25/11/2026

Law Guide Kannada

Online Guide

ಪಕ್ಷಾಂತರ ನಿಷೇಧ ಕಾಯ್ದೆ ಸಮಗ್ರ ಸುಧಾರಣೆ: ಕೇಂದ್ರ ಮತ್ತು ಚು.ಆಯೋಗಕ್ಕೆ ‘ಸುಪ್ರೀಂ’ ನೋಟಿಸ್

ನವದೆಹಲಿ: ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸುಧಾರಣೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಭಾರತದ ಚುನಾವಣಾ ಆಯೋಗ (ECI), ಕಾನೂನು ಆಯೋಗ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿದೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿ.ಮೋಹನಾ ಅವರಿದ್ದ ನ್ಯಾಯಪೀಠವು ನೋಟಿಸ್ ಜಾರಿ ಮಾಡಿದ್ದು, ಪಕ್ಷಾಂತರ ನಿಷೇಧ ಕಾನೂನಿನಲ್ಲಿ ಸಮಗ್ರ ಸುಧಾರಣೆಯನ್ನು ತರುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ.

ಎ. ಸೇತು ಎಂಬುವವರು ಸಲ್ಲಿಸಿರುವ ಈ ಅರ್ಜಿಯಲ್ಲಿ, ಅನರ್ಹತೆ ಕ್ರಮದಿಂದ ತಪ್ಪಿಸಿಕೊಳ್ಳಲು ಸಂಸದರು ಮತ್ತು ಶಾಸಕರು ಕಾರ್ಯತಂತ್ರದ ರಾಜೀನಾಮೆ ನೀಡುವುದನ್ನು ತಡೆಯಲು ನಿರ್ದೇಶನ ಕೋರಲಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳ್ಳುವ ಕ್ರಮದಿಂದ ತಪ್ಪಿಸಕೊಳ್ಳುವ ಕಾರ್ಯತಂತ್ರದ ಭಾಗವಾಗಿ ಕೆಲ ಸಂಸದರು ಮತ್ತು ಶಾಸಕರು ರಾಜೀನಾಮೆ ನೀಡುತ್ತಾರೆ. ಇಂಥ ರಾಜೀನಾಮೆಗಳು ರಾಜಕೀಯ ಪಲ್ಲಟ, ಶಾಸನಸಭೆಗಳಲ್ಲಿ ಶಾಸಕರ ಸಂಖ್ಯಾಬಲವನ್ನು ಬದಲಿಸಲು ಸಹಾಯ ಮಾಡುತ್ತದೆ ಎಂದು ಅರ್ಜಿದಾರ ಎ.ಸೇತು ಅವರ ಪರ ವಕೀಲರು ತಿಳಿಸಿದ್ದಾರೆ.

‘ರಾಜೀನಾಮೆಗಳು ಸ್ವಯಂಪ್ರೇರಿತವಾಗಿವೆಯೇ ಎಂಬ ಬಗ್ಗೆ ಮತ್ತು ಅವುಗಳ ನೈಜತೆಯನ್ನು ಸ್ಪೀಕರ್ ಮತ್ತು ಸಭಾಧ್ಯಕ್ಷರು ವಸ್ತುನಿಷ್ಠವಾಗಿ ಪರಿಶೀಲನೆ ನಡೆಸಿ, ಆದೇಶ ನೀಡುವಂತೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.