18/11/2026

Law Guide Kannada

Online Guide

ಭೂವಿವಾದ: ರಾಜಿ ಒಪ್ಪಂದ ದಾಖಲಿಸುವ ಅಧಿಕಾರ ಖಾಯಂ ಲೋಕ ಅದಾಲತ್ ಗೆ ಇಲ್ಲ – ಹೈಕೋರ್ಟ್

ಪಾಟ್ನಾ: ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಕಾಯಂ ಲೋಕ ಅದಾಲತ್ ಗೆ ರಾಜಿ ಒಪ್ಪಂದವನ್ನು ದಾಖಲಿಸುವ ಅಧಿಕಾರವಿಲ್ಲ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸಾಸಾರಂ, ರೋಹ್ರಾಸ್ ನ ಕಾಯಂ ಲೋಕ ಅದಾಲತ್ ನೀಡಿದ್ದ ಐತೀರ್ಪನ್ನು (ಂತಿಚಿಡಿಜ) ರಾಜಿ ಅರ್ಜಿಯಲ್ಲಿ ಉಲ್ಲೇಖಿಸಿದ ಅಂಶಗಳ ಆಧಾರದ ಮೇಲೆ ತಿದ್ದುಪಡಿ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕಾಯಂ ಲೋಕ ಅದಾಲತ್ ನೀಡಿದ್ದ ಆದೇಶವೊಂದನ್ನು ರದ್ದುಗೊಳಿಸಿದ್ದು, ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಒಪ್ಪಂದವನ್ನು ದಾಖಲಿಸಲು ಕಾಯಂ ಲೋಕ ಅದಾಲತ್ ನ್ಯಾಯವ್ಯಾಪ್ತಿ ಇಲ್ಲ ಎಂದು ಸ್ಪಷ್ಟೀಕರಣ ನೀಡಿತು.

ರಾಜಿ ಒಪ್ಪಂದದ ತಪಶೀಲು-ಸಿ (Schedule-C) ಯಲ್ಲಿ 1¾ ಡೆಸಿಮಲ್ ವಿಸ್ತೀರ್ಣದ ಒಂದು ಜಮೀನಿನ ವಿವರವನ್ನು ಸೇರಿಸುವುದು, ಲಿಪಿಕೀಯ ತಪ್ಪಿನಿಂದ (Typographical Mistake) ಬಿಟ್ಟು ಹೋಗಿತ್ತು. ಸದ್ಭಾವನೆಯಿಂದ ಸಂಭವಿಸಿದ ಈ ತಪ್ಪನ್ನು ಸರಿಪಡಿಸಿ ಐತೀರ್ಪನ್ನು ತಿದ್ದುಪಡಿ ಮಾಡಬೇಕೆಂಬುದು ಅರ್ಜಿದಾರರ ಕೋರಿಕೆಯಾಗಿತ್ತು.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಅನುಪಮಾ ಚಕ್ರವರ್ತಿ ಅವರ ಏಕಸದಸ್ಯ ಪೀಠವು, “ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 22-A ಮತ್ತು 22-B(1) ರ ನಿಬಂಧನೆಗಳನ್ನು ಪರಿಶೀಲಿಸಿದಾಗ, ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕಾಗಿ ಕಾಯಂ ಲೋಕ ಅದಾಲತ್ ಸ್ಥಾಪನೆಯಾಗಿರುವುದು ಸ್ಪಷ್ಟವಾಗುತ್ತದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಒಪ್ಪಂದವನ್ನು ದಾಖಲಿಸುವ ಅಧಿಕಾರ ಅದಕ್ಕೆ ಇರುವುದಿಲ್ಲ. ಆದ್ದರಿಂದ, ಸಾಸಾರಂ, ರೋಹ್ರಾಸ್ನ ಕಾಯಂ ಲೋಕ ಅದಾಲತ್ 07.07.2011ರಂದು ನೀಡಿದ ಆದೇಶ ಆರಂಭದಿಂದಲೇ ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಎಂದು ತೀರ್ಮಾನಿಸಿತು.

ಪ್ರಕರಣದ ವಿವರ
ಪ್ರತಿವಾದಿಗಳ ತಂದೆ ದಾವೆಯಲ್ಲಿ ಉಲ್ಲೇಖಿಸಲಾದ ಜಮೀನಿನಲ್ಲಿ ನಾಲ್ಕನೇ ಒಂದು ಭಾಗದ ಪಾಲನ್ನು ಅಳತೆ ಮತ್ತು ಗಡಿಗಳ ಆಧಾರದ ಮೇಲೆ ವಿಭಜಿಸಿ ನೀಡುವಂತೆ ಕೋರಿ ರೋಹ್ರಾಸ್ನ ಸಾಸಾರಂ ಕಾಯಂ ಲೋಕ ಅದಾಲತ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಭಜನೆಗೆ ಸರ್ವೇ ಕಾರ್ಯದಲ್ಲಿ ಪರಿಣತಿ ಹೊಂದಿರುವ ವಕೀಲರ ಸಹಾಯವನ್ನೂ ಕೋರಿದ್ದರು. ಈ ಪ್ರಕರಣದಲ್ಲಿ ಅರ್ಜಿದಾರರು ಹಾಗೂ ಪ್ರತಿವಾದಿಗಳ ಪೂರ್ವಜರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಪ್ರತಿವಾದಿಗಳ ತಂದೆಯ ವಾದದ ಪ್ರಕಾರ, ಅವರ ಪೂರ್ವಜರಾದ ಜಾವಿತ್ ಶಾ ಅವರಿಗೆ ರಾಮರೂಪ್ ಶಾ, ರಾಮಚರಿತರ್ ಶಾ ಮತ್ತು ರಾಮಸುಂದರ್ ಶಾ ಎಂಬ ಮೂವರು ಪುತ್ರರಿದ್ದರು. ರಾಮಸುಂದರ್ ಶಾ ಅವರಿಗೆ ಸಂತಾನವಿರಲಿಲ್ಲ. ರಾಮರೂಪ್ ಶಾ ಅವರಿಗೆ ನಾಲ್ವರು ಪುತ್ರರಿದ್ದರು. ಅವರನ್ನೇ ಪ್ರಕರಣದಲ್ಲಿ ಒಂದರಿಂದ ನಾಲ್ಕನೇ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಬಿಫಾನ್ ಶಾ ಮತ್ತು ಬಿಗನ್ ಶಾ ಅವರನ್ನು ಸಹ ಪ್ರತಿವಾದಿಗಳನ್ನಾಗಿ ಸೇರಿಸಲಾಗಿತ್ತು. ನಂತರ ವಿವಾದಿತ ಜಮೀನಿನ ಕುರಿತು ಪಕ್ಷಕಾರರ ನಡುವೆ ರಾಜಿ ಒಪ್ಪಂದ ಏರ್ಪಟ್ಟಿದ್ದು, ಅದರ ಆಧಾರದ ಮೇಲೆ ಕಾಯಂ ಲೋಕ ಅದಾಲತ್ ಐತೀರ್ಪು (Award) ನೀಡಿತ್ತು. ಆದರೆ, ಟೈಪಿಸ್ಟ್ನಿಂದ ಸಂಭವಿಸಿದ ಲಿಪಿಕೀಯ ತಪ್ಪಿನ ಕಾರಣ ಜಮೀನಿನ ಒಂದು ಭಾಗಕ್ಕೆ ಸಂಬಂಧಿಸಿದ ಕೆಲವು ವಿವರಗಳು ಐತೀರ್ಪಿನಲ್ಲಿ ಸೇರ್ಪಡೆಯಾಗದೆ ಬಿಟ್ಟು ಹೋಗಿವೆ ಎಂದು ಅರ್ಜಿದಾರರು ತಿಳಿಸಿದ್ದರು. ಹೀಗಾಗಿ ಬಿಟ್ಟು ಹೋದ ಜಮೀನಿನ ವಿವರಗಳನ್ನು ಐತೀರ್ಪಿನಲ್ಲಿ ಸೇರಿಸಿ ತಿದ್ದುಪಡಿ ಮಾಡುವಂತೆ ಕೋರಿ ಹೈಕೋರ್ಟ ಗೆ ಅರ್ಜಿ ಸಲ್ಲಿಸಲಾಗಿತ್ತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.