20/11/2026

Law Guide Kannada

Online Guide

ಕೇಸ್ ನಿಂದ ಖುಲಾಸೆಯಾದ್ರೂ 7 ವರ್ಷ ಜೈಲಿನಲ್ಲೇ ಕಳೆದ ವ್ಯಕ್ತಿ: ಸುಪ್ರೀಂ ಕಳವಳ: 30 ಲಕ್ಷ ಪರಿಹಾರಕ್ಕೆ ಆದೇಶ

ನವದೆಹಲಿ (ನ.18): ಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್ ನಿಂದ ಖುಲಾಸೆಯಾಗಿದ್ದರೂ (ನಿರ್ದೋಷಿ ಎಂದು ಸಾಬೀತಾಗಿದ್ದರೂ), ಅಧಿಕಾರಿಗಳ ಸಂವಹನ ಲೋಪದಿಂದಾಗಿ 7 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದ ವ್ಯಕ್ತಿಯೊಬ್ಬರಿಗೆ 30 ಲಕ್ಷ ರೂ.ಪರಿಹಾರ ನೀಡುವಂತೆ ಛತ್ತೀಸ್ಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಛತ್ತೀಸ್ಗಢದ ದೇವಿಲಾಲ್ ಗೊಂಡ್ ಕೊಲೆ ಪ್ರಕರಣದಲ್ಲಿ ಸಿಲುಕಿ ನಂತರ ಹೈಕೋರ್ಟ್ ಖುಲಾಸೆಗೊಳಿಸಿದರೂ ಅಧಿಕಾರಿಗಳ ಲೋಪದಿಂದ 7 ವರ್ಷಗಳ ಕಾಲ ಮತ್ತೆ ಜೈಲಿನಲ್ಲೇ ಕೊಳೆಯುವ ಸ್ಥಿತಿ ಬಂದಿತ್ತು. ಈ ವ್ಯಕ್ತಿಯ ಸ್ಥಿತಿಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದ್ದು ಅವರಿಗೆ ₹30 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ಈ ಘಟನೆಯನ್ನು ‘ಸಾಂಸ್ಥಿಕ ನಿರಾಸಕ್ತಿ’ (Institutional apathy) ಎಂದು ಕರೆದಿರುವ ಸುಪ್ರೀಂಕೋರ್ಟ್, ‘ವ್ಯವಸ್ಥೆ ನಿಧಾನವಾಗಿಲ್ಲ, ಬದಲಾಗಿ ಸಂಪೂರ್ಣ ಮುರಿದುಹೋಗಿದೆ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.

ಅಮೂಲ್ಯ ಯೌವನ ಕಳೆದುಕೊಂಡ ಯುವಕ
ನ್ಯಾಯಮೂರ್ತಿಗಳಾದ ಅಗಸ್ಟೀನ್ ಜಾರ್ಜ್ ಮಸಿಹ್ (Augustine George Masih) ಮತ್ತು ಸಂಜೀವ್ ಸಚ್ದೇವ (Sanjeev Sachdeva) ಅವರನ್ನೊಳಗೊಂಡ ನ್ಯಾಯಪೀಠವು, ಅಕ್ರಮ ಅಥವಾ ತಪ್ಪು ಸೆರೆವಾಸಕ್ಕೆ (Wrongful incarceration) ಒಳಗಾದ ವ್ಯಕ್ತಿಗಳಿಗೆ ಪರಿಹಾರ ನೀಡಲು ಶಾಸನಬದ್ಧ ವ್ಯವಸ್ಥೆ ಇಲ್ಲದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಖುಲಾಸೆ ಆದೇಶವು ಜೈಲು ಅಧಿಕಾರಿಗಳಿಗೆ ತಲುಪಲು ವಿಫಲವಾದ ‘ಸಂವಹನ ಲೋಪ’ವೇ (Communication lapse) ಅವರ ನಿರಂತರ ಜೈಲುವಾಸಕ್ಕೆ ಕಾರಣ. ಸಕಾಲದಲ್ಲಿ ಅವರ ಬಿಡುಗಡೆಯನ್ನು ಖಚಿತಪಡಿಸುವಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆ ವಿಫಲವಾಗಿದೆ ಎಂದು ಪೀಠ ತಿಳಿಸಿತು.

ಗೊಂಡ್ ಅವರು ಖುಲಾಸೆಯಾದಾಗ ಅವರಿಗೆ ಸುಮಾರು 28 ವರ್ಷ ವಯಸ್ಸಾಗಿತ್ತು, ಆದರೆ ಅವರು ಬಿಡುಗಡೆಯಾಗುವ ವೇಳೆಗೆ 35 ವರ್ಷ ವಯಸ್ಸಾಗಿತ್ತು ಎಂಬುದನ್ನು ನ್ಯಾಯಪೀಠ ಗಮನಿಸಿತು. ಆ ಏಳು ವರ್ಷಗಳಲ್ಲಿ ಅವರು ತಮ್ಮ ಸ್ವಾತಂತ್ರ್ಯ, ಜೀವನೋಪಾಯ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಅವಕಾಶಗಳನ್ನು ಕಳೆದುಕೊಂಡರು; ಜೊತೆಗೆ ದೀರ್ಘಕಾಲದ ಸೆರೆವಾಸದ ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನು ಅನುಭವಿಸಿದರು.

2012ರಿಂದ 2025 ಜೈಲಿನಲ್ಲಿ ಕಳೆದ ವ್ಯಕ್ತಿ
ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೇವಿಲಾಲ್ ಗೊಂಡ್ ಅವರನ್ನು ಡಿಸೆಂಬರ್ 2012ರಲ್ಲಿ ಬಂಧಿಸಲಾಗಿತ್ತು. ಆಗಸ್ಟ್ 2013ರಲ್ಲಿ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. 2018ರಲ್ಲಿ ಹೈಕೋರ್ಟ್ ಅವರ ಶಿಕ್ಷೆಯನ್ನು ರದ್ದುಗೊಳಿಸಿ ಖುಲಾಸೆಗೊಳಿಸಿತ್ತು. ಆದೇಶ ತಲುಪದ ಕಾರಣ 7 ವರ್ಷ ಜೈಲಿನಲ್ಲೇ ಇದ್ದ ಗೊಂಡ್ ಅವರು ಕೊನೆಗೂ ಮೇ 2025ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.

ಜೈಲು ಅಧಿಕಾರಿಗಳು ಮತ್ತು ಕಾನೂನು ನೆರವು (Legal aid) ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯೇ ಈ ದೀರ್ಘಕಾಲದ ಸೆರೆವಾಸಕ್ಕೆ ಕಾರಣ ಎಂದು ಛತ್ತೀಸ್ ಗಢ ಸರ್ಕಾರ ಹೇಳಿದೆ. 2018ರಲ್ಲಿ ಮೇಲ್ಮನವಿಯ ಸ್ಥಿತಿಗತಿ ಕುರಿತು ಮಾಹಿತಿ ಕೋರಿ ಜೈಲು ಅಧೀಕ್ಷಕರು ಬರೆದಿದ್ದ ಪತ್ರಗಳಿಗೆ ಯಾವುದೇ ಉತ್ತರ ಬಂದಿರಲಿಲ್ಲ ಎಂದು ಸರ್ಕಾರ ತಿಳಿಸಿದೆ.

“ಸಂವಿಧಾನದ 21ನೇ ವಿಧಿಯು (Article 21) ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಹೊರತುಪಡಿಸಿ ಅದನ್ನು ಕಸಿದುಕೊಳ್ಳುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಿರುತ್ತದೆ” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಪೀಠ ಸ್ಪಷ್ಟಪಡಿಸಿದೆ.

ಸಂವಿಧಾನದ 32 ಮತ್ತು 226ನೇ ವಿಧಿಗಳ ಅಡಿಯಲ್ಲಿ ಸಾರ್ವಜನಿಕ ಕಾನೂನು ಪ್ರಕ್ರಿಯೆಗಳಲ್ಲಿ ಹಣಕಾಸಿನ ಪರಿಹಾರವನ್ನು ನೀಡುವುದು ಇಂತಹ ಉಲ್ಲಂಘನೆಗಳಿಗೆ ಪರಿಣಾಮಕಾರಿ ಪರಿಹಾರವಾಗಿದೆ; ಇದು ಸಂತ್ರಸ್ತರಿಗೆ ಸಾಂತ್ವನ ನೀಡುವುದರ ಜೊತೆಗೆ ಸಾಂಸ್ಥಿಕ ನಿರಾಸಕ್ತಿಯ ವಿರುದ್ಧ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ. ಇಂತಹ ಲೋಪಗಳು ಮರುಕಳಿಸದಂತೆ ತಡೆಯಲು ‘ಆನ್ಲೈನ್ ಕ್ರಿಮಿನಲ್ ಜಸ್ಟೀಸ್ ಇಕೋಸಿಸ್ಟಮ್’ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್ಗಳಿಗೆ ಸೂಚಿಸಿದೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.