಿ ಪಿಎಂಎಲ್ಎ ಅಡಿ ತನಿಖೆ ಆರಂಭಿಸಿತ್ತು. ತನಿಖೆ ವೇಳೆ ಕೊಮುಲ್ ಉದ್ಯೋಗಿಗಳ ನೇಮಕಾತಿಗೆ ಸಂಬಂಧಿಸಿದ ಹಗರಣದ ಬಗ್ಗೆ ಕೆಲವು ದಾಖಲೆಗಳು ಮತ್ತು ಮಾಹಿತಿಗಳು ದೊರೆತಿವೆ ಎಂದು ಇ.ಡಿ ಆರೋಪಿಸಿತ್ತು. ಈ ಮಾಹಿತಿಯನ್ನು ಪಿಎಂಎಲ್ಎ ಸೆಕ್ಷನ್ 66(2) ಅಡಿ ಸಂಬಂಧಿತ ತನಿಖಾ ಸಂಸ್ಥೆಗಳಿಗೆ ಇ.ಡಿ ರವಾನಿಸಿತ್ತು. ಆದರೆ, ಸಂಬಂಧಿತ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆ ಬಳಿಕ ಇ.ಡಿ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ಗಳಾದ 7,11, ಮತ್ತು 13 ಹಾಗೂ ಐಪಿಸಿಯ ಸೆಕ್ಷನ್ಗಳಾದ 120ಬಿ, 420, 464, 465, 468 ಮತ್ತು 471 ಅಡಿ ತನಿಖೆ ನಡೆಸಲು ದೂರಿನಲ್ಲಿ ಕೋರಲಾಗಿತ್ತು. ಇದೇ ವೇಳೆ, ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದ ಕಾರಣ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದ್ದರಿಂದ, ಈ ಆದೇಶ ಅಂತಿಮಗೊಂಡಿತ್ತು. ಇದರ ಬೆನ್ನಲ್ಲೇ, ಇ.ಡಿ ಮುಂದುವರಿಸಿದ್ದ ಪಿಎಂಎಲ್ಎ ಪ್ರಕ್ರಿಯೆಗಳು ಮತ್ತು ಖಾಸಗಿ ದೂರನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಭೂ ಹಗರಣದ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಕೆಯಾಗಿ, ಅದನ್ನು ಪ್ರಶ್ನಿಸಿದ್ದ ಪ್ರತಿಭಟನಾ ಅರ್ಜಿಯೂ ವಜಾಗೊಂಡಿರುವುದನ್ನು ಗಮನಿಸಿದ ಹೈಕೋರ್ಟ್ ನಿಗದಿತ ಅಪರಾಧದ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆಯ ಆರೋಪವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಕ್ರಮ ಹಣದ ಮೂಲವನ್ನು ಗುರುತಿಸಲು ಮತ್ತು ಪಿಎಂಎಲ್ಎ ಅಡಿ ಕ್ರಮ ಕೈಗೊಳ್ಳಲು ‘ನಿಗದಿತ ಅಪರಾಧದ ಅಸ್ತಿತ್ವ’ ಅತ್ಯಗತ್ಯವಾದ ಪೂರ್ವಾಪೇಕ್ಷಿತವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಇ.ಡಿ ಅಥವಾ ಪಿಎಂಎಲ್ಎ ಅಡಿ ಅಧಿಕಾರಿಗಳಿಗೆ ಖಾಸಗಿ ದೂರು ಸಲ್ಲಿಸಲು ಮತ್ತು ಅದರ ಆಧಾರದಲ್ಲಿ ಆರೋಪಿಗಳ ವಿರುದ್ಧ ಪಿಎಂಎಲ್ಎ ಅಡಿ ತನಿಖೆ ಕೈಗೊಳ್ಳಲು ಕಾಯ್ದೆಯು ಸ್ಪಷ್ಟ ಅಧಿಕಾರ ನೀಡುವುದಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
