19/11/2026

Law Guide Kannada

Online Guide

ರಾಜ್ಯ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್: ನಿತ್ಯ ನಗದು ಘೋಷಣೆ, ಚಲನವಲನ ನಮೂದು ಕಡ್ಡಾಯ

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಮತ್ತು ಪಾರದರ್ಶಕತೆ ಹೆಚ್ಚಿಸಲು ಮಹತ್ವದ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರ ಇದೀಗ ಸರ್ಕಾರಿ ನೌಕರರಿಗೆ ಹೊಸ ನಿಯಮವನ್ನ ಜಾರಿ ಮಾಡುತ್ತಿದೆ.

ಹೌದು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇನ್ಮುಂದೆ ತಮ್ಮ ದೈನಂದಿನ ಚಲನವಲನ ಹಾಗೂ ತಮ್ಮ ಬಳಿ ಇರುವ ನಗದು ಮೊತ್ತದ ವಿವರಗಳನ್ನು ಕಡ್ಡಾಯವಾಗಿ ಏಂಂಒS ಆಧಾರಿತ “ಕರ್ತವ್ಯ” ಮೊಬೈಲ್ ಅಪ್ಲಿಕೇಶನ್ ನಲ್ಲಿಯೇ ದಾಖಲಿಸಬೇಕೆಂದು ಪ್ರಜಾಸೇವಾ ಇಲಾಖೆ ಆದೇಶ ಹೊರಡಿಸಿದೆ. ಡಿಸೆಂಬರ್ 1 ರಿಂದ ಈ ನಿಯಮವು ಅಧಿಕೃತವಾಗಿ ಜಾರಿಗೆ ಬರಲಿದೆ.

ಹೈಕೋರ್ಟ್ ನಿರ್ದೇಶನದ ಪ್ರಕಾರ, ಸರ್ಕಾರಿ ನೌಕರರು ನಿತ್ಯ ಕಚೇರಿಗೆ ಹಾಜರಾಗುವ ವೇಳೆ ತಮ್ಮ ಬಳಿ ಇರುವ ವೈಯಕ್ತಿಕ ನಗದು ಮೊತ್ತವನ್ನು ನಗದು ವಹಿಯಲ್ಲಿ ನಮೂದಿಸುವುದು ಕಡ್ಡಾಯವಾಗಿತ್ತು. ಅದೇ ರೀತಿ, ಕಚೇರಿ ವೇಳೆಯಲ್ಲಿ ಅನ್ಯ ಕರ್ತವ್ಯಗಳಿಗಾಗಿ ಹೊರಗೆ ತೆರಳುವಾಗ ಚಲನವಲನ ವಹಿಯಲ್ಲಿ ದಾಖಲಿಸಿ ಮೇಲಾಧಿಕಾರಿಗಳ ಅನುಮೋದನೆ ಪಡೆಯಬೇಕೆಂಬ ನಿಯಮವೂ ಜಾರಿಯಲ್ಲಿದೆ. ಆದರೆ, ಹಲವು ಕಚೇರಿಗಳಲ್ಲಿ ಈ ಭೌತಿಕ ರಿಜಿಸ್ಟರ್ ಗಳನ್ನು ಸರಿಯಾಗಿ ನಿರ್ವಹಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ಲೋಪವನ್ನು ಸರಿಪಡಿಸಲು ಹಾಗೂ ಕಾಗದ ರಹಿತ ಆಡಳಿತಕ್ಕೆ ವೇಗ ನೀಡಲು, ಈ ಎರಡೂ ಪ್ರಕ್ರಿಯೆಗಳನ್ನು ಈಗ ಡಿಜಿಟಲ್ ರೂಪಕ್ಕೆ ತರಲಾಗಿದ್ದು ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮಗಳು ಮತ್ತು ಮಂಡಳಿಗಳ ನೌಕರರ ಹಾಜರಾತಿಗಾಗಿ ಜಾರಿಗೆ ತರಲಾಗಿದ್ದ “ಕರ್ತವ್ಯ” ಮೊಬೈಲ್ ಅಪ್ಲಿಕೇಶನ್ ನಲ್ಲಿಯೇ ಈಗ ಈ ಹೊಸ ಸೌಲಭ್ಯವನ್ನು ಅಳವಡಿಸಲಾಗಿದೆ.

ನೌಕರರು ಕಚೇರಿಗೆ ಪ್ರವೇಶಿಸುತ್ತಿದ್ದಂತೆ ತಮ್ಮ ಬಳಿ ಇರುವ ನಗದನ್ನು ಇದರಲ್ಲಿ ನಮೂದಿಸಬೇಕು. ಜೊತೆಗೆ ಅಧಿಕೃತ ಕೆಲಸಗಳಿಗಾಗಿ ಕಚೇರಿಯಿಂದ ಹೊರಗೆ ಹೋಗುವ ಸಂದರ್ಭಗಳಲ್ಲೂ ಆ್ಯಪ್ ಮೂಲಕವೇ ಮಾಹಿತಿ ದಾಖಲಿಸಿ ಅನುಮತಿ ಪಡೆಯಬೇಕಾಗುತ್ತದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಈ ನಮೂದುಗಳನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂಬುದನ್ನು ಆಯಾ ಇಲಾಖಾ ಮುಖ್ಯಸ್ಥರು ಹಾಗೂ ಮೇಲಾಧಿಕಾರಿಗಳು ನಿಯಮಿತವಾಗಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನಿಯಮ ಡಿಸೆಂಬರ್ 1 ರಿಂದ ಜಾರಿಗೆ ಬರಲಿದ್ದು ಕಟ್ಟುನಿಟ್ಟಾಗಿ ಪಾಲಿಸದ, ಆ್ಯಪ್ ನಲ್ಲಿ ವಿವರ ದಾಖಲಿಸಲು ವಿಫಲರಾಗುವ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದ ಮೂಲಕ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.