ಒಂದು ವರ್ಷದ ವಕೀಲಿಕೆ ಅನುಭವ ಕಡ್ಡಾಯ: 2026ರ ಕಾನೂನು ಪದವೀಧರರಿಗೆ ವಿನಾಯಿತಿಗೆ ಸುಪ್ರೀಂಕೋರ್ಟ್ ನಕಾರ
ನವದೆಹಲಿ: ಸಿವಿಲ್ ನ್ಯಾಯಾಧೀಶರ (ಜೂನಿಯರ್ ಡಿವಿಷನ್) ನೇಮಕಾತಿಗೆ ಸಂಬಂಧಿಸಿದಂತೆ ವಕೀಲಿಕೆ ವೃತ್ತಿಯಲ್ಲಿ ಅನುಭವ ಹೊಂದಿರಬೇಕೆಂಬ ಅರ್ಹತೆಯ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.
ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಒಂದು ವರ್ಷದ ವಕೀಲಿಕೆ ಅನುಭವ ಕಡ್ಡಾಯದ ವಿಚಾರದಲ್ಲಿ 2026ರ ಕಾನೂನು ಪದವೀಧರರಿಗೆ ವಿನಾಯಿತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು ಆಯ್ಕೆಯಾದವರಿಗೆ ಒಂದು ವರ್ಷ ತರಬೇತಿ, ಮತ್ತೊಂದು ವರ್ಷ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಕ್ಲರ್ಕ್ಶಿಪ್ ಗೆ ಆದೇಶಿಸಿದೆ.
2025ರ ಮೇ 20ರಂದು ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ, ನ್ಯಾಯಮೂರ್ತಿ ವಿ. ಮಹಾನಾ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ. ಇದೇ ವೇಳೆ, 2026ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೂ ವಕೀಲಿಕೆ ಅನುಭವದ ವಿನಾಯಿತಿ ವಿಸ್ತರಿಸಬೇಕೆಂಬ ಮನವಿಗೆ ನ್ಯಾಯಪೀಠ ಸಮ್ಮತಿಸಲು ನಿರಾಕರಿಸಿದೆ.
2025ರಿಂದ 2027ರವರೆಗೆ ವಿಶೇಷ ವಿನಾಯಿತಿ
ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪಿನ ಪ್ರಕಾರ, ನ್ಯಾಯಾಂಗ ಸೇವೆಗೆ ಪ್ರವೇಶಿಸುವ ಅಭ್ಯರ್ಥಿಗಳಿಗೆ ವಕೀಲಿಕೆ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಕಡ್ಡಾಯಗೊಳಿಸಲಾಗಿತ್ತು. ಆದರೆ 2026ರ ಆಗಸ್ಟ್ನಲ್ಲಿ Bhumika Trust Vs. Union of India ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ನಿಯಮವನ್ನು ಪರಿಷ್ಕರಿಸಿ, ಮೂರು ವರ್ಷಗಳ ಬದಲಿಗೆ ಒಂದು ವರ್ಷದ ವಕೀಲಿಕೆ ಅನುಭವವನ್ನು ಕಡ್ಡಾಯಗೊಳಿಸಿತು.
2027ರ ಏಪ್ರಿಲ್ 1ರಿಂದ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಒಂದು ವರ್ಷದ ವಕೀಲಿಕೆ ಅನುಭವದ ನಿಯಮ ಅನ್ವಯವಾಗಲಿದೆ. ಆದರೆ 2025ರ ಮೇ 20ರಿಂದ 2027ರ ಮಾರ್ಚ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಒಂದು ಬಾರಿಯ ವಿಶೇಷ ವಿನಾಯಿತಿ ನೀಡಲಾಗಿದೆ.
ಈ ಅವಧಿಯಲ್ಲಿ ಕಾನೂನು ಪದವಿ ಪಡೆದ ಅಭ್ಯರ್ಥಿಗಳು ಒಂದು ವರ್ಷದ ವಕೀಲಿಕೆ ಅನುಭವವಿಲ್ಲದಿದ್ದರೂ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ, ಪದವಿ ಪಡೆದ ದಿನಾಂಕದಿಂದ ಅಧಿಸೂಚನೆ ಹೊರಡಿಸುವ ದಿನಾಂಕದವರೆಗೆ ಒಂದು ವರ್ಷದ ಅವಧಿ ಪೂರ್ಣಗೊಂಡಿರಬೇಕು. ಈ ಅವಧಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಪ್ರತ್ಯೇಕವಾಗಿ Certificate of Practice ಸಲ್ಲಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆಯ್ಕೆಯಾದವರಿಗೆ ಎರಡು ವರ್ಷಗಳ ಪ್ರಾಯೋಗಿಕ ತರಬೇತಿ
ಈ ವಿಶೇಷ ವಿನಾಯಿತಿಯಡಿ ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ನೇರವಾಗಿ ಖಾಯಂ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಿಲ್ಲ. ಮೊದಲ ಒಂದು ವರ್ಷ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯಬೇಕು. ನಂತರ ಮತ್ತೊಂದು ವರ್ಷ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಕ್ಲರ್ಕ್ಶಿಪ್ ಮಾಡಬೇಕು.
ಈ ಪ್ರಕರಣದಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರಾದ ಪಿಂಕಿ ಆನಂದ್ ಅವರು ವಾದ ಮಂಡಿಸಿ, 2026ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೂ ಒಂದು ವರ್ಷದ ವಕೀಲಿಕೆ ಅನುಭವದ ವಿನಾಯಿತಿ ವಿಸ್ತರಿಸಬೇಕೆಂದು ಮನವಿ ಮಾಡಿದರು. ಆದರೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು.
2025ರಲ್ಲಿ ಮೂಲ ತೀರ್ಪು ನೀಡಲಾಗಿತ್ತು. ಪರಿಷ್ಕೃತ ತೀರ್ಪು 2026ರ ಆಗಸ್ಟ್ ನಲ್ಲಿ ಬಂದಾಗ 2025ರಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದರು. ಹೀಗಾಗಿ ಅವರಿಗೆ ಒಂದು ವರ್ಷದ ವಕೀಲಿಕೆ ಅನುಭವವನ್ನು ಹೊಂದಿರುವುದಾಗಿ ಪರಿಗಣಿಸುವ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ವಿವರಿಸಿದರು.
ಅಂತಹ ಅಭ್ಯರ್ಥಿಗಳು ಆ ಒಂದು ವರ್ಷದ ಅವಧಿಯಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿರಬಾರದು. ವಕೀಲರ ಕಚೇರಿಗಳಲ್ಲಿ ಜೂನಿಯರ್ ಗಳಾಗಿ ಕೆಲಸ ಮಾಡಿರಬೇಕು, ನ್ಯಾಯಾಲಯಗಳಿಗೆ ಭೇಟಿ ನೀಡಿರಬೇಕು ಹಾಗೂ ವಕೀಲಿಕೆ ವೃತ್ತಿಯ ಅನುಭವ ಪಡೆದುಕೊಂಡಿರಬೇಕು ಎಂಬ ಉದ್ದೇಶದಿಂದ ಈ ವಿನಾಯಿತಿ ನೀಡಲಾಗಿದೆ. ಆದರೆ 2026ರಲ್ಲಿ ಪದವಿ ಪಡೆದ ಅಭ್ಯರ್ಥಿಗಳಿಗೆ ಇದೇ ವಿನಾಯಿತಿ ನೀಡಲು ಸಾಧ್ಯವಿಲ್ಲ. ಅವರು ಒಂದು ವರ್ಷದ ವಕೀಲಿಕೆ ಅನುಭವ ಪಡೆಯಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳಿಗೆ ಒಂದು ವರ್ಷ ಕೆಲಸದ ಅನುಭವ ಅಗತ್ಯ
ಅರ್ಜಿದಾರರ ಪರ ವಕೀಲರು ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಅನೇಕ ಅಭ್ಯರ್ಥಿಗಳಿದ್ದಾರೆ ಎಂದು ಗಮನ ಸೆಳೆದಾಗ, ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಅಭ್ಯರ್ಥಿಗಳು ಒಂದು ವರ್ಷ ವಕೀಲರ ಕಚೇರಿಗಳಲ್ಲಿ ಕೆಲಸ ಮಾಡಲಿ. ಕೆಲವರು ನಿಮ್ಮ ಕಚೇರಿಯಲ್ಲಿ, ಇನ್ನು ಕೆಲವರು ಬೇರೆ ವಕೀಲರ ಕಚೇರಿಗಳಲ್ಲಿ ಕೆಲಸ ಮಾಡಲಿ. ಒಂದು ವರ್ಷದ ಅವಧಿಯಲ್ಲಿ ಅವರು ಸಾಕಷ್ಟು ಕಲಿಯುತ್ತಾರೆ. ನಂತರ ಅವರು ಪರೀಕ್ಷೆಗೆ ಅರ್ಹರಾಗುತ್ತಾರೆ ಎಂದು ಹೇಳಿದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
