“ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ” : CJI ವಿರುದ್ದ ಹೇಳಿಕೆ: ವಕೀಲನ ವಿರುದ್ದ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮನವಿ
ನವದೆಹಲಿ: ದೇಶದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಅವಹೇಳನಕಾರಿ ವೈಯಕ್ತಿಕ ಹೇಳಿಕೆ ನೀಡಿದ್ದ ವಕೀಲರೊಬ್ಬರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್ಸಿಬಿಎ) ಮನವಿ ಮಾಡಿದೆ.
ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ಕಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರಿದ್ದ ನ್ಯಾಯಪೀಠಕ್ಕೆ ಎಸ್ ಸಿಬಿಎ ಕಾರ್ಯದರ್ಶಿ ಪ್ರಜ್ಞಾ ಬಾಗೇಲ್ ಮತ್ತು ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ ಅವರು ತುರ್ತು ವಿಚಾರಣೆಗೆ ಮನವಿ ಮಾಡಿದರು.
ವಕೀಲ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಅವರ ಒಪ್ಪಿಗೆ ಪಡೆದಿರುವುದಾಗಿ ಎಸ್ಸಿಬಿಎ ಪದಾಧಿಕಾರಿಗಳು ನ್ಯಾಯಪೀಠಕ್ಕೆ ತಿಳಿಸಿದರು. ಹೇಳಿಕೆ ನೀಡಿರುವ ವಕೀಲರು ಸಿಜೆಐ ವಿರುದ್ಧ ಈ ಹಿಂದೆಯೂ ಇದೇ ರೀತಿಯ ಹೇಳಿಕೆಗಳನ್ನು ನೀಡಿರುವ ವಿಡಿಯೊ ದಾಖಲೆಗಳು ತಮ್ಮ ಬಳಿ ಇವೆ ಎಂದೂ ಹೇಳಿದರು.
ಮಂಗಳವಾರ ವಿಚಾರಣೆಗೆ ಬಂದಿರುವ ಅರ್ಜಿಯನ್ನು ಪತ್ರಕರ್ತ ನಿಖಿಲ್ ವಾಗ್ಲೆ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣಗಳೊಂದಿಗೆ ಸೇರಿಸುವಂತೆಯೂ ಅವರು ಕೋರಿದರು.
ಏನಿದು ಪ್ರಕರಣ
ಸೋಮವಾರ ತುರ್ತು ವಿಚಾರಣೆಗೆ ಮನವಿ ಸಲ್ಲಿಸುವ ವೇಳೆ ಸಿಜೆಐ ಸೂರ್ಯಕಾಂತ್ ವಿರುದ್ಧ ವಕೀಲರೊಬ್ಬರು ವೈಯಕ್ತಿಕ ಟೀಕೆ ಮಾಡಿದ್ದರು. ನವೆಂಬರ್ 2ರಂದು ಸಿಜೆಐ ಕಚೇರಿಗೆ ತಮ್ಮ ಪ್ರಕರಣದ ದಾಖಲೆಗಳನ್ನು ಸಲ್ಲಿಸಿದ್ದರೂ 15 ದಿನ ಕಳೆದರೂ ಯಾವುದೇ ಉತ್ತರ ಬಂದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ವೇಳೇ ಕಾಯುವಂತೆ ಸಿಜೆಐ ಸೂಚಿಸಿದಾಗ, ‘ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆ ಹುದ್ದೆಗೆ ಬೇಕಾದ ಪ್ರಾಮಾಣಿಕತೆ ನಿಮ್ಮಲ್ಲಿಲ್ಲ’ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ನಂತರ ಕಲಾಪದ ಆಡಿಯೊ ಮತ್ತು ವಿಡಿಯೊ ಪ್ರಸಾರ ಸ್ಥಗಿತಗೊಳಿಸಲಾಗಿತ್ತು. ಟೀಕೆ ಮಾಡಿದ್ದ ವಕೀಲರನ್ನ ಭದ್ರತಾ ಸಿಬ್ಬಂದಿ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
