ಸರ್ಕಾರಿ ನೌಕರರ ವಿರುದ್ಧದ ಖಾಸಗಿ ದೂರು: ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಹೈಕೋರ್ಟ್ ತಾಕೀತು
ಬೆಂಗಳೂರು: ‘ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಖಾಸಗಿ ದೂರುಗಳ ವಿಚಾರಣೆ ವೇಳೆ ನ್ಯಾಯಿಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಶಾಸನಬದ್ಧ ಕಡ್ಡಾಯ ರಕ್ಷಣಾ ನಿಯಮಗಳನ್ನು, ಲೋಪ ಉಂಟಾಗದಂತೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.
ಬಂಡೆಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಶಿವಶಂಕರ್ ಎಂಬುವವರು ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ತನಗೆ ಜಾರಿಗೊಳಿಸಿರುವ ನೋಟಿಸ್ ರದ್ದುಪಡಿಸಬೇಕು’ ಎಂದು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದಿದ್ದರೂ ದೂರುದಾರರ ಹೇಳಿಕೆ ದಾಖಲಿಸಿಕೊಂಡು ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿರುವ ಆದೇಶ ಕಾನೂನು ಬಾಹಿರ’ ಎಂದು ಉಲ್ಲೇಖಿಸಿತು. ಹಾಗೆಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾರಿಗೊಳಿಸಿದ್ದ ನೋಟಿಸ್ ಅನ್ನು ರದ್ದುಪಡಿಸಿ ‘ಪ್ರಕರಣವನ್ನು ಕಾನೂನಿಗೆ ಅನುಗುಣವಾಗಿ ಸೂಕ್ತ ಹಂತದಿಂದ ಹೊಸದಾಗಿ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಿ’ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಆದೇಶಿಸಿತು.
ಏನಿದು ಘಟನೆ…?
‘ಮಂಗಮ್ಮನಪಾಳ್ಯದಲ್ಲಿ ನಡೆದಿದ್ದ ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆ ನನಗೆ ಮತ್ತು ಇತರರಿಗೆ ಶಿವಶಂಕರ್ ಅಸಹ್ಯಕರ ಭಾಷೆ ಬಳಸಿ ನಿಂದಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗಿ ನೆರೆದಿದ್ದವರಿಗೆ ತೊಂದರೆ ಉಂಟಾಗಿದೆ’ ಎಂದು ಆರೋಪಿಸಿ ಎಂ.ಡಿ.ಅನಿಲ್ ಕುಮಾರ್ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ಅನುಸಾರ ನಗರದ 9ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಶಿವಶಂಕರ್ ವಿರುದ್ಧ ನ್ಯಾಯಿಕ ಪ್ರಕ್ರಿಯೆಗೆ ಮುಂದಾಗಿ ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಂಡು ಮೂರನೇ ಆರೋಪಿಯಾದ ಶಿವಶಂಕರ್ ಗೆ (ಆರೋಪಿ-3) ನೋಟಿಸ್ ಜಾರಿಗೊಳಿಸಿತ್ತು.
ಈ ನೋಟಿಸ್ ಜಾರಿ ಪ್ರಶ್ನಿಸಿ ಶಿವಶಂಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಆರ್.ರಂಗನಾಥ ರೆಡ್ಡಿ, ‘ಇಲಾಖಾ ಮಂಜೂರಾತಿ ಇಲ್ಲದೆ, ಸಕ್ಷಮ ನ್ಯಾಯಾಲಯವೊಂದು ಅಪರಾಧವನ್ನು ಪರಿಗಣಿಸಿ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ಜಾರಿ ಮಾಡಲಾಗಿರುವ ನೋಟಿಸ್ ಮ್ಯಾಜಿಸ್ಟ್ರೇಟ್ ಅಧಿಕಾರ ವ್ಯಾಪ್ತಿ ಮೀರಿದ್ದಾಗಿದೆ’ ಎಂದು ತಿಳಿಸಿದರು.
ಈ ವಾದವನ್ನ ಪುರಸ್ಕರಿಸಿದ ನ್ಯಾಯಪೀಠ, ‘ಸರ್ಕಾರಿ ನೌಕರರ ವಿರುದ್ಧ ಅವರ ಅಧಿಕೃತ ಕರ್ತವ್ಯಕ್ಕೆ ಸಂಬಂಧಿಸಿದ ಆರೋಪಗಳ ಕುರಿತಂತೆ ಮುಂದುವರಿಯುವ ಮೊದಲು, ಸಂಬಂಧಪಟ್ಟ ಮೇಲಧಿಕಾರಿಯಿಂದ ಘಟನೆಯ ಕುರಿತು ಪೂರ್ವಾನುಮತಿ ಪಡೆಯುವುದು ಹಾಗೂ ಆರೋಪಿತ ಸರ್ಕಾರಿ ನೌಕರರಿಗೆ ತಮ್ಮ ವಿವರಣೆ ನೀಡಲು ಅವಕಾಶ ಕಲ್ಪಿಸುವುದು ಕಡ್ಡಾಯ’ ಎಂದು ತಾಕೀತು ಮಾಡಿತು.
ಹಾಗೆಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿದ್ದ ನೋಟಿಸ್ ರದ್ದುಪಡಿಸಿರುವ ನ್ಯಾಯಪೀಠವು, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023ರ (ಬಿಎನ್ಎಸ್ಎಸ್) ಕಲಂ 223(2)ರ ಅಡಿಯಲ್ಲಿ ನಿಗದಿಪಡಿಸಿರುವ ಕಡ್ಡಾಯವಾದ ಕಾನೂನು ಪ್ರಕ್ರಿಯೆಯನ್ನು ಪಾಲಿಸಲೇಬೇಕು’ ಎಂದು ಎಚ್ಚರಿಕೆ ನೀಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
