25/11/2026

Law Guide Kannada

Online Guide

1 ಕೋಟಿ ರೂ. ಚೆಕ್ ಬೌನ್ಸ್ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಚೆಕ್ ಅಮಾನ್ಯ ಪ್ರಕರಣದಲ್ಲಿ ಆರಂಭದಲ್ಲಿ ಲೀಗಲ್ ನೋಟಿಸ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದು ಪ್ರಕರಣದ ಮೂಲಭೂತ ಲೋಪವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ 1 ಕೋಟಿ ರೂ. ಮೊತ್ತದ ಎರಡು ಚೆಕ್ ಬೌನ್ಸ್ ಪ್ರಕರಣಗಳನ್ನು ರದ್ದುಗೊಳಿಸಲು ನಿರಾಕರಿಸಿದೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎ. ಪ್ರಸಾದ್ ಎಂಬುವವರು ತಮ್ಮ ವಿರುದ್ಧ ಬೆಂಗಳೂರಿನ 15ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ .ಪಿ. ಸಂದೇಶ್ ಅವರಿದ್ದ ಏಕಸದಸ್ಯ ಪೀಠವು, ಎರಡು ಚೆಕ್ ಗಳು ಬೌನ್ಸ್ ಆಗಿರುವುದು, ಎರಡು ಲೀಗಲ್ ನೋಟಿಸ್ ಗಳು ಜಾರಿಯಾಗಿ ತಲುಪಿರುವುದು ಮತ್ತು ಆರೋಪಿ ಕಡೆಯಿಂದ ಎರಡೂ ನೋಟಿಸ್ ಗಳಿಗೆ ಪ್ರತ್ಯುತ್ತರ ನೀಡಿರುವುದರಲ್ಲಿ ಯಾವುದೇ ವಿವಾದವಿಲ್ಲ. ಹಾಗಾಗಿ, ಕೇವಲ ಒಂದು ನೋಟಿಸ್ ಅನ್ನು ಆರಂಭದಲ್ಲಿ ಹಾಜರುಪಡಿಸದಿರುವುದು ಪ್ರಕರಣದ ಮೂಲಭೂತ ಲೋಪವಾಗುವುದಿಲ್ಲ. ಎನ್ ಐ ಕಾಯಿದೆಯ ಸೆಕ್ಷನ್ 138(ಬಿ) ಅಡಿಯಲ್ಲಿ ನಿಗದಿತ ಅವಧಿಯಲ್ಲಿ ನೋಟಿಸ್ ನೀಡಲಾಗಿದ್ದು ಅದು ತಲುಪಿದೆ. ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಮತ್ತು ಪ್ರಕರಣದ ಮುಂದಿನ ಹಂತದಲ್ಲಿ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಲು ಹಾಗೂ ಸಾಕ್ಷಿ ವಿಚಾರಣೆ ಅಥವಾ ಹೆಚ್ಚುವರಿ ಸಾಕ್ಷ್ಯ ಸಲ್ಲಿಕೆಗೆ ಕಾನೂನಿನಲ್ಲಿಅವಕಾಶವಿದೆ. ಹೀಗಾಗಿ ಇದೊಂದು ಸರಿಪಡಿಸಬಹುದಾದ ಲೋಪ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಪ್ರಕರಣದ ಹಿನ್ನೆಲೆ
ಬಿ. ಲಿಂಗಪ್ಪಗೆ ಆರೋಪಿ ಪ್ರಸಾದ್ ನಡುವಿನ ಪ್ರಕರಣ ಇದಾಗಿದೆ. ಸ್ಥಿರಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರ ಬಿ. ಲಿಂಗಪ್ಪಗೆ ಆರೋಪಿ ಪ್ರಸಾದ್ 2018ರ ಅಕ್ಟೋಬರ್ ನಲ್ಲಿ ತಲಾ 50 ಲಕ್ಷ ರೂ.ಗಳಂತೆ ಒಟ್ಟು 1 ಕೋಟಿ ರೂ. ಮೊತ್ತದ ಎರಡು ಚೆಕ್ ಗಳನ್ನು ನೀಡಿದ್ದರು. ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಲಿಂಗಪ್ಪ ನೋಟಿಸ್ ಜಾರಿಗೊಳಿಸಿ, ಎನ್ ಐ ಕಾಯಿದೆಯ ಸೆಕ್ಷನ್ 138ರಡಿ ಖಾಸಗಿ ದೂರು ದಾಖಲಿಸಿದ್ದರು. ಆದರೆ, ಎರಡು ಚೆಕ್ ಗಳಿಗೆ ಸಂಬಂಧಿಸಿದಂತೆ ಕೇವಲ ಒಂದು ನೋಟಿಸ್ ಮಾತ್ರ ಸಲ್ಲಿಸಲಾಗಿದೆ ಮತ್ತು ವಿಚಾರಣೆಯ ಹಂತದಲ್ಲಿ ದೂರುದಾರರು ವಿಭಿನ್ನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಕರಣ ರದ್ದು ಮಾಡುವಂತೆ ಕೋರಿ ಅರ್ಜಿದಾರ ಆರೋಪಿ ಪ್ರಸಾದ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಸಂಬಂಧ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ಆರೋಪಿಯ ಪರ ವಕೀಲರು, ‘‘ಎರಡು ಚೆಕ್ ಗಳು ಬೌನ್ಸ್ ಆಗಿ ಎರಡು ನೋಟಿಸ್ ಗಳನ್ನು ಜಾರಿಗೊಳಿಸಿದ್ದರೂ, ಕೇವಲ ಒಂದು ನೋಟಿಸ್ ಮಾತ್ರ ಹಾಜರುಪಡಿಸಲಾಗಿದ್ದು, ಮತ್ತೊಂದು ನೋಟಿಸ್ ಸಲ್ಲಿಸಿಲ್ಲ. ಇದು ಪ್ರಕರಣದಲ್ಲಿ ಮೂಲಭೂತ ದೋಷವಾಗಿದೆ. ಅಲ್ಲದೆ, 2019ರ ಜೂ.19ರ ಮೊದಲ ಡಿಮ್ಯಾಂಡ್ ನೋಟಿಸ್ ನಲ್ಲಿ50 ಲಕ್ಷ ರೂ. ಸಾಲ ಪಡೆದಿರುವುದಾಗಿ ಉಲ್ಲೇಖಿಸಿ, ನಂತರದ ಜೂ.24ರ ನೋಟಿಸ್ ನಲ್ಲಿರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ್ದೆಂದು ವಿಭಿನ್ನ ನಿಲುವು ತಳೆದಿದ್ದಾರೆ, ಉದ್ದೇಶಪೂರ್ವಕವಾಗಿ ಕೆಲವು ಅಂಶಗಳನ್ನು ಮುಚ್ಚಿಡಲಾಗಿದೆ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು,’’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ನಂತರ ಇದಕ್ಕೆ ಆಕ್ಷೇಪಿಸಿ ವಾದಿಸಿದ ದೂರುದಾರರ ಪರ ವಕೀಲರು, ‘‘ಪ್ರಮಾಣಿತ ಹೇಳಿಕೆ ದಾಖಲಿಸುವ ವೇಳೆ ಅಜಾಗರೂಕತೆಯಿಂದ ಒಂದು ನೋಟಿಸ್ ಸಲ್ಲಿಕೆಯಾಗಿಲ್ಲ. ಅದು ಮೂಲಭೂತ ಲೋಪವಲ್ಲ. ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಮುಂದಿನ ಯಾವುದೇ ಹಂತದಲ್ಲಿಆ ದಾಖಲೆ ಹಾಜರುಪಡಿಸಲು ಕಾನೂನಿನಲ್ಲಿಅವಕಾಶವಿದೆ,’’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ನಂತರ ನ್ಯಾಯಪೀಠವು ಪ್ರಕರಣವನ್ನ ರದ್ದುಪಡಿಸಲು ನಿರಾಕರಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.